ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಅಲ್ಲಲ್ಲಿ ಕುಸಿತಗಳುಂಟಾಗುತ್ತಿದ್ದು ಸಂಚಾರ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ರಾಜ್ಯ ಹೆದ್ದಾರಿ ಸ್ಥಾನಮಾನದಲ್ಲಿಯೇ ಇದೆ. ರಾಷ್ಟ್ರೀಯ ಹೆದ್ದಾರಿ ಎಷ್ಟರಮಟ್ಟಿಗೆ ಅಗಲವಾಗಿ ಇರಬೇಕೋ ಅದು ಅಷ್ಟಿಲ್ಲದೆ ರಾಜ್ಯ ಹೆದ್ದಾರಿಯಷ್ಟೇ ಅಗಲವಾಗಿದೆ. ಇದರಿಂದ ಸಂಚಾರ ಅಡಚಣೆ, ಅಪಘಾತ ಮಾಮೂಲಾಗಿದೆ. ರಸ್ತೆಯಲ್ಲಿ ಕುಸಿತ ಭಾಗ್ಯ ಮಾತ್ರ ಅಲ್ಲಲ್ಲಿ ಕಾಣಿಸಲಾರಂಭಿಸಿದ್ದು ಈ ಮಳೆಗಾಲ ಆತಂಕದ ದಿನಗಳಾಗಿವೆ. ಅಲ್ಲಲ್ಲಿ ಮೋರಿ ಹಾಗೂ ರಸ್ತೆಯೇ ಕುಸಿತ ಉಂಟಾಗುತ್ತಿರುವ ಪರಿಣಾಮ ತುರ್ತು ಕಾಮಗಾರಿ ನಡೆಸದಿದ್ದಲ್ಲಿ ಸಂಚಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಚಾರ್ಮಾಡಿ ಹಸನಬ್ಬ.
ಕೇಂದ್ರ ಸಚಿವರಾಗಿದ್ದ ವೀರಪ್ಪ ಮೊಲಿಯವರು ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿಗೆ ಭೇಟಿ ನೀಡಿದ್ದಾಗ ಚಾರ್ಮಾಡಿಯಲ್ಲಿ ಮೇಲ್ಸೇತುವೆ ಮಾದರಿಯಲ್ಲಿ ರಸ್ತೆ ನಿರ್ಮಿಸಿ ಅಗಲಗೊಳಿಸುವ ಪ್ರಸ್ತಾವನೆ ಇದೆ ಎಂದಿದ್ದರು. ನಂತರ ಅವರು ಚಾರ್ಮಾಡಿಯನ್ನು ಮರೆತಂತಿದೆ. ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಕಾರ್ಗತ್ತಲಲ್ಲಿ ವಾಹನಗಳು ಬಾಕಿಯಾದರೆ ಭಯಾನಕ. ಬೆಳಕಿನ ವ್ಯವಸ್ಥೆ ಇಲ್ಲ, ಕುಡಿಯಲು ನೀರಿಲ್ಲ, ತಿನ್ನಲು ಸಿಗುವುದು ಅಸಾಧ್ಯ. ಮೊಬೈಲ್ ನೆಟ್ವರ್ಕ್ ಅಂತೂ ಇಲ್ಲವೇ ಇಲ್ಲ. ಅಪಘಾತವಾದರೆ ವಾಹನ ಮೇಲೆತ್ತಲು ಕ್ರೇನ್ ಇಲ್ಲ. ಗಾಯಾಳುಗಳ ಸಾಗಿಸಲು ಅಂಬುಲೆನ್ಸ್ ಇಲ್ಲ. ಆಡಳಿತ ಈ ಬಗ್ಗೆ ಯಾವಾಗ ಕಾಳಜಿ ವಹಿಸುತ್ತದೋ ದೇವರೇ ಬಲ್ಲ.