ಬೆಳ್ತಂಗಡಿ: ಸುಮೂಹೂರ್ತ ಸಾವಧಾನ ಎಂಬ ವೇದಘೋಷದೊಂದಿಗೆ ಧರ್ಮಸ್ಥಳದಲ್ಲಿ ಗುರುವಾರ ಗೋಧೂಳಿ ಲಗ್ನದಲ್ಲಿ ನಡೆದ 46 ನೇ ಸಾಮೂಹಿಕ ಉಚಿತ ವಿವಾಹದಲ್ಲಿ 102 ಜೋಡಿ ವಧುವರರು ಹಸೆಮಣೆಗೇರಿದರು.
ವಧೂವರರಿಗೆ ಆಶೀರ್ವದಿಸಿ ಮಾತನಾಡಿದ ಕನ್ನಡ ಚಲನ ಚಿತ್ರ ನಟ ಯಶ್ಅವರು, ನೀವೆಲ್ಲರೂ ಸರಳವಾಗಿ, ಶ್ರೇಷ್ಠವಾಗಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ವಿವಾಹ ಬಂಧನಕ್ಕೊಳಗಾಗಿರುವುದು ಸಂತಸ ತಂದಿದೆ. ಪತಿ-ಪತ್ನಿಯವರು ಜೀವನಪೂರ್ತಿ ಮನಸಾರೆ ಸದಾಜೊತೆಗಿರುತ್ತೇವೆ ಎಂಬ ಗಾಢ ಭಾವನೆ ಅತೀ ಮುಖ್ಯ. ಈ ಮನೋಭಾವವಿದ್ದರೆ ಜೀವನಪೂರ್ತಿ ಸಂತಸದ ಬಾಳು ನಮ್ಮದಾಗುತ್ತದೆ. ನಾನು ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನಷ್ಟೇ. ನಿಮಗೆಲ್ಲ ಹೆಚ್ಚು ಹೇಳುವಷ್ಟು ಅನುಭವ ನನಗಾಗಿಲ್ಲ ಎಂದು ಹೇಳಿದ್ದು,
ನನ್ನ ಭಯದ ಬದುಕಿಗೆ ಭರವಸೆಯ ಬೆಳಕನ್ನು ತೋರಿದುದು, ಧೈರ್ಯವನ್ನುತುಂಬಿದುದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನ ಎಂದು ಮನಸ್ಸಿನ ಭಾವನೆಯನ್ನು ವ್ಯಕ್ತ ಪಡಿಸಿದ ಯಶ್ ಅವರು ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧೀ ಯೋಜನೆ ರಾಜ್ಯದ ಹಲವಾರು ಕೆರೆಗಳನ್ನು ಅಭಿವೃದ್ಧಿ ಪಡಿಸಿದೆ. ನಾನು ಈ ಕಾರ್ಯವನ್ನು ಕೈಗೆತ್ತಿಕೊಂಡಾಗ ನನಗೆ ಮೊದಲು ಕಂಡದ್ದು ಧರ್ಮಸ್ಥಳದ ಯೋಜನೆ. ಅವರು 100ಕ್ಕೂ ಹೆಚ್ಚು ಕೆರೆಗಳ ಹೂಳೆತ್ತಿರುವುದನ್ನು ಕಂಡು ಸಂತಸವಾಯಿತು. ಹೆಗ್ಗಡೆಯವರು ಕರೆ ನೀಡಿದರೆ ರಾಜ್ಯದ ಯುವಕರೆಲ್ಲಾ ಕೆರೆ ಅಭಿವೃದ್ಧೀ ಕಾರ್ಯಕ್ಕೆ ಕೈ ಜೋಡಿಸುತ್ತೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು, ಗೃಹಸ್ಥನಾದರೆ ಮಾತ್ರ ವ್ಯಕ್ತಿತ್ವ ಪೂರ್ಣವಾಗುತ್ತದೆ. ಪಾಶ್ಚಾತ್ಯರಂತೆ ನಮ್ಮ ಮದುವೆ ಪದ್ಧತಿಯಲ್ಲ. ನಮ್ಮದು ಹೃದಯದ, ಹೊಣೆಗಾರಿಕೆಯ ಬಂಧನ. ವಿರಸ ಬರದಂತೆ ನಮ್ಮಜೀವನವನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಆರ್ಥಿಕವಾಗಿ ಸಧೃಢವಾಗಿದ್ದರೂ ಸರಳವಾಗಿ ವಿವಾಹವಾಗಬೇಕು ಎಂಬ ಇಚ್ಛೆ ಉಳ್ಳವರಿಗೆ ಇಲ್ಲಿನ ಸಾಮೂಹಿಕ ವಿವಾಹ ಅವಕಾಶ ನೀಡುತ್ತದೆ ಎಂದ ಅವರು, ನಿಮ್ಮೆಲ್ಲರ ಜೀವನ ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಸಿ.ಐ.ಡಿ ಘಟಕದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಶೋಕ್ ಚಂದ್ರ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೆ.