News Kannada
Monday, March 20 2023

ಕರಾವಳಿ

ಕಾನಾವು ಕೆರೆಯ ಜಲ ವೈಭವ

Photo Credit :

ಕಾನಾವು ಕೆರೆಯ ಜಲ ವೈಭವ

ಸುಳ್ಯ: ಮಾನವನ ಜಲದಾಹವನ್ನು ತೀರಿಸಲು ಭೂಮಿಯ ಒಡಲಾರವನ್ನೂ ಬರಿದಾಗಿಸುವ ಇಂದಿನ ದಿನಗಳಲ್ಲಿ ಸಮೃದ್ಧ ಕೆರೆಗಳ ಮೂಲಕ ಜಲಧಾರೆಯನ್ನು ಹರಿಸಿದ ಯಶೋಗಾಥೆಯನ್ನು ಅರಯಲು ಜಲಾಶಯದಂತೆ ಹರಡಿದ ಕೆರೆಗಳ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾನಾವಿಗೆ ಬರಬೇಕು. ಕಡು ಬೇಸಿಗೆಯಲ್ಲಿಯೂ ಹಚ್ಚ ಹಸಿರಿನಿಂದ ಕಂಗೊಳಿಸುವ ಕೃಷಿ ಭೂಮಿ, ಹಸಿರು ಸೂಸುವ ಮರಗಿಡಗಳು, ಜಲಮೃದ್ಧಿಯನ್ನು ಸಾರಿ ಹೇಳುವ  ಪ್ರಕೃತಿ. ಪಾರಂಪರಿಕ ಕೆರೆಗಳ ಮೂಲಕ ಜಲಸಂರಕ್ಷಣೆಯ ಅಭೂತಪೂರ್ವ ಮಾದರಿಯನ್ನು ತೆರೆದಿಡುತ್ತಾರೆ ಕಾನಾವು ಗೋಪಾಲಕೃಷ್ಣ ಭಟ್.

ಪ್ರಕೃತಿಯು ವರವಾಗಿ ನೀಡಿದ ಜೀವ ಜಲವನ್ನು ತಲಾತಲಾಂತರಗಳಿಂದ ನಿರಂತರ ಪರಿಶ್ರಮದಿಂದ ಸಂರಕ್ಷಿಸುವ ಮೂಲಕ ಜಲಸಂರಕ್ಷಣೆಯ ಅಭೂತಪೂರ್ವ ಮಾದರಿಯನ್ನು ಮುಂದಿಡುತ್ತಾರೆ ಈ ಕೃಷಿಕ. ತಮ್ಮ ಭೂಮಿಯಲ್ಲಿನ ಏಳು ಕೆರೆಗಳೇ ಇವರ ಭೂಮಿಯ ಜೀವಾಳ. ಇಡೀ ಪ್ರದೇಶಕ್ಕೆ ಮುಕುಟಪ್ರಾಯವಾಗಿರುವ ಮೂರೂವರೆ ಎಕ್ರೆ ಸ್ಥಳದಲ್ಲಿ ವಿಶಾಲವಾಗಿ ಹರಡಿರುವ ದೊಡ್ಡ ಕೆರೆ. ಅದರ ಕೆಳ ಭಾಗದಲ್ಲಿ ಅಲ್ಲಲ್ಲಿ ಜಲಧಾರೆಯನ್ನು ಹರಿಸುವ ಆರು ಕೆರೆಗಳು. ಕಾನಾವು ಕೆರೆ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿರುವ ದೊಡ್ಡ ಕೆರೆಯಿಂದ ಪೈಪ್ ಮೂಲಕ ನೀರು ಹರಿಸಲಾಗುತ್ತದೆ. ಜೊತೆಗೆ ಕೆರೆಯಿಂದ  ಇಂಗಿ ಕೆಳಗೆ ಬರುವ ನೀರು ಉಳಿದ ಕೆರೆಗಳಲ್ಲಿ ಶೇಖರಗೊಳ್ಳುತ್ತದೆ. ಹೀಗೆ ಒಂದು ಹನಿ ನೀರನ್ನೂ ವ್ಯರ್ಥ ಮಾಡದೆ ನೀರನ್ನು ವ್ಯವಸ್ಥಿತವಾಗಿ ಬಳಕೆ ಮಾಡುವ ಕಾರಣ ಗೋಪಾಲಕೃಷ್ಣ ಭಟ್ ಮತ್ತು ಸಹೋದರರ ಸುಮಾರು 40 ಎಕ್ರೆ ತೋಟಗಳಿಗೆ ಯಥೇಚ್ಛವಾಗಿ ನೀರು ಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸುತ್ತಲೂ ಹತ್ತಾರು ಎಕ್ರೆ ಪ್ರದೇಶಕ್ಕೂ ಕೆರೆಗಳು ಜಲಸಮೃದ್ಧಿಯನ್ನು ಒದಗಿಸಿ ಪ್ರಕೃತಿಗೆ ನೀರುಣಿಸುತ್ತದೆ.  ಆದುರಿಂದಲೇ ಕಾನಾವು ಪ್ರದೇಶದತ್ತ ಕಳೆದ ಎಂಟು ದಶಕಗಳಿಂದ ಜಲಕ್ಷಾಮವಾಗಲೀ, ಬರವಾಗಲೀ ಸುಳಿದಿಲ್ಲ. ಯಾವುದೇ ಕಡು ಬೇಸಿಗೆಯಲ್ಲಿಯೂ ಇಲ್ಲಿನ ಹಸಿರು ಮಾಯವಾಗುವುದೂ ಇಲ್ಲ.

ಪ್ರಕೃತಿಯ ಬಟ್ಟಲು- ಕಾನಾವು ಕೆರೆ:
ಕಲಸಿದ ಮಣ್ಣಿನಿಂದ ತ್ರಿಕೋನಾಕಾರದಲ್ಲಿ ನಿರ್ಮಿಸಿದ ತಡೆಗೋಡೆಯ ಹಿಂದೆ ಶೇಖರಗೊಂಡ ನೀರು. ಸುತ್ತಲೂ ಹರಡಿರುವ ಹಸಿರ ರಾಶಿಯ ಮಧ್ಯೆ ಪ್ರಕೃತಿಯೇ ನಿರ್ಮಿಸಿದ ಬಟ್ಟಲಿನಲ್ಲಿ ನೀರು ತುಂಬಿದಂತೆ ಮನಮೋಹಕವಾಗಿದೆ ಕಾನಾವು ಕೆರೆಯ ಚಿತ್ರಣ. ಸುಮಾರು 25 ಅಡಿ ಆಳದಲ್ಲಿ ಮೂರೂವರೆ ಎಕ್ರೆ ವಿಸ್ತೀರ್ಣದಲ್ಲಿ ಹರಡಿರುವ ಕನ್ನಡಿಯಂತೆ ಹೊಳೆಯುವ ತಿಳಿ ನೀರಿನ ಆಗರ ಈ ಅದ್ಭುತ ಕೆರೆ. ಎಂಟು ದಶಕಗಳ ಕಾಲ ಬತ್ತದೆ ನೀರಿನ ಜಲಧಾರೆ ಹರಿಸಿದ ಅಪೂರ್ವ ಇತಿಹಾಸವಿದೆ ಈ ಕೆರೆಗೆ. ಕಾನಾವು ಗೋಪಾಲಕೃಷ್ಣ ಭಟ್ಟರ ತಂದೆ ನರಸಿಂಹ ಭಟ್ 1942ರಲ್ಲಿ ಕಾಸರಗೋಡಿನ ಬದಿಯಡ್ಕದಿಂದ ಕಾನಾವಿಗೆ ಬಂದು ನೆಲೆಸಿದಾಗ ಭತ್ತದ ಕೃಷಿಗೆ ನೀರಿನ ಅಭಾವ ಎದುರಾಗಿತ್ತು. ಎರಡು ಬೆಳೆ ಬೆಳೆಯಲೂ ಕಷ್ಟವಾಗುತ್ತಿದ್ದ ದಿನಗಳಿದ್ದವು. ಆದುದರಿಂದ ಮೇಲ್ಭಾಗ ಮೂರೂವರೆ ಎಕ್ರೆಯ ಗದ್ದೆಗೆ ಮಣ್ಣಿನ ತಡೆಯನ್ನು ನಿರ್ಮಿಸಿ ನೀರು ಶೇಖರಿಸಲು ಆರಂಭಿಸಿದರು. ಬಳಿಕ ಅದ್ಭುತವೇ ನಡೆದು ಹೋಯಿತು. ಗದ್ದೆಯಲ್ಲಿ ನೀರು ಶೇಖರಿಸಲು ಆರಂಭಿಸಿದಾಗ ಸುತ್ತಲೂ ನೀರಿನ ಸಮೃದ್ಧಿ ಹರಿಯಿತು. ಎರಡು ಬೆಳೆ ಬೆಳೆಯುತ್ತಿದ್ದವರಿಗೆ ಮೂರು ಬೆಳೆ ಬೆಳೆಯಲು ಸಾಧ್ಯವಾಯಿತು. ಕ್ರಮೇಣ ಈ ಗದ್ದೆಗೆ ನಿರ್ಮಿಸಿದ ಮಣ್ಣಿನ ತಡೆಯನ್ನು ಎತ್ತರಿಸುತ್ತಾ ಬರಲಾಯಿತು. ಕಾಲ ಕಳೆದಂತೆ ಅದು ಸಮೃದ್ಧ ಜಲಗಂಗೆ ಹರಿಸುವ ಕೆರೆಯಾಯಿತು. ಅಂದಿನಿಂದ ಇಂದಿನವರೆಗೂ ಸಮೀಪದ ಹತ್ತಾರು ಕಿ.ಮಿ.ದೂರದ ಪ್ರದೇಶಕ್ಕೆ ನೀರಿನ ಕೊರತೆ ಉಂಟಾಗಲಿಲ್ಲ. ಮೇ ತಿಂಗಳಲ್ಲಿಯೂ ಕೆರೆಯ ನೀರು ಕಮ್ಮಿಯಾಗಿಲ್ಲ. ಆದುದರಿಂದಲೇ ಕಾನಾವು ಕೆರೆ ತುಂಬಿದರೆ ನಮಗೆ ನೀರಿಗೆ ಬರ ಇಲ್ಲ ಎಂಬುದು ಜನರ ನಂಬಿಕೆ.

See also  ಪದ್ಮಾ ಡಿ. ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಶ್ರದ್ಧೆಯ ನಿರ್ವಹಣೆ:
ಹಿರಿಯರಿಂದ ಬಳುವಳಿಯಾಗಿ ಬಂದ ಜಲಸಂಪತ್ತನ್ನು ಗೋಪಾಲಕೃಷ್ಣ ಭಟ್ ಮತ್ತು ಮನೆಯವರು ಅತ್ಯಂತ ಶ್ರದ್ಧೆಯಿಂದ ಸಂರಕ್ಷಿಸಿಕೊಂಡು ಬರುತ್ತಾರೆ. ಕಾನಾವು ಕೆರೆ ಮತ್ತು ಇತರ ಉಪ ಕೆರೆಗಳನ್ನು ಅತ್ಯಂತ ನಾಜೂಕಿನಿಂದ ನಿರ್ವಹಣೆ ಮಾಡುತ್ತಾರೆ. ಮಳೆಗಾಲದಲ್ಲಿ ಕೆರೆ ತುಂಬಿ ಹರಿದರೆ ಬದಿಯಲ್ಲಿನ ಕಣಿವೆಯ ಮೂಲಕ ನೀರನ್ನು ಹರಿಯಬಿಡುತ್ತಾರೆ. ದಿನಂ ಪ್ರತಿ ನೀರಿನ ನಿರ್ದಿಷ್ಟ ಮಟ್ಟವನ್ನು ಕಾಯ್ದುಕೊಳ್ಳುತ್ತಾರೆ. ಕೆರೆಯ ಜಲಸಮೃದ್ಧಿಗೆ ಕುಂದುಂಟಾಗಬಾರದು ಎಂದು ಕೆರೆಯ ಸುತ್ತಲು ಸುಮಾರು 20 ಎಕ್ರೆ ಭೂಮಿಯಲ್ಲಿ ಕಾಡನ್ನು ಹಾಗೆ ಉಳಿಸಲಾಗಿದೆ. ಈ ಕಾಡು ಮತ್ತು ಕೆರೆಯ ಮೇಲ್ಭಾಗದಲ್ಲಿರುವ ಕಲ್ಪತ್ತಮಲೆ ಅರಣ್ಯವು ಕಾನಾವು ಕೆರೆಯ ನೀರಿನ ಸಂಪತ್ತನ್ನು ಉಳಿಸಲು ಬಲು ದೊಡ್ಡ ಕೊಡುಗೆ ನೀಡುತ್ತದೆ. ಇವರು ಕೆರೆಯ ಸುತ್ತಲು ಬಿಟ್ಟ ಕಾಡುಗಳಲ್ಲಿ ಅಲ್ಲಲ್ಲಿ ಕಣಿವೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಮಳೆ ನೀರು ಕಾಡಿನಲ್ಲಿಯೇ ಶೇಖರವಾಗಿ ಭೂಮಿಗೆ ಇಂಗುತ್ತದೆ. ಇದರಿಂದ ಮಳೆ ನೀರು ಹರಿದು ಕೆರೆಗೆ ಬರುವುದಿಲ್ಲ ಮತ್ತು  ಕೆರೆಯ ನೀರು ಕಲುಷಿತವಾಗುವುದನ್ನು ತಡೆಯುತ್ತದೆ.  ಮಳೆಯ ನೀರು ಭೂಮಿಗೆ ಇಂಗಿ ಜಲಸಮೃದ್ಧಿಯನ್ನು ವೃದ್ಧಿಸುತ್ತದೆ.

