ಸುಳ್ಯ: ಬೆಳ್ಳಾರೆ ಸಮೀಪದ ನೆಟ್ಟಾರಿನ ಮೊಗಪ್ಪೆ ಕೆರೆಯ ಅಭಿವೃದ್ಧಿಗೆ ಮಂಗಳವಾರ ಚಾಲನೆ ನೀಡಲಾಯಿತು. ಹಿರಿಯ ಕೃಷಿಕರಾದ ಕೆ.ಸುಬ್ಬರಾವ್ ಕುತ್ಯಾಡಿ ತೆಂಗಿನ ಕಾಯಿ ಒಡೆಯುವುದರ ಮೂಲಕ ಶತಮಾನದ ಇತಿಹಾಸವಿರುವ 10 ಎಕ್ರೆ ವಿಸ್ತೀರ್ಣದಲ್ಲಿ ಹರಡಿರುವ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ಮನ್ಮಥ, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ಶಕುಂತಳಾ ನಾಗರಾಜ್, ಪೆರುವಾಜೆ ಗ್ರಾ.ಪಂ.ಅಧ್ಯಕ್ಷೆ ಅನುಸೂಯ, ಬೆಳ್ಳಾರೆ ಗ್ರಾ.ಪಂ.ಉಪಾಧ್ಯಕ್ಷ ಎನ್.ಎಸ್.ಡಿ ವಿಠಲದಾಸ್, ಜಿ.ಪಂ.ಮಾಜಿ ಸದಸ್ಯ ಚಂದ್ರಶೇಖರ ಕಾಮತ್, ಪ್ರಮುಖರಾದ ಸುಬ್ರಹ್ಮಣ್ಯ ಜೋಷಿ, ಸುರೇಶ್ಕುಮಾರ್ ಶೆಟ್ಟಿ, ಸತ್ಯನಾರಾಯಣ ಕೋಡಿಬೈಲು, ಮಾಧವ ಗೌಡ ಕಾಮಧೇನು, ಕುಶಾಲಪ್ಪ ಪೆರುವಾಜೆ, ಮೋನಪ್ಪ ತಂಬಿನಮಕ್ಕಿ, ಪ್ರಸಾದ್ ಸೇವಿತ, ದಿಲೀಪ್, ಪ್ರವೀಣ್, ವಾಸು ನೆಟ್ಟಾರು, ಮುಂಡಪ್ಪ ಗೌಡ, ಪ್ರೇಮನಾಥ ಶೆಟ್ಟಿ, ಪ್ರಭಾಕರ ಆಳ್ವ, ರಾಮಚಂದ್ರ ಭಟ್ ಮೊಗಪ್ಪೆ, ಪದ್ಮನಾಭ ಬೀಡು ಮತ್ತಿತರರು ಉಪಸ್ಥಿತರಿದ್ದರು.
ಪಿಲಿಕುಳ ಮಾದರಿಯಲ್ಲಿ ಅಭಿವೃದ್ಧಿ:
ಪ್ರಥಮ ಹಂತದಲ್ಲಿ ಮೊಗಪ್ಪೆ ಕೆರೆಯಲ್ಲಿ ತುಂಬಿರುವ ಹೋಳನ್ನು 15 ಅಡಿ ಆಳಕ್ಕೆ ತೆಗೆದು ಅದನ್ನು ಸ್ವಚ್ಛಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಹಳೆಯ ವೈಭವವನ್ನು ಮರಳಿ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ಮನ್ಮಥ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಿಲಿಕುಳ ಮಾದರಿಯಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಕೆರೆಯಿಂದ ಬೆಳ್ಳಾರೆ, ಪೆರುವಾಜೆ ಮತ್ತಿತರ ಕಡೆಗಳಿಗೆ ನೀರು ಸರಬರಾಜು ಮಾಡುವುದರ ಜೊತೆಗೆ ಕೆರೆಯಲ್ಲಿ ಬೋಟಿಂಗ್, ಕಾರಂಜಿ, ಬದಿಯಲ್ಲಿ ಗಾರ್ಡನ್, ರೆಸಾರ್ಟ್ ಗಳನ್ನು ಸ್ಥಾಪಿಸಿ ಮೂಲಕ ಆಕರ್ಷಕ ತಾಣವನ್ನಾಗಿ ಮಾಡುವ ಯೋಚನೆ ಇದೆ ಎಂದು ಅವರು ತಿಳಿಸಿದರು. ಬೆಳ್ಳಾರೆ ಗ್ರಾಮದ ನೆಟಾರು ಮೊಗಪ್ಪೆ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯ ನೇತೃತ್ವದಲ್ಲಿ ಕೆರೆಯ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜೆಸಿಬಿ, ಹಿಟಾಚಿ ಬಳಸಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದ್ದು ಈಗಾಗಲೇ 300 ಗಂಟೆಗಳ ಕೆಲಸಕ್ಕೆ ನೋಂದಣಿ ಆಗಿದೆ ಎಂದು ಅವರು ತಿಳಿಸಿದರು.