ವಸಂತ ಬಂಗೇರ, ಬಿರ್ಲಾಕಾರ್ಪೋರೇಶನ್ ನ ಕಾರ್ಯನಿರ್ವಾಹಕಾ ನಿರ್ದೇಶಕ ಸಂದೀಪ್ ಶುಭ ಹಾರೈಸಿದರು. ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಚಲನಚಿತ್ರ ನಟಿ ರಾಧಿಕಾ ಪಂಡಿತ್, ಶಾಸಕ ಅಭಯಚಂದ್ರ ಜೈನ್, ನಿವೃತ್ತ ಎಸ್ಪಿ ದಿವಾಕರ, ರೂಪ ಕಿಶೋರ್ ಚಂದ್ರ, ಡಿ. ಹರ್ಷೇಂದ್ರಕುಮಾರ್, ಡಿ. ಸುರೇಂದ್ರಕುಮಾರ್, ಡಾ| ಬಿ. ಯಶೋವರ್ಮ, ಅಮಿತ್ ಕುಮಾರ್, ಶ್ರದ್ಧಾಅಮಿತ್, ಸೋನಿಯ ವರ್ಮ, ಬೇಬಿ ಮಾನ್ಯ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ಶ್ರೀನಿವಾಸ್ ರಾವ್ ವಂದಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ ಪ್ರಮಾಣವಚನ ಬೋಧಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ವೈದಿಕರ ಮಂಗಳ ವೇದಘೋಷ, ಕಲಾವಿದರ ವಾದ್ಯಘೋಷಗಳ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 102 ಜೋಡಿ ವಧು-ವರರು ಸಂಜೆ 6-50ರ ಗೋಧೋಳಿ ಮುಹೂರ್ತದಲ್ಲಿ ಧರ್ಮಾಧಿಕಾರಿ ಡಾ| ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದೊಂದಿಗೆ ಪ್ರಮಾಣ ವಚನವನ್ನು ಸ್ವೀಕರಿಸಿ, ಸತಿಪತಿಗಳಾದರು. 46ನೇ ವರ್ಷವನ್ನು ಪೂರೈಸಿದ್ದು, ಇದುವರೆಗೆ ಒಟ್ಟು 12029 ಜೋಡಿ ಶ್ರೀ ಮಂಜುನಾಥಸ್ವಾಮಿಯ ಸನ್ನಿಯಲ್ಲಿ ದಾಂಪತ್ಯಜೀವನವನ್ನು ಆರಂಭಿಸಿದ್ದಾರೆ.
ಈ ವರ್ಷ ದಕ.ಜಿಲ್ಲೆಯಿಂದ 11 ಜೋಡಿ, ರಾಜ್ಯದ ನಾನಾ ಜಿಲ್ಲೆಗಳಿಂದ 85 ಜೋಡಿ, ನೆರೆಯ ಕೇರಳ ರಾಜ್ಯದ 6 ಜೋಡಿಗಳು ಸೇರಿದಂತೆ 102 ಜೋಡಿ ಮದುವೆ ನೆರವೇರಿತು. ಹಿಂದೂ ಧರ್ಮದ ಎಲ್ಲ ಜಾತಿಯ ವಧು-ವರರು ಹಸೆಮಣೆಗೇರಿದರೆ, 11 ಅಂತರ್ ಜಾತಿಯ ವಧೂ-ವರರು ಸತಿಪತಿಗಳಾದರು.
ವಿಕಲಾಂಗರಾದ(ಮಾತು ಬಾರದ)ಉಡುಪಿಯ ಕಿರಣ್ ಹಾಗೂ ಕಾರ್ಕಳದ ಶ್ರೀದೇವಿ 12,000 ನೇ ಜೋಡಿಯಾಗಿದ್ದು ಸತಿಪತಿಗಳಾದರು. ಅವರಿಗಾಗಿ ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಎಲ್ಲಾ ವಧುವಿಗೆ ಕರಿಮಣಿ ತಾಳಿ, ಸೀರೆ, ರವಿಕೆಕಣ, ವರನಿಗೆ ಶಾಲು, ಧೋತಿ, ಶರ್ಟ್ ಪೀಸ್ ಕ್ಷೇತ್ರದ ವತಿಯಿಂದ ನೀಡಲಾಯಿತು.
ಶ್ರೀ ಕ್ಷೇತ್ರದಲ್ಲಿ ಇಂದು ಮಂಗಲ ಮುಹೂರ್ತದಲ್ಲಿ ವಧೂ-ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವೂದೇ ದುರಭ್ಯಾಸಗಳಿಗೆ ತುತ್ತಾಗದೆ ಬದುಕುತ್ತೇವೆ ಎಂಬುದಾಗಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ ಎಂದು ನವ ದಂಪತಿಗಳಿಗೆ ಭೋಧಿಸಲಾಯಿತು.