ನೀರಿನ ಸಂರಕ್ಷಣೆಗೆ ಮಾದರಿ:
ಕುಡಿಯುವ ನೀರಿಗಾಗಿ, ಕೃಷಿ ಮತ್ತಿತರ ಅಗತ್ಯತೆಗಾಗಿ ಎಲ್ಲೆಡೆ ನೀರಿಗಾಗಿನ ಆಹಾಕರ, ಬರಗಾಲದ ಸ್ಥಿತಿಯನ್ನು ಅತೀ ಹೆಚ್ಚು ಅನುಭವಿಸುವ ಇಂದಿನ ದಿನಗಳಲ್ಲಿ ಕಾನಾವಿನ ಜಲನಿರ್ವಹಣೆಯು ಅತ್ಯಂತ ದೊಡ್ಡ ಮಾದರಿಯನ್ನೂ ಜಲಪಾಠವನ್ನೂ ನೀಡುತ್ತದೆ. ಕಾಡು, ಮೇಡು, ತೋಟ, ರಬ್ಬರ್ ಮರಗಳು ಉರಿಯುವ ಮೇಯಲ್ಲಿಯೂ ಹಚ್ಚ ಹಸಿರಾಗಿ ಕಂಗೊಳಿಸುವುದು, ತಂಪಾದ ಮತ್ತು ಹಿತವಾದ ವಾತಾವರಣ, ತೋಟದ ಮಧ್ಯೆ ಕಣಿವೆಗಳಲ್ಲಿ ಯಥೇಚ್ಛವಾಗಿ ಹರಿಯುವ ನೀರು ಈ ದೃಶ್ಯ ಮನಮೋಹಕ. ಪ್ರಕೃತಿಯನ್ನೂ, ನೀರನ್ನು ಸಂರಕ್ಷಿಸಿದರೆ ಪ್ರಕೃತಿ ನಮ್ಮನ್ನೂ ಹೇಗೆ ಸಲಹಬಲ್ಲುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಕಿಲ್ಲ.

ಮಾನಸ ಸರೋವರ- ರಾಘವೇಶ್ವರ ಶ್ರೀ:
2003ರಲ್ಲಿ ಕಾನಾವಿಗೆ ಭೇಟಿ ನೀಡಿದ್ದ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಕಾನಾವು ಕೆರೆಯನ್ನು ವೀಕ್ಷಿಸಲು ಆಗಮಿಸಿದ್ದರು. ಕೆರೆಯ ಜಲ ವೈಭವ, ಪ್ರಶಾಂತ ಪ್ರಕೃತಿಯ ಸೊಬಗನ್ನು ಕಂಡ  ಶ್ರೀಗಳು ಕಾನಾವು ಕೆರೆಯನ್ನು ಮಾನಸ ಸರೋವರ ಎಂದು ಬಣ್ಣಿಸಿದ್ದರು.  “ನೀರಿನ ಬಗ್ಗೆ ಪೂಜ್ಯ ಭಾವನೆ ಬೇಕು, ನೀರನ್ನು ಅಮೃತ ಎಂದು ತಿಳಿದುಕೊಳ್ಳಬೇಕು. ಪ್ರಕೃತಿ ಯಥೇಚ್ಛವಾಗಿ ನೀರನ್ನು ನೀಡುತ್ತದೆ.  ಅದನ್ನು ವ್ಯರ್ಥ ಮಾಡದೆ ನೀರನ್ನೂ, ಪ್ರಕೃತಿಯನ್ನೂ ಉಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಿದರೆ ನಮಗೆ ನೀರಿನ ಬವಣೆ ಉಂಟಾಗಲು ಸಾಧ್ಯವಿಲ್ಲ”-ಕಾನಾವು ಗೋಪಾಲಕೃಷ್ಣ ಭಟ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು