ಮಂಗಳೂರು: ಬಿಜೆಪಿ ಹಾಗೂ ಸಂಘಟನೆಗಳು ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಹಾಳುಮಾಡುತ್ತಿದೆ. ಧರ್ಮವನ್ನು ಎತ್ತಿ ಕಟ್ಟಿ ರಾಜಕೀಯ ಲಾಭ ಗಳಿಸುವ ಹುನ್ನಾರ ನಮಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ ವಿಭಜನೆ ಮಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಗಲಭೆಯನ್ನು ಎಬ್ಬಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಕಾರ್ಪೋರೇಟರ್ ಶಶಿಧರ್ ಹೆಗ್ಡೆ ಹೇಳಿದರು.
ಮಂಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಲಡ್ಕದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ರಮಾನಾಥ ರೈಗೆ ಅಸಮಾಧಾನವಿದೆ. ಬಿಜೆಪಿ ಕ್ಷುಲ್ಲಕ ಕಾರಣಕ್ಕಾಗಿ ಗಲಭೆ ಎಬ್ಬಿಸುತ್ತಿದ್ದ ಕಾರಣಕ್ಕಾಗಿ ಸಚಿವರು ಎಸ್ಪಿಗೆ ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ ಹೊರತು ಬಿಜೆಪಿಯ ವಿರುದ್ಧ ಧರ್ಮ ಎತ್ತಿ ಕಟ್ಟುವ ಉದ್ದೇಶ ಕಾಂಗ್ರೆಸ್ ಗಿಲ್ಲ ಎಂದು ವಿಶ್ಲೇಷಿಸಿದರು.
ಕೆಲವು ಯುವಕರನ್ನು ಜತೆಗೂಡಿಸಿಕೊಂಡು ಇಂತಹ ಅಹಿತಕರ ಘಟನೆಯನ್ನು ಪ್ರಭಾಕರ ಭಟ್ ಮಾಡುತ್ತಿದ್ದಾರೆ. ಇದರಿಂದಾಗಿ ಯುವಕರ ಕುಟುಂಬ ಇಂದು ಸಂಕಷ್ಟದಲ್ಲಿದೆ. ಬಿಜೆಪಿಯ ಉದ್ರೇಕದ ಸ್ವಭಾವದಿಂದ ಜಿಲ್ಲೆಯಲ್ಲಿ ಇಂದು ಹಿಂದುಳಿದ ವಾತಾವರಣವಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ಸಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಬಿಜೆಪಿ ಭ್ರಮನಿರಸನಗೊಂಡಿದೆ ಎಂದರು.
ಮಂಗಳವಾರ ನಡೆದ ಮಹಿಳಾ ಕಾಂಗ್ರೆಸ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ಯಾಲಿಟ್ ಪಿಂಟೋ ಅವರ ಬಗ್ಗೆ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ವಕ್ತಾರ ನವೀನ್ ಡಿಸೋಜಾ, ಡಿ.ಕೆ ಅಶೋಕ್ ಕುಮಾರ್, ಕೆ. ಭಾಸ್ಕರ್, ಮಹಾನಗರ ಪಾಲಿಕೆ ಸದಸ್ಯ ನವೀನ್, ರಾಧಾಕೃಷ್ಣ, ನಾಗೇಶ್, ಮತ್ತಿತರರು ಉಪಸ್ಥಿತರಿದ್ದರು.