ಸುಳ್ಯ: ಸುಳ್ಯ ನಗರದ ರಸ್ತೆ ಬದಿಯ ಪುಟ್ಪಾತ್ ಗಳನ್ನು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಅಲ್ಲಿ ಗಿಡಗಳನ್ನು ನೆಡಬೇಕೆಂದು ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ನಗರ ಪಂಚಾಯಿತಿ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಸರ್ಕಾರಿ ಸ್ಥಳವನ್ನು ಒತ್ತುವರಿ ಮಾಡಿರುವುದರ ಬಗ್ಗೆ ಗಂಭೀರ ಚರ್ಚೆ ನಡೆಯಿತು. ನಗರದ ಅಲ್ಲಲ್ಲಿ ಸರ್ಕಾರಿ ಜಾಗಗಳನ್ನು, ರಸ್ತೆ ಪೊರಂಬೋಕುಗಳನ್ನು ಒತ್ತುವರಿ ಮಾಡಿ ಕಟ್ಟಡ ಕಟ್ಟಲಾಗುತಿದೆ. ಇದನ್ನು ಕೂಡಲೇ ತೆರವು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ರಸ್ತೆ ಪುಟ್ಪಾತ್ ಮೇಲೆ ಅಲ್ಲಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಇದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ, ಅಲ್ಲದೆ ನಗರದ ಸ್ವಚ್ಛತೆ ನಾಶವಾಗಿದೆ. ಪುಟ್ಪಾತ್ ಗಳಲ್ಲಿರುವ ಅತಿಕ್ರಮಣವನ್ನು ಕೂಡಲೇ ತೆರವು ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು. ಸುಳ್ಯ ನಗರದಲ್ಲಿ ಎಲ್ಲಿಯೂ ನೆರಳಿನ ಆಸರೆಯಿಲ್ಲ. ಅನಧಿಕೃತ ಕಟ್ಟಡವನ್ನು ತೆರವು ಮಾಡಿ ಅಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಸದಸ್ಯರು ಒತ್ತಾಯಿಸಿದರು.
ನಗರದಲ್ಲಿ ಕಡಿಯಲಾದ ಮರಗಳು ಎಲ್ಲಿ?:
ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಮತ್ತಿತರ ಸಂದರ್ಭದಲ್ಲಿ ಮತ್ತು ನಗರ ಪಂಚಾಯಿತಿ ಸಮೀಪದಿಂದ ಕಡಿದ ಮರಗಳು ಎಲ್ಲಿ ಹೋದವು ಎಂದು ಸದಸ್ಯ ಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು. ರಸ್ತೆ ಅಗಲೀಕರಣ ಸಂದರ್ಭ ಮತ್ತು ನಗರ ಪಂಚಾಯಿತಿ ಸಮೀಪದಲ್ಲಿ ಕಡಿಯಲಾದ ಸಾಗುವಾನಿ ಮರಗಳು ಮಾಯವಾಗಿದೆ ಎಂದು ಅವರು ಹೇಳಿದರು. ಈ ಕುರಿತು ಸದಸ್ಯರು ಪ್ರಶ್ನಿಸಿದಾಗ ನಗರ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಲ್ಲಿ ಈ ಕುರಿತು ಮಾಹಿತಿ ಇರಲಿಲ್ಲ. ಅಧಿಕಾರಿಗಳಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಅಧ್ಯಕ್ಷರ ಮತ್ತು ಇತರ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಈ ಮರಗಳನ್ನು ಕಡಿದು ಸಾಗಾಟ ಮಾಡಿರುವ ಸಾಧ್ಯತೆ ಇದೆ ಎಂದು ಪ್ರಕಾಶ್ ಹೆಗ್ಡೆ ಹೇಳಿದರು. ಈ ಕುರಿತು ಚರ್ಚೆ ನಡೆದಾಗ ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಕಡಿಯಲಾದ ಮರ ಮಟ್ಟುಗಳನ್ನು ನಗರ ಪಂಚಾಯಿತಿಗೆ ತಂದು ಹಾಕಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಕಸ ವಿಲೇವಾರಿ ಸರಿಯಾಗಿಲ್ಲ:
ಸುಳ್ಯ ನಗರದ ಕಸ ವಿಲೇವಾರಿ ನಡೆಸಲು ತಿಂಗಳೊಂದಕ್ಕೆ 2.80 ಲಕ್ಷ ರೂಗಳನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗುತ್ತಿದ್ದರೂ ನಗರದ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ನಗರದಲ್ಲಿ ತ್ಯಾಜ್ಯಗಳು ಕೊಳೆಯುತಿದೆ. ಬೇಲಿಗೆ ಅಳಡಿಸಲಾದ ಪೆಟ್ಟಿಗೆಯಿಂದ ಕಸವನ್ನು ಎತ್ತಲಾಗುತ್ತಿಲ್ಲ ಕಸ ವಿಲೇವಾರಿ ಮಾಡುವ ವೆಚ್ಚವನ್ನು ಒಂದು ಲಕ್ಷದಷ್ಟು ಏರಿಸಿದರೂ ಕಸ ವಿಲೇವಾರಿ ಸರಿಯಾಗಿ ಮಾಡಲಾಗುತ್ತಿಲ್ಲ. ವಾರ್ಡ್ ಗಳಿಗೆ ತೆರಳಿ ಎಲ್ಲ ಕಡೆಯಿಂದ ಕಸ ಸಂಗ್ರಹ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು. ಕಸ ವಿಲೇವಾರಿಯನ್ನು ಸಮರ್ಪಕವಾಗಿಸಲು ಕ್ರಮಕ್ಕೆ ನಿರ್ಧರಿಸಲಾಯಿತು.
ಮ್ಯಾನ್ಹೋಲ್ ಸಿಗುತ್ತಿಲ್ಲ:
ಮ್ಯಾನ್ಹೋಲ್ ಗಳಿಂದ ಕೊಳಚೆ ನೀರು ಹೊರ ಬಂದು ಸುಳ್ಯ ನಗರದೆಲ್ಲಿ ತಿಂಗಳಿಂದ ದುರ್ವಾಸನೆ ಬೀರುತ್ತಿರುವ ಬಗ್ಗೆ ಸದಸ್ಯರು ಸಭೆಯ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸಿದರು. ಸುಳ್ಯ ನಗರದಲ್ಲಿ ಅಳವಡಿಸಲಾದ ಒಳಚರಂಡಿಯ ಒಂಭತ್ತು ಮ್ಯಾನ್ಹೋಲ್ ಗಳ ಮೇಲೆ ಡಾಮರು ಹಾಕಲಾಗಿದೆ. ಇದರಿಂದ ಬ್ಲಾಕ್ ಆಗಿರುವ ಮ್ಯಾನ್ಹೋಲ್ ಯಾವುದು ಎಂದು ಗೊತ್ತಾಗಿಲ್ಲ ಎಂದು ಇಂಜಿನಿಯರ್ ಹೇಳಿದರು. ಮ್ಯಾನ್ಹೋಲ್ಗಳ ಸ್ಥಾನವನ್ನು ಗುರುತಿಸಿ ಬ್ಲಾಕ್ ಆಗಿರುವುದನ್ನು ಸರಿಪಡಿಸಲಾಗುವುದು ಎಂದು ಇಂಜಿನಿಯರ್ ಸಭೆಗೆ ತಿಳಿಸಿದರು. ಓಡಬಾಯಿಯಲ್ಲಿ ರಸ್ತೆ ಬದಿಯಲ್ಲಿ ನಿಮರ್ಾಣವಾಗಿ ಅಪಾಯವನ್ನು ಆಹ್ವಾನಿಸುತ್ತಿರುವ ಹೊಂಡವನ್ನು ಮುಚ್ಚಲು ಕ್ರಮ ಕೈಗೊಳ್ಳಲು ಕೆಆರ್ಡಿಸಿಎಲ್ಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗಾಂಧೀನಗರದಲ್ಲಿ ಕೊರೆದ ಬೋರ್ವೆಲ್ ನ ನೀರಿನಲ್ಲಿ ವಾಸನೆ ಕಂಡು ಬಂದಿದೆ. ಅಲ್ಲದೆ ಈ ನೀರು ಉಪಯೋಗಿಸಿದ ನೆಲದ ಬಣ್ಣ ಬದಲಾಗುತ್ತಿರುವುದು ಕಂಡು ಬಂದಿದೆ ಎಂದು ಸದಸ್ಯ ಕೆ.ಎಸ್.ಉಮ್ಮರ್ ಸಭೆಯ ಗಮನಕ್ಕೆ ತಂದರು. ಈ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ನ.ಪಂ.ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ ಮತ್ತು ಇತರ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು.