ಪುತ್ತೂರು: ಜೂ.13ರಂದು ಸಂಜೆ ಕಲ್ಲಡ್ಕದಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆಗೊಳಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿರವರು ಪೊಲೀಸ್ ಕಾವಲಿನ ನಡುವೆಯೇ ಜೂ.14ರ ತಡ ರಾತ್ರಿಯ ವೇಳೆ ಆಸ್ಪತ್ರೆಯಿಂದ ಪರಾರಿಯಾಗಿರುವ ಕುರಿತು ಜೂ. 15ರ ಬೆಳಿಗ್ಗೆ ಬೆಳಕಿಗೆ ಬಂದ ಮತ್ತು ಇದೊಂದು ಅಪಪ್ರಚಾರ ಎಂದು ವೈದ್ಯರು ತಿಳಿಸಿದ ಘಟನೆ ನಡೆದಿದೆ.
ಆದರೆ ಅಪಪ್ರಚಾರದ ಬೆನ್ನಲ್ಲೇ ಘಟನೆಗೆ ಸಂಬಂಧಿಸಿ ಕರ್ತವ್ಯ ನಿರ್ಲಕ್ಷ್ಯ ಆರೋಪದಲ್ಲಿ ಜಿಲ್ಲಾ ಎಸ್ಪಿಯವರು ಆಸ್ಪತ್ರೆಯಲ್ಲಿ ಪೊಲೀಸ್ ಬಂದೋಬಸ್ತ್ ನ ಜವಾಬ್ದಾರಿ ವಹಿಸಿದ್ದ ಪುತ್ತೂರು ನಗರ ಠಾಣೆಯ ಎಸ್ಐ ಒಮನಾ ಮತ್ತು ಅಂದು ರಾತ್ರಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ ಸ್ಟೇಬಲ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಆದರೆ ಮಧ್ಯಾಹ್ನ ವೇಳೆಗೆ ರತ್ನಾಕರ ಶೆಟ್ಟಿಯವರು ಮತ್ತೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಕಂಡು ಬಂದಿದ್ದು, ರತ್ನಾಕರ ಶೆಟ್ಟಿಯವರು ಪರಾರಿಯಾಗಿಲ್ಲ ಅವರನ್ನು ನಾನೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿದ್ದೆ. ಅಲ್ಲಿಂದ ಈಗ ಬಂದಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ. ಎಂ.ಕೆ.ಪ್ರಸಾದ್ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದಾರೆ.
ಜೂ.13ರಂದು ಸಂಜೆಯ ವೇಳೆ ಕಲ್ಲಡ್ಕದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿಯವರಿಗೆ ತಂಡವೊಂದು ತಲವಾರಿನಿಂದ ಹಲ್ಲೆ ನಡೆಸಿತ್ತು. ಇದರಿಂದಾಗಿ ಬಲ ಕೈ ಮತ್ತು ಬಲ ಕಾಲಿನ ಭಾಗಕ್ಕೆ ಗಾಯವಾಗಿದ್ದು, ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಭದ್ರತೆಯ ದೃಷ್ಟಿಯಿಂದ ಅವರು ದಾಖಲಾಗಿದ್ದ ಕೊಠಡಿಗೆ ಈರ್ವರು ಪೊಲೀಸರನ್ನು ಕಾವಲು ಕಾಯಲು ಮತ್ತು ಆಸ್ಪತ್ರೆಯ ಹೊರಗೆ ಒಂದು ಜಿಲ್ಲಾ ಮಿಸಲು ಪಡೆಯ ಬಸ್ ನಿಲ್ಲಿಸಲಾಗಿತ್ತು. ಭದ್ರತಾ ವ್ಯವಸ್ಥೆಯ ಜವಾಬ್ದಾರಿಯನ್ನು ಪುತ್ತೂರು ನಗರ ಠಾಣೆಯ ಎಸ್ಐ ಒಮನ ವಹಿಸಿದ್ದರು. ಜೂ.14ರಂದು ಎಂದಿನಂತೆ ರಾತ್ರಿ ಹೊತ್ತು ರತ್ನಾಕರ ಶೆಟ್ಟಿಯವರ ಕೊಠಡಿಗೆ ಪುತ್ತೂರು ನಗರ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಧಾಕೃಷ್ಣ ಮತ್ತು ಜಿಲ್ಲಾ ಮೀಸಲು ಪಡೆಯ ಕಾನ್ ಸ್ಟೇಬಲ್ ರಮೇಶ್ ಲಮಾಣಿರವರನ್ನು ನೇಮಿಸಲಾಗಿತ್ತು. ಆದರೆ ಇವರು ನಿದ್ದೆಗೆ ಜಾರಿದೊಡನೆ ರತ್ನಾಕರ ಶೆಟ್ಟಿಯವರು ಪರಾರಿಯಾಗಿರುವುದಾಗಿ ಬೆಳಗ್ಗಿನ ಜಾವ ಸುದ್ದಿ ಹರಡಿತ್ತು. ಗಾಯಾಳು ರತ್ನಾಕರ ಶೆಟ್ಟಿಯವರ ವಿರುದ್ಧ ಕಲ್ಲಡ್ಕದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿದ್ದು ರತ್ನಾಕರ ಶೆಟ್ಟಿಯವರು ಪರಾರಿಯಾಗಿದ್ದಾರೆಂಬ ಸುದ್ದಿ ಹರಡುತ್ತಲೇ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೋರಸೆ ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಪುತ್ತೂರು ನಗರ ಠಾಣೆಯ ಎಸ್ಐ ಒಮನಾ , ಹೆಡ್ ಕಾನ್ ಸ್ಟೇಬಲ್ ರಾಧಾಕೃಷ್ಣ ಮತ್ತು ಜಿಲ್ಲಾ ಮೀಸಲು ಪಡೆಯ ಕಾನ್ ಸ್ಟೇಬಲ್ ರಮೇಶ್ ಲಮಾಣಿರವರನ್ನು ಅಮಾನತುಗೊಳಿಸಿ ಡಿ.ಕೆ. ಪೊಲೀಸ್ ಆ್ಯಂಡ್ ಮೀಡಿಯಾ ಗ್ರೂಪ್ ನಲ್ಲಿ ಮಾಹಿತಿ ಕಳುಹಿಸಿದ್ದರು. ಸಂಜೆ ವೇಳೆ ಅಧಿಕೃತ ಆದೇಶ ನೀಡಿದ್ದಾರೆ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ಪರಾರಿಯಾಗಿಲ್ಲ. ನಾನೇ ಮಂಗಳೂರು ಆಸ್ಪತ್ರೆಗೆ ಕಳುಹಿಸಿದ್ದು:
ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ರತ್ನಾಕರ ಶೆಟ್ಟಿ ಅವರು ಪರಾರಿಯಾಗುವ ಪ್ರಶ್ನೆಯೇ ಇಲ್ಲ. ನಾನೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕಳಿಸಿದ್ದು ಎಂದು ಆದರ್ಶ ಆಸ್ಪತ್ರೆಯ ವೈದ್ಯ ಎಂ.ಕೆ. ಡಾ. ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಜೂ.14ರಂದು ರಾತ್ರಿ ರತ್ನಾಕರ ಶೆಟ್ಟಿಯವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಾನು ಇಸಿಜಿ ಮಾಡಿಸಿ,ಎಕ್ಸರೇ ತೆಗೆಸಿ, ಬಳಿಕ ಇಂಜಕ್ಷನ್ ಕೊಟ್ಟಿದ್ದೇನೆ. ಬಳಿಕ ನಾನು ಮನೆಗೆ ಹೋದ ಮೇಲೆ ಅವರ ಎದೆನೋವು ಉಲ್ಪಣಗೊಂಡು. ನನಗೆ ಕರೆ ಬಂತು. ನನಗೆ ರೋಗಿ ಆರೋಗ್ಯ ಮುಖ್ಯವಾದ್ದರಿಂದ ತಕ್ಷಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹೋಗಿ ಹೃದ್ರೋಗ ತಜ್ಞರನ್ನು ಸಂಪರ್ಕಿಸುವಂತೆ ತಿಳಿಸಿದ್ದೆ. ಅದೇ ರೀತಿ ಅವರು ಕೆಎಂಸಿ ಬದಲು ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿ ಕರ್ತವ್ಯದ ವೈದ್ಯರಿಲ್ಲದೆ. ವೈದ್ಯ ಶಿಕ್ಷಣ ಕಲಿಯುತ್ತಿದ್ದವವರು ಇದ್ದಾರೆ ಎಂದು ಅವರು ಕರೆ ಮಾಡಿ ತಿಳಿಸಿದ್ದರು. ನಾನು ಕೆ.ಎಂ.ಸಿಗೆ ಹೋಗಲು ಹೇಳಿದ್ದೆ. ಅದೇ ಸಮಯ ಎದೆನೋವು ಕಡಿಮೆಯಾಗಿರುವುದಾಗಿ ಅವರು ತಿಳಿಸಿದ ಹಿನ್ನೆಲೆಯಲ್ಲಿ ಅವರು ಪುನಃ ಪುತ್ತೂರಿಗೆ ಬನ್ನಿ ಶುಕ್ರವಾರ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಿಂದ ತಜ್ಞ ವೈದ್ಯರು ಬರುತ್ತಾರೆ ಅವರಲ್ಲಿ ತೋರಿಸುವ ಎಂದು ಹೇಳಿದೆ. ಅದೇ ರೀತಿ ಅವರು ಅಲ್ಲಿಂದ ಬರುತ್ತಿದ್ದಂತೆ ನಾನು ಸ್ನಾನ ಮಾಡಿ ಬರುತ್ತೇನೆಂದು ಹೇಳಿದರು. ಅದಕ್ಕೆ ನಾನು ನೀವು ಸ್ನಾನ ಮಾಡಿ ಚಹಾ ಕುಡಿದೇ ಬನ್ನಿ ಎಂದು ಹೇಳಿದ್ದೇನೆ. ಆದರೆ ಇಲ್ಲಿ ರತ್ನಾಕರ ಶೆಟ್ಟಿ ಪರಾರಿಯಾಗಿದ್ದಾರೆಂಬ ಅಪಪ್ರಚಾರ ಹಬ್ಬಿದೆ. ರತ್ನಾಕರ ಶೆಟ್ಟಿಯವರು ಪರಾರಿಯಾಗುವ ಅಗತ್ಯವೇ ಇಲ್ಲ. ಯಾಕೆಂದರೆ ಅವರನ್ನು ಪೊಲೀಸರು ಬಂಧಿಸಿಲ್ಲ. ಅವರ ಮೇಲೆ ಬಂಧನ ವಾರಂಟ್ ಕೂಡಾ ಇಲ್ಲ. ಅವರು ದಾಖಲಾದ ದಿನದಿಂದ ಆಸ್ಪತ್ರೆಯ ಬಳಿ ಇಷ್ಟೊಂದು ಪೊಲೀಸ್ ಯಾಕೆ ಎಂದು ತಾನೇ ಕೆಲವರಲ್ಲಿ ಪ್ರಶ್ನಿಸಿದ್ದೆ. ಆ ವೇಳೆ ಕೆಲವರು ಗಲಭೆ ಪ್ರಕರಣವಾಗಿರುವುದರಿಂದ ದಾಖಲಾಗಿರುವ ವ್ಯಕ್ತಿಗೆ ಇಲ್ಲವೇ ಆಸ್ಪತ್ರೆಗೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸ್ ನಿಯೋಜಿಸಲಾಗಿದೆ ಎಂದು ತಿಳಿಸಿದ್ದರು. ದಾಖಲಾದ ವ್ಯಕ್ತಿಯ ಬಂಧನವಾಗಿದ್ದಲ್ಲಿ ನಾವು ಬೇರೆ ಆಸ್ಪತ್ರೆಗೆ ಕಳುಹಿಸುವಾಗ ಪೊಲೀಸರ ಅನುಮತಿ ಪಡೆದುಕೊಳ್ಳಬೇಕಿತ್ತು. ಪೊಲೀಸ್ ಇಲಾಖೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ನಮಗೆ ನೀಡಿರಲಿಲ್ಲ. ವೈದ್ಯನಾಗಿ ನನಗೆ ರೋಗಿಯ ಜೀವ ಉಳಿಸುವುದೇ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ತಾನೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೇನೆ. ಅಲ್ಲಿಂದ ಈಗ ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರತ್ನಾಕರ ಶೆಟ್ಟಿ ಹೇಳಿಕೆ
ರಾತ್ರಿ ವೇಳೆ ಜೋರಾಗಿ ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ವೈದ್ಯರ ಸಲಹೆಯಂತೆ ನಾನು ನನ್ನ ರಿಡ್ಜ್ ಕಾರಿನಲ್ಲಿ ನನ್ನ ಚಾಲಕ ಜಗದೀಶ್ ಅವರ ಸಹಾಯದಿಂದ ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಎದೆನೋವು ಕಡಿಮೆಯಾಗಿದ್ದ ಹಿನ್ನಲೆಯಲ್ಲಿ ವೈದ್ಯರ ಸಲಹೆ ಪಡೆದು ಮತ್ತೆ ಇಲ್ಲಿಗೆ ಬಂದು ದಾಖಲಾಗಿದ್ದೇನೆ ಎಂದು ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿರುವ ರತ್ನಾಕರ ಶೆಟ್ಟಿ ಅವರು ತಿಳಿಸಿದ್ದಾರೆ.
ಅಮಾನತು ಆದೇಶದಿಂದ ಎಸ್ಐ ಅಸ್ವಸ್ಥ:
ಅಮಾನತು ಆದೇಶ ಪ್ರಚಾರವಾದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಅಮಾನತಿಗೊಳಗಾಗಿದ್ದ ಪುತ್ತೂರು ನಗರ ಠಾಣೆಯ ಎಸ್ಐ ಒಮನಾರವರು ರಕ್ತದೊತ್ತಡದಿಂದ ಅಸ್ವಸ್ಥಗೊಂಡಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡದು ತೆರಳಿರುವುದಾಗಿ ತಿಳಿದು ಬಂದಿದೆ.