ಸುಳ್ಯ: ಬಾನಲ್ಲಿ ಮೋಡ ಕವಿದು ಗುಡುಗು ಸಿಡಿಲು ಬಂದು ಧೋ.. ಎಂದು ಮಳೆ ಸುರಿಯಲು ಆರಂಭಿಸಿದರೆ ಈ ಮಕ್ಕಳಿಗೆ ಚಿಂತೆ ಆರಂಭವಾಗುತ್ತದೆ. ಈ ವಿದ್ಯಾರ್ಥಿಗಳ ಪೋಷಕರ ಎದೆಯಲ್ಲಿ ಢವ ಢವ ನಡುಕವೂ ಶುರುವಾಗುತ್ತದೆ. ನಮಗೊಂದು ಸೇತುವೆ ನಿರ್ಮಿಸಿ ಕೊಡಿ ನಾವು ಶಾಲೆಗೆ ಹೋಗುತ್ತೇವೆ… ಎಂಬುದು ಮಕ್ಕಳ ಅಳಲಾದರೆ, ಮಕ್ಕಳನ್ನು ಆತಂಕವಿಲ್ಲದೆ ಶಾಲೆಗೆ ಕಳುಹಿಸಲು ಮೊಗ್ರ ಹೊಳೆಗೊಂದು ಸೇತುವೆ ನಿರ್ಮಿಸಿ ಕೊಡಿ ಎಂಬುದು ಪೋಷಕರ ಹಕ್ಕೊತ್ತಾಯವಾಗಿದೆ.
ಇದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರ್ಕಾರಿ ಶಾಲೆಗೆ ಏರಣಗುಡ್ಡೆ ಭಾಗದಿಂದ ಬರುವ ಸುಮಾರು ಹದಿನೈದಕ್ಕೂ ಹೆಚ್ಚು ಮಂದಿ ಮಕ್ಕಳ ದುಸ್ಥಿತಿ. ಪ್ರತಿ ವರ್ಷವೂ ಈ ಭಾಗದಿಂದ 15, 20 ಮಂದಿ ಮಕ್ಕಳು ಈ ಸರ್ಕಾರಿ ಶಾಲೆಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಪ್ರತಿ ವರ್ಷವೂ ಮಳೆಗಾಲದ ಬವಣೆ ಮಾತ್ರ ತಪ್ಪುವುದಿಲ್ಲ. ಮಳೆಗಾಲ ಬಂದು ಮೊಗ್ರ ಹೊಳೆ ತುಂಬಿ ಹರಿದರೆ ಏರಣಗುಡ್ಡೆಯಿಂದ ಮೊಗ್ರ ಶಾಲೆಗೆ ಬರುವ ಮಕ್ಕಳಿಗೆ ಅಘೋಷಿತ ರಜೆಯೂ ಆರಂಭಗೊಳ್ಳುತ್ತದೆ. ಶಾಲೆಗೆ ತೆರಳಲು ಹೊಳೆ ದಾಟಲೇಬೇಕು. ಮಳೆ ವಿಪರೀತವಾದರೆ ಶಾಲೆಗೆ ಹೋಗಲು ಸಾಧ್ಯವಿಲ್ಲ. ಶಾಲೆ ಸೇರಲು ತುಂಬಿ ಹರಿಯುವ ಹೊಳೆಯಲ್ಲಿ ಅಥವಾ ಮುರಿದು ಬೀಳಲು ಸಿದ್ಧವಾಗಿರುವ ಮರದ ಪಾಲದಲ್ಲಿ ಸರ್ಕಸ್ ನಡೆಸಬೇಕು. ಆಯ ತಪ್ಪಿದರೆ ಅಪಾಯವೂ ಖಚಿತ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮಕ್ಕಳ ಈ ವ್ಯಥೆ ಇಂದು ನಿನ್ನೆಯದಲ್ಲ. ಮಕ್ಕಳ ಮಳೆಗಾಲದ ಯಾತನೆ ಶಾಲೆಯ ಇತಿಹಾಸದಷ್ಟೇ ಹಳತು. 1 ರಿಂದ 7 ನೇ ತರಗತಿವರೆಗೆ ಇರುವ ಶಾಲೆಯಲ್ಲಿ 35ಕ್ಕೂ ಹೆಚ್ಚು ಮಕ್ಕಳಿದ್ದು ಇದರಲ್ಲಿ ಆರ್ಧಕ್ಕೂ ಹೆಚ್ಚು ಮಕ್ಕಳು ತುಂಬಿ ಹರಿಯುವ ಹೊಳೆಯಲ್ಲಿ ಆತಂಕವನ್ನು ಎದುರಿಸುತ್ತಾ ದಾಟಿ ಶಾಲೆಗೆ ಬರಬೇಕು. ಇಲ್ಲೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ದಶಕಗಳಿಂದ ಇರುವ ಬೇಡಿಕೆಯಾದರೂ ಅದು ಇನ್ನೂ ಕೈಗೂಡಿಲ್ಲ ಹಲವು ಬಾರಿ ಮನವಿ, ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸೇತುವೆ ಮಾಡಿ ಕೊಡುವುದಾಗಿ ನೀಡಿದ ಭರವಸೆಗಳೆಲ್ಲವೂ ಮೊಗ್ರ ಹೊಳೆಯಲ್ಲಿ ತೇಲಿ ಹೋಗಿದೆ. ಶಾಲೆಗೆ ಬರುವ 36 ಮಕ್ಕಳಲ್ಲಿ ಸುಮಾರು 15ಕ್ಕೂ ಮಕ್ಕಳು ಹೊಳೆ ದಾಟಿ ಬರಬೇಕು. ಬೇಶೀಗೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮಳೆಗಾಲ ಬರುತ್ತಿದ್ದಂತೆ ಸಂಕಷ್ಟ ಎದುರಾಗುತ್ತದೆ. ಶಾಲೆಗೆ ಮಕ್ಕಳನ್ನು ಬಿಡಲು ಪೋಷಕರು ಬರಲೇಬೇಕು, ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಹೊಳೆಯ ಸಮೀಪಕ್ಕೆ ಬಂದು ಮಕ್ಕಳನ್ನು ದಾಟಿಸುವ ಕೆಲಸ ಮಾಡಬೇಕು. ಮಕ್ಕಳು ಶಾಲೆಗೆ ಹೋದರೂ ಪೋಷಕರಿಗೆ ಆತಂಕ ತಪ್ಪುವುದಿಲ್ಲ. ಮಳೆ ಅಧಿಕವಾಗಿ ಶಾಲೆ ಬೇಗ ಬಿಟ್ಟರೂ ಸಮಸ್ಯೆ, ತಡವಾದರೂ ಸಮಸ್ಯೆ, ಇಲ್ಲಿ ಎಲ್ಲರೂ ದಿನವೂ ಕೆಲಸ ಮಾಡಿ ಬದುಕು ಸಾಗಿಸುವ ಮಂದಿಯೇ ಇರುವ ಕಾರಣ ತಮ್ಮ ಕೆಲಸ ಬಿಟ್ಟು ಬೆಳಿಗ್ಗೆ ಮತ್ತು ಸಂಜೆ ಬಂದು ಮಕ್ಕಳನ್ನು ಹೊಳೆ ದಾಟಿಸುವುದು ಕಷ್ಟ. ಆದುದರಿಂದ ಮಳೆಗಾಲದ ಬಹುತೇಕ ದಿನ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಅರ್ಧದಷ್ಟು ಮಕ್ಕಳು ಶಾಲೆಗೆ ಬಾರದಿದ್ದರೆ ತರಗತಿಯಲ್ಲಿನಪಾಠ ಪ್ರವಚನಗಳೂ ತಾಳ ತಪ್ಪುತ್ತದೆ. ಪ್ರಕೃತಿಯ ಸಿರಿಯ ಮಧ್ಯೆ ಇರುವ ಮೊಗ್ರ ಶಾಲೆಗೆ ರಸ್ತೆ ಸಂಪರ್ಕ ಇದ್ದರೂ ಹೊಳೆಗೆ ಸೇತುವೆ ಇಲ್ಲದ ಕಾರಣ ಮಳೆಗಾಲ ಬಿಸಿಯೂಟಕ್ಕೆ ಗ್ಯಾಸ್ ಮತ್ತಿತರ ಅಗತ್ಯ ವಸ್ತುಗಳನ್ನು ತರುವುದೂ ಸವಾಲಾಗಿದೆ. ಎಸ್ಡಿಎಂಸಿ ಸದಸ್ಯರು ಅಥವಾ ಶಿಕ್ಷಕರು ಗ್ಯಾಸ್ ಸಿಲಿಂಡರ್ ಮತ್ತಿತರ ವಸ್ತುಗಳನ್ನು ಹೊತ್ತು ತರಬೇಕಾಗುತ್ತದೆ.
ಅಪಾಯದಲ್ಲಿ ಅಡಕೆ ಮರದ ಪಾಲ:
ಗ್ರಾಮ ಪಂಚಾಯಿತಿ ವತಿಯಿಂದ ವರ್ಷಗಳ ಹಿಂದೆ ಅಡಕೆ ಮರದ ಪಾಲವನ್ನು ನಿರ್ಮಿಸಲಾಗಿದೆ. ಆದರೆ ಈ ಅಡಕೆ ಮರದ ಪಾಲವೂ ಈಗ ಶಿಥಿಲಗೊಂಡಿದ್ದು ಮುರಿದು ಬೀಳುವ ಸ್ಥಿತಿಯಲ್ಲಿದೆ. ಅಪಾಯದ ಸ್ಥಿತಿಯಲ್ಲಿರುವ ಈ ಅಡಕೆ ಮರದ ಪಾಲದಲ್ಲಿ ವಿದ್ಯಾರ್ಥಿಗಳು ದಾಟುವುದು ಕೂಡ ತ್ರಾಸದಾಯಕವಾಗಿದೆ. ನಿರಂತರ ಮಳೆಯಾಗಿ ಹೊಳೆ ತುಂಬಿ ಹರಿದು ಎರಡು ಮೂರು ದಿನ ರಜೆಯಾದರೆ ಪೋಷಕರು ಸುತ್ತು ಬಳಸಿ ಮಕ್ಕಳನ್ನು ಕರೆ ತರಬೇಕಾಗುತ್ತದೆ. ಅದರೆ ಒಂದರಿಂದ ಮೂರನೇ ತರಗತಿಯವರೆಗಿನ ಪುಟ್ಟ ಮಕ್ಕಳಿಗೆ ಇಷ್ಟು ದೂರ ಕ್ರಮಿಸುವುದೂ ತ್ರಾಸದಾಯಕ.
ಮುಚ್ಚುವ ಭೀತಿಯಲ್ಲಿ ದಶಕಗಳ ಇತಿಹಾಸದ ಶಾಲೆ:
ಸರ್ಕಾರದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಅಸಡ್ಡೆ ಕಾರಣದಿಂದ 1943 ರಲ್ಲಿ ಆರಂಭವಾಗಿ ಸಾವಿರಾರು ಮಂದಿ ವಿದ್ಯೆಯ ಬೆಳಕನ್ನು ಹರಿಸಿದ ಮೊಗ್ರ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಕೊರತೆ ಅನುಭವಿಸುತ್ತಿದೆ. ಇದು ಹೀಗೆ ಮುಂದುವರಿದರೆ ಮಕ್ಕಳ ಕೊರತೆಯಿಂದ ಶಾಲೆಯೇ ಮುಚ್ಚುವ ಹಂತಕ್ಕೆ ತಲುಪಬಹುದು ಎಂಬುದು ಸಾರ್ವಜನಿಕರ ಆತಂಕ. ಹೊಳೆ ದಾಟಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರಿಗೂ ದಿನಾಲು ಆತಂಕ ತಂದೊಡ್ಡುತಿದೆ. ಶಾಲೆಯ ಎದುರು ಡಾಮರು ರಸ್ತೆ ಇದೆ ಆದರೆ ಹೊಳೆಗೆ ಸೇತುವೆಯಾಗದ ಕಾರಣ ರಸ್ತೆಯಾಗಿಯೂ ಪ್ರಯೋಜನ ಇಲ್ಲವಾಗಿದೆ. ಕಳೆದ ಅನೇಕ ವರ್ಷಗಳಿಂದ ಈ ಶಾಲೆ ಗುತ್ತಿಗಾರು ಗ್ರಾಮದ 1 ಮತ್ತು 2 ನೇ ವಾರ್ಡ್ ನ ಚುನಾವಣಾ ಬೂತ್ ಆಗಿದೆ. ಅಂಗನವಾಡಿ ಕೇಂದ್ರ, ಭಜನಾ ಮಂದಿರ, ಮೊಗ್ರ ದೈವಸ್ಥಾನದ ಕೇಂದ್ರ ಇದೆ. ಹೊಳೆಗೆ ಸೇತುವೆ ಆದರೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಮಾತ್ರವಲ್ಲ. ಊರಿನ ಸಾವಿರಾರು ಮಂದಿ ಸಾರ್ವಜನಿಕರಿಗೂ ಪ್ರಯೋಜನಕಾರಿ.
ಸಂಸದರು ಬಂದರೂ ಸೇತುವೆ ಆಗಿಲ್ಲ..
ಈ ಮಕ್ಕಳ ದುಸ್ಥಿತಿಯನ್ನು ಅರಿತು ಕಳೆದ ವರ್ಷ ಸಂಸದರೂ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೊಗ್ರಕ್ಕೆ ಭೇಟಿ ನೀಡಿ ಕೂಡಲೇ ಹೊಳೆಗೆ ಸೇತುವೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ವರ್ಷ ಸರಿದು ಮತ್ತೊಂದು ಮಳೆಗಾಲ ಬಂದು ಹೊಳೆ ತುಂಬಿ ಹರಿದರೂ ಸೇತುವೆ ನಿರ್ಮಾಣಕ್ಕೆ ಮಾತ್ರ ಇನ್ನೂ ಮೀನ ಮೇಷ ಎಣಿಸಲಾಗುತಿದೆ. ಸಂಸದರೇ ಸ್ಥಳಕ್ಕೆ ಬಂದರೂ ಸೇತುವೆ ಮಾತ್ರ ಆಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
“ಮೊಗ್ರ ಶಾಲೆಗೆ ಏರಣಗುಡ್ಡೆ ಪ್ರದೇಶದಿಂದ ತೆರಳುವ ಸುಮಾರು 15ಕ್ಕೂ ಹೆಚ್ಚು ಮಂದಿ ಮಕ್ಕಳು ಹೊಳೆ ದಾಟಿ ಹೋಗಬೇಕಾಗಿದೆ. ಮಳೆ ಬಂದರೆ ಮಕ್ಕಳನ್ನು ಹೊಳೆ ದಾಟಿಸುವುದೇ ಕಷ್ಟದ ಕೆಲಸ. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೂ ಆತಂಕ ತಪ್ಪುವುದಿಲ್ಲ. ಸರ್ಕಾರ ಈ ಮಕ್ಕಳ ಬದುಕಿನ ಬಗ್ಗೆ ಮತ್ತು ಜನರ ದುಸ್ಥಿತಿಯ ಬಗ್ಗೆ ಗಮನಿಸಬೇಕು. ಇಲ್ಲಿ ಸೇತುವೆ ನಿರ್ಮಾಣವಾಗಬೇಕು ಎಂಬ ನಮ್ಮ ಬೇಡಿಕೆ ಕೂಡಲೇ ಈಡೇರಿಸಬೇಕು”
-ಏರಣಗುಡ್ಡೆ ನಿವಾಸಿಗಳು.
“ ಏರಣಗುಡ್ಡೆ ಪ್ರದೇಶದಿಂದ ಮಕ್ಕಳು ಶಾಲೆಗೆ ಬರಲು ಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಸೇತುವೆ ನಿರ್ಮಾಣಕ್ಕೆ ಶಾಸಕರ ಮೂಲಕ ನಬಾರ್ಡ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ”
-ಮುಳಿಯ ಕೇಶವ ಭಟ್ ತಾ.ಪಂ.ಮಾಜಿ ಅಧ್ಯಕ್ಷ