ಬಂಟ್ವಾಳ: ಅಕ್ರಮವಾಗಿ ಸಾಗುವನಿ ಮರದ ದಿಮ್ಮಿಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಟ್ವಾಳ ಅರಣ್ಯ ಇಲಾಖೆಯವರು ಬಂಧಿಸಿದ ಘಟನೆ ಅನಂತಾಡಿಯಲ್ಲಿ ಬುಧವಾರ ನಡೆದಿದೆ.
ಬಂಧಿತರನ್ನು ಸಜೀಪ ನಿವಾಸಿ ಅಶೋಕ, ಅನಂತಾಡಿ ಕೊಂಬಿಲ ನಿವಾಸಿಗಳಾದ ದಿನೇಶ, ರಾಜೇಶ ಮತ್ತು ರಾಮಕೃಷ್ಣ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಆನಂತಾಡಿ ಗ್ರಾಮದ ಅನಂತಾಡಿ ವೀರಕಂಭ ರಸ್ತೆಯ ಕೊಂಬಿಲ ಎಂಬಲ್ಲಿ ಅಕ್ರಮವಾಗಿ ಇಲ್ಲಿನ ಮೀಸಲು ಅರಣ್ಯದಿಂದ ಕಡಿದು ಒಮ್ನಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳ ಸಹಿತ ಮರದ ದಿಮ್ಮಿಗಳನ್ನು ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ದಾಳಿಯ ವೇಳೆ ಉಪ ಅರಣ್ಯಾಧಿಕಾರಿ ಪ್ರೀತಂ, ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ವಿ, ಚಿದಾನಂದ, ದೇಜಪ್ಪ, ರವಿಕುಮಾರ್ ಮತ್ತು ಸಿಬ್ಬಂಧಿಗಳಾದ ಭಾಸ್ಕರ್ , ಜಯರಾಮ ಹಾಜರಿದ್ದರು. ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಅವರ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ ನಡೆಸುತ್ತಿದ್ದಾರೆ.