ಬಂಟ್ವಾಳ : ಇತ್ತೀಚೆಗೆ ಹತ್ಯೆಗೀಡಾದ ಕರೋಪಾಡಿ ಗ್ರಾ.ಪಂ.ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕರೋಪಾಡಿ ಅವರ ಮನೆಗೆ ಗೃಹಸಚಿವ ಪರಮೇಶ್ವರ್ ಭೇಟಿ, ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸಮ್ಮುಖದಲ್ಲಿ ಜಲೀಲ್ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿದ ಗೃಹಸಚಿವರು, ಆರೋಪಿಗಳ ವಿರುದ್ಧ ಕಠಿನ ಕ್ರಮಕೈಗೊಳ್ಳಲಾಗುವುದು. ಕುಟುಂಬಕ್ಕೆ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಲು ಉತ್ಸಾಹ ತೋರದಿದ್ದ ಅವರು ಈ ಘಟನೆಯ ಸಮಗ್ರ ಮಾಹಿತಿಗಳನ್ನು ಪಡೆದುಕೊಂಡು ಮಂಗಳೂರಿನಲ್ಲಿ ಮಾಧ್ಯಮಗಳಿಗೆ ವಿವರ ನೀಡಲಾಗುವುದು ಎಂದು ತಿಳಿಸಿದರು. ಆದರೆ, ಪತ್ರಕರ್ತರು ಕನ್ಯಾನ, ಕರೋಪಾಡಿ ಗ್ರಾಮವು ಗಡಿಭಾಗದಲ್ಲಿದ್ದು ಇಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸಿ, ಆರೋಪಿಗಳು ಕೇರಳಕ್ಕೆ ಓಡಿಹೋಗುತ್ತಿದ್ದಾರೆ. ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದಾಗ ಈ ಬಗ್ಗೆ ಚರ್ಚೆ ನಡೆಸಿ, ಮಾತನಾಡುತ್ತೇನೆ ಎಂದರು.
ಕನ್ಯಾನದಲ್ಲಿ ಔಟ್ ಪೋಸ್ಟ್ ಒದಗಿಸುವ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಅರ್ಜಿ ಬಂದಿದೆ. ಆಮೇಲೆ ಅಧಿಕಾರಿಗಳೊಡನೆ ಚರ್ಚಿಸಿ, ನಿರ್ಧರಿಸಲಾಗುವುದು ಎಂದರು. ವಿಧಾನಸಭಾ ಸದಸ್ಯ ಐವನ್ ಡಿಸೋಜಾ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಸದಸ್ಯ ವೆಂಕಟೇಶ್ ಕುಮಾರ್ ಬದಿಕೋಡಿ, ಅಲ್ಪಸಂಖ್ಯಾಕ ನಿಗಮದ ಎಂ.ಎ.ಗಫೂರ್, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಕೆ.ಪಿ.ಅಬ್ದುಲ್ರಹಿಮಾನ್, ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ಬಂಟ್ವಾಳ ತಾ.ಇಂಟಕ್ ಅಧ್ಯಕ್ಷ ರಮಾನಾಥ ವಿಟ್ಲ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕ ವಿಭಾಗ ಅಧ್ಯಕ್ಷ ವಿ.ಎ.ರಶೀದ್, ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಜಿಲ್ಲಾ ಎಸ್.ಪಿ. ಭೂಷಣ್ ರಾವ್ ಬೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ವಿಟ್ಲ ಠಾಣಾಧಿಕಾರಿ ನಾಗರಾಜ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.