ಮುಡಿಪು: ಸ್ವಿಫ್ಟ್ ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಪಡೀಲು ಸಮೀಪ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.
ಮಂಜೇಶ್ವರದ ಕಡಂಬಾರು ಇಡಿಯ ನಿವಾಸಿ ಅಬೂಬಕರ್ ಎಂಬವರ ಪುತ್ರ ಯೂಸುಫ್ (38) ಸಾವನ್ನಪ್ಪಿದವರು. ಇವರ ಜತೆಗಿದ್ದ ಖಲೀಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೂಸುಫ್ ಮತ್ತು ಖಲೀಲ್ ಸಕಲೇಶಪುರದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ಸಂಜೆ ಮಂಜೇಶ್ವರದ ಮನೆಗೆ ವಾಪಸ್ಸಾಗುತ್ತಿದ್ದರು. ತಡರಾತ್ರಿ ವೇಳೆ ಬೋಳಿಯಾರು ಪಡೀಲು ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಪರಿಣಾಮ ಯೂಸುಫ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮಂಜೇಶ್ವರದಲ್ಲಿ ಉದ್ಯಮ ನಡೆಸುತ್ತಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.