ಕಾರ್ಕಳ: ಕಡ್ತಲ ಪಾಲ್ಜೆಡ್ಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮರಗಳ್ಳತನ ಕೃತ್ಯದಲ್ಲಿ ತೊಡಗಿದ ವೇಳೆಗೆ ಶಿಕಾರಿ ಬಂದವರು ಹಾರಿಸಿದ ಗುಂಡಿಗೆ ಬಲಿಯಾದ ರವೀಂದ್ರ ನಾಯ್ಕ ಅಮಾಯಕನಾಗಿದ್ದಾನೆ. ಟಿಂಬರ್ ಮಾಫಿಯಾಗಳು ಆತನನ್ನು ಕೂಲಿ ಕೆಲಸದ ಕರೆದೊಯ್ದು ಇಂತಹ ಕೃತ್ಯಕ್ಕೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರ ಸಂಭವಾಗಿ ಆತ ಮೃತಪಟ್ಟ ಬಳಿಕ ಕುಟುಂಬ ಅಸಹಾಯಕವಾಗಿದೆ. ಸರಕಾರದಿಂದ ಆತನ ಕುಟುಂಬಕ್ಕೆ ನೆರವು ನೀಡುವಂತೆ ತಾಲುಕು ಪಂಚಾಯತ್ ಸದಸ್ಯೆ ಸುಲತಾ ಒತ್ತಾಯಿಸಿದರು.
ತಾಲೂಕು ಪಂಚಾಯತ್ನ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ ಮೃತ ವ್ಯಕ್ತಿ ಪರಿಶಿಷ್ಟ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ತನಿಖೆಗೆ ಪೂರಕವಾಗದ ಮಾಹಿತಿಯುಳ್ಳ ಅಂಶ ಅಡಕವಾಗಿರುವ ದೂರನ್ನು ಮೃತನ ತಂದೆ ಹೀಗಾಗಲೇ ಅಜೆಕಾರು ಠಾಣೆಗೆ ಸಲ್ಲಿಸಿದ್ದಾರೆ ಎಂದರು. ಅದಕ್ಕೆ ಧ್ವನಿಗೂಡಿಸಿದ ಅಜೆಕಾರು ತಾಲೂಕು ಪಂಚಾಯತ್ ಸದಸ್ಯ ಹರೀಶ್ ನಾಯಕ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಮಾತನಾಡಿ ಮೃತವ್ಯಕ್ತಿ ಜ್ವರದಿಂದ ಬಳಲುತ್ತಿದ್ದನು. ಟಿಂಬರ್ ಮಾಫಿಯಾಗಳು ಆತನ ಮನೆಯಿಂದ ಒತ್ತಾಯವಾಗಿ ಕರೆದೊಯ್ದು ಕೊಲೆಯಾಗುವಂತೆ ಮಾಡಿದ್ದಾರೆ. ಪೊಲೀಸರ ತನಿಖೆ ಸಮರ್ಪಕವಾಗಿ ನಡೆಯದೇ ಹೋದುದರಿಂದ ಪ್ರಕರಣದ ಆರೋಪಿತರು ರಾಜರೋಷವಾಗಿ ತಿರುಗುತ್ತಿರಲು ಕಾರಣವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖಾಧಿಕಾರಿ ಮಾತನಾಡಿ ಪ್ರಕರಣದ ತನಿಖೆ ನಡೆಯುತ್ತಿದೆ ಅದರ ಕುರಿತು ಬಹಿರಂಗವಾಗಿ ಸಭೆಯಲ್ಲಿ ಪ್ರಸ್ತಾಪಿಸಲು ಅಸಾಧ್ಯವೆಂದರು.
ಶಾಲಾ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಪಠ್ಯಪುಸ್ತಕಗಳು ಸಮರ್ಪಕವಾಗಿ ಸರಬರಾಜು ಆಗಿದೆಯೇ ಎಂಬ ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಅಕ್ಷರದಾಸೋಹ ಉಪ ನಿರ್ದೇಶಕ ಹಾಗೂ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಮಾತನಾಡಿ ಶೇ. 60ರಷ್ಟು ಪಠ್ಯಪುಸ್ತಕ ಮಾತ್ರ ಸರಬರಾಜು ಆಗಿದೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲೂಕು ಪಂಚಾಯತ್ ಸದಸ್ಯ ಹರೀಶ್ ನಾಯಕ್ ಮಾತನಾಡಿ, ರಾಜ್ಯ ಶಿಕ್ಷಣ ಸಚಿವರು ಹೀಗಾಗಲೇ ಹೇಳಿಕೆಯನ್ನು ಹೊರಡಿಸಿ ಶೇ. 94ರಷ್ಟು ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಸರಬರಾಜು ಆಗಿವೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು ನೀಡಿರುವ ಹೇಳಿಕೆಗೂ ರಾಜ್ಯ ಸಚಿವರ ಹೇಳಿಕೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ ಎಂದರು. ಸಚಿವರ ಹೇಳಿಕೆ ಪತ್ರಿಕೆಗಳಿಗೆ ಮಾತ್ರ ಸೀಮಿತ ಎಂದು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ ವ್ಯಂಗ್ಯವಾಡಿದರು.
ತಾಲೂಕು ವ್ಯಾಪ್ತಿಯಲ್ಲಿ ಪಡಿತರ ಚೀಟಿಯ ಲೋಪದೋಷ ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ. ಶಾಲಾ ಆರಂಭಗೊಂಡಿದೆ. ಪಡಿತರ ಆಹಾರ ಪದಾರ್ಥಗಳು ಸಮರ್ಪಕವಾಗಿ ಗ್ರಾಹಕರ ಪಾಲಿಗೆ ಒದಗಿ ಬರುತ್ತಿಲ್ಲ. ಇವೆಲ್ಲವೂ ಸರಕಾರ ಪ್ರಯೋಕತ್ವ ಸಮಸ್ಯೆಯಾಗಿದೆ ಎಂದು ಅಧ್ಯಕ್ಷೆ ರಾಜ್ಯ ಸರಕಾರದ ವಿರುದ್ಧ ನೇರ ಆರೋಪಗೈದು ಇದರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷದ ಏಕೈಕ ಸದಸ್ಯ ಸುಧಾಕರ ಶೆಟ್ಟಿ ಸಭೆಯಲ್ಲಿ ಎದ್ದು ನಿಂತು ಮಾತನಾಡಿ, ಕಾರ್ಕಳ ತಾಲೂಕು ಪಂಚಾಯತ್ ನ ಆಡಳಿತ ವ್ಯವಸ್ಥೆ ಪರದರ್ಶಕವಾಗಿಲ್ಲದೇ ಇರುವಾಗ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ತಿಲಾಂಜಲಿ ನೀಡಿಬೇಕು. ತಾಲೂಕು ಪಂಚಾಯತ್ ಸಾಮಾನ್ಯಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕವಡೆ ಕಾಸಿನ ಬೆಲೆ ದೊರೆಯದೇ ಅನುಷ್ಠಾನವಾಗುತ್ತಿಲ್ಲ. ಇಂತಹ ಆರೋಪವು ನಾನು ಮಾತ್ರ ಮಾಡುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ಈ ಹಿಂದೆಯೂ ಮಾಡಿರುವುದನ್ನು ನೆನಪಿಸಿಕೊಂಡರು. ಬಜಗೋಳಿ ಪೇಟೆಯ ಒಳಚರಂಡಿ ಸಮಸ್ಸೆಗೆ ಪರಿಹಾರ ಇನ್ನೂ ದೊರೆತ್ತಿಲ್ಲ ಇದರ ಬಗ್ಗೆ ಗಮನಹರಿಸುವುದು ಬಿಟ್ಟು ರಾಜ್ಯ ಸರಕಾರದ ಕಡೆ ಬೊಟ್ಟು ಮಾಡುತ್ತಿರುವುದು ತಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
ಆ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷ ಸದಸ್ಯ ಸುಧಾಕರ ಶೆಟ್ಟಿ ವಿರುದ್ಧ ತಿರುಗಿ ಬಿದ್ದು ಇಡೀ ಸಭೆಯಲ್ಲಿ ಗದ್ದಲವಾತಾವರಣ ತಲೆದೋರಿತು. ಶಿಕ್ಷಕರ ಕೊರತೆ ಎದುರಿಸುತ್ತಿರುವ ನಕ್ಸಲ್ ಪೀಡಿತ ಈದು ವ್ಯಾಪ್ತಿಯಲ್ಲಿ ಶಾಲೆಗಳು ಮುಚ್ಚುವ ಹಂತದಲ್ಲಿದೆ ಎಂದು ತಾಲೂಕು ಪಂಚಾಯತ್ ಸದಸ್ಯೆ ಪ್ರವೀಳಾ ಸಭೆಗೆ ತಿಳಿಸಿದರು.
ಪ್ರತಿಧ್ವನಿಸಿದ ಮಂಜಲ್ಪಾದೆ ಜಲ್ಲಿಪುಡಿ ವಿವಾದ 2004-05ರಲ್ಲಿ ಇಡೀ ಕರಾವಳಿವೇ ಬೆಚ್ಚಿಬೀಳಿಸುವಂತೆ ಮಾಡಿದ ಮಂಜಲ್ಪಾದೆ ಗಣಿಗಾರಿಕೆ ವಿರುದ್ಧ ನಡೆದ ಹೋರಾಟವು ಅದಕ್ಕೆ ಬೆಂಕಿ ಹಚ್ಚುವುದರೊಂದಿಗೆ ಸಂಸ್ಥೆಗೆ ಬೀಗಜಡಿಯಲು ಕಾರಣವಾಗಿತ್ತು.ಹೋರಾಟದ ಉದ್ದೇಶವೇ ತಿರುವುಮುರುವು ಆಗಿದ್ದು ಅಲ್ಲಿನ ಸ್ಥಳಿಯಾಡಳಿತ ಕುಮ್ಮಕ್ಕಿನಿಂದ ಲಕ್ಷಾಂತರ ರೂ. ಬೆಲೆಬಾಳುವ ಜಲ್ಲಿಪುಡಿ ಪ್ರತಿಷ್ಠಿತ ವ್ಯಕ್ತಿಯ ಪಾಲಾಗಿ ಸರಕಾರದ ಬೊಕ್ಕಸಕ್ಕೆ ನಷ್ಟ ವಾಗಿದೆ. ಸ್ಥಳಿಯಾಡಳಿತದ ಕ್ರಮಕ್ಕೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಯಾವ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಸರಕಾರ ಸಂಪತ್ತನ್ನು ಸಂರಕ್ಷಿಸುವ ನಿರ್ಣಯ ಕೈಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ ಒತ್ತಾಯಿಸಿದರು.
ಇವರ ಹೇಳಿಕೆಯಿಂದ ಅತೃಪ್ತಗೊಂಡ ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಮಾತನಾಡಿ, ಸ್ಥಳೀಯಾಡಳಿತವನ್ನು ಟೀಕಿಸುವ ಮುನ್ನಾ ದಾಖಲೆಗಳನ್ನು ಬಹಿರಂಗ ಪಡಿಸಿ ಎಂದರು. ಮಂಜುಲ್ಪಾದೆ ಜಲ್ಲಿಪುಡಿ ಹಗರಣದ ಬಗ್ಗೆ ತನಿಖೆ ನಡೆದಾಗ ಅದರ ನೈಜ ಚಿತ್ರಣ ಬಯಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ತಿರುಗೇಟು ನೀಡಿದರು.