ಬಂಟ್ವಾಳ: ಇಲ್ಲಿನ ಪಾಣೆಮಂಗಳೂರಿನಲ್ಲಿರುವ ಶ್ರೀ ಸತ್ಯಾದೇವತಾ ಕಲ್ಲುರ್ಟಿ ದೈವಸ್ಥಾನದ ಮುಂದೆ ಪ್ಲಾಟಿಕ್ ಲಕೋಟೆಯೊಂದರಲ್ಲಿ ಶನಿವಾರ ಬೆಳಿಗ್ಗೆ ದನದ ಮಾಂಸ ಪತ್ತೆಯಾಗಿ ಕೆಲ ಹೊತ್ತು ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಸ್ಥಿತಿ ನಿಭಾಯಿಸಿದ್ದಾರೆ.
ಬೆಳಗ್ಗಿನ ಜಾವ ವ್ಯಕ್ತಿಯೊಬ್ಬರು ದೈವಸ್ಥಾನದ ಬಳಿ ಬಂದಾಗ ಮೆಟ್ಟಿಲಲ್ಲಿ ಪ್ಲಾಸ್ಟಿಕ್ ನಲ್ಲಿ ಕಟ್ಟಿದ ವಸ್ತುವೊಂದು ಕಂಡು ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದು ಗೋಮಾಂಸವೆಂದು ತಿಳಿದು ಬಂದಿತ್ತು. ಅರ್ಚಕರು ಸ್ಥಳಕ್ಕೆ ಬಂದು ಸ್ಥಳ ಸ್ವಚ್ಛಗೊಳಿಸಿದ್ದರು. ಆದರೆ ಬಳಿಕ ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಹರಡಿ ಆತಂಕ ಸೃಷ್ಟಿಸಿತ್ತು. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರ್ಮಾಣವಾಗಿರುವ ಅಶಾಂತಿ ವಾತವರಣದ ಲಾಭ ಪಡೆದುಕೊಳ್ಳುವ ದೃಷ್ಟಿಯಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎನ್ನುವ ದೂರುಗಳು ಕೇಳಿ ಬಂದಿದೆ.
ಸಾಮೂಹಿಕ ಪ್ರಾರ್ಥನೆ:
ಈ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ದೈವಸ್ಥಾನದ ಮುಂದೆ ಕ್ರೂರ ಕೃತ್ಯ ಎಸಗಿದವರಿಗೆ ತಾಯಿ ಕಲ್ಲುರ್ಟಿಯೇ ಶಿಕ್ಷೆ ನೀಡಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಕೃಷ್ಣ ಅಡ್ಯಂತಾಯ, ವಿಭಾಗ ಸಂಚಾಲಕ ರವಿರಾಜ ಬಿ.ಸಿ.ರೋಡು, ಸಂಚಾಲಕ ಗಣರಾಜ ಭಟ್ ಕೆದಿಲ, ಮಧುರಾ ಭಟ್, ಪುರುಷೋತ್ತಮ ಕಲ್ಲಡ್ಕ ಮೊದಲಾದವರಿದ್ದರು.