ಮಂಗಳೂರು: ಉಳ್ಳಾಲ ಕಡಲಕಿನಾರೆಯಲ್ಲಿ ಸ್ನಾನ ಮಾಡುತ್ತಿರುವಾಗ ಅಪ್ಪಳಿಸಿದ ತೆರೆಗೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಇಬ್ಬರು ಯುವಕರು ಸಮುದ್ರ ಪಾಲಾಗಿದ್ದಾರೆ.
ಹಯಾಝ್ ಯಾನೆ ಚೋಟು (19) ಹಾಗೂ ಶಾರೂಕ್ (19) ನೀರುಪಾಲಾದ ಯುವಕರು. ಉಳ್ಳಾಲ ದರ್ಗಾಕ್ಕೆ ಬಂದಿದ್ದ ಒಂದೇ ಕುಟುಂಬದ ಹತ್ತು ಮಂದಿ ಬಳಿಕ ಕಡಲ ಕಿನಾರೆಗೆ ತೆರಳಿದ್ದರು. ಅಲ್ಲಿ ಸ್ನಾನ ಮಾಡುತ್ತಿದ್ದಾಗ ಭಾರಿ ಗಾತ್ರದ ತೆರೆಗಳು ಅಪ್ಪಳಿಸಿವೆ. ಅವರಲ್ಲಿ ಈ ಇಬ್ಬರು ಯುವಕರು ತೆರೆಯೊಂದಿಗೆ ಸಮುದ್ರದೊಳಗೆ ಸೇರಿದ್ದಾರೆ.
ಜೀವರಕ್ಷಣೆಗೆ ಒಬ್ಬ ತನ್ನ ತಲೆ ಮೇಲೆ ಎತ್ತುತ್ತಿದ್ದಂತೆ ಮನೆಯವರು ಈತನ ರಕ್ಷಣೆಗೆ ದಾವಿಸಿದ್ದರು. ಸ್ಥಳೀಯರು ಹೋಗಬೇಡಿ, ಸಮುದ್ರ ಪ್ರಕ್ಷುಬ್ಧವಾಗಿದೆ ಎಂದು ಹೇಳಿದರೂ ಕೇಳದೆ ಹೋಗಿ ