ಕಾಸರಗೋಡು: ಹಾಡಹಗಲೇ ಅಂಗಡಿಗೆ ನುಗ್ಗಿದ ತಂಡವೊಂದು ವ್ಯಾಪಾರಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರ ಮಧ್ಯಾಹ್ನ ಕಯ್ಯಾರ್ ಮಂಡೆಕಾಪು ಎಂಬಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಮಂಡೆಕಾಪು ಜಿ. ಕೆ ಜನರಲ್ ಸ್ಟೋರ್ ನ ಮಾಲಕ ರಾಮಕೃಷ್ಣ ಮೂಲ್ಯ (46) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವ್ಯಾಪಾರಿ ಸೋಗಿನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ. ಕಾರಿನಲ್ಲಿ ಆಗಮಿಸಿದ ಇಬ್ಬರು ಅಂಗಡಿಗೆ ನುಗ್ಗಿ ಮಚ್ಚಿನಿಂದ ಕಡಿದಿದ್ದು, ಬಳಿಕ ತಂಡವು ಅದೇ ಕಾರಿನಲ್ಲಿ ಪರಾರಿಯಾಗಿದೆ. ಕಾರಿನಲ್ಲಿ ಒಟ್ಟು ಐವರು ಬಂದಿದ್ದು, ಮೂವರು ಕಾರಿನಲ್ಲಿ ಇದ್ದರು ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮಕೃಷ್ಣರವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ಕೊಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು. ಕೃತ್ಯಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಜಿ ಸಿಮೋನ್, ಡಿ ವೈ ಎಸ್.ಪಿ.ವಿ. ಸುಕುಮಾರನ್, ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಮನೋಜ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರಿಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಪ್ಪು ಬಣ್ಣದ ಆಲ್ಟೋ ಕಾರಿನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ನಾಲ್ಕು ದಿನಗಳ ಅವಧಿಯಲ್ಲಿ ಕುಂಬಳೆ ಠಾಣಾ ಪರಿಸರದಲ್ಲಿ ನಡೆದಿರುವ ಎರಡನೇ ಬರ್ಬರ ಕೊಲೆಯಾಗಿದ್ದು, ಏಪ್ರಿಲ್ 30 ರಂದು ಕುಂಬಳೆಯಲ್ಲಿ ಅಬ್ದುಲ್ ಸಲಾಂ ನನ್ನು ತಲೆ ಕಡಿದು ಕೊಲೆ ಮಾಡಲಾಗಿತ್ತು. ಈ ನೆನಪು ಮಾಸುವ ಮೊದಲೇ ಕಯ್ಯಾರ್ ಮಂಡೆ ಕಾಪು ಎಂಬಲ್ಲಿ ಅಂಗಡಿ ಮಾಲಕ ರಾಮಕೃಷ್ಣ ಎಂಬವರನ್ನು ಹಾಡ ಹಗಲೇ ಅಂಗಡಿ ನುಗ್ಗಿ ಬರ್ಬರವಾಗಿ ಕೊಲೆಮಾಡಲಾಗಿದೆ.
ಅಬ್ದುಲ್ ಸಲಾಂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ ದಿನವೇ ಇನ್ನೊಂದು ಕೊಲೆ ನಡೆದಿದೆ. ಉಪ್ಪಳ, ಕುಂಬಳೆ ಪರಿಸರದಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳು ಜನತೆಯನ್ನು ಬೆಚ್ಚಿ ಬೀಳಿಸಿದೆ.
ರಾಮಕೃಷ್ಣ ರವರು ಅಂಗಡಿಯ ಹಿಂಬದಿಯಲ್ಲಿ ಹೊಸ ಮನೆ ನಿರ್ಮಿಸಿದ್ದು, ಮೇ29 ರಂದು ಗ್ರಹ ಪ್ರವೇಶಕ್ಕೆ ದಿನ ನಿಗದಿಯಾಗಿತ್ತು. ಗ್ರಹ ಪ್ರವೇಶದ ಸಿದ್ಧತೆ ನಡುವೆ ಬರ್ಬರ ಕೊಲೆ ನಡೆದಿದೆ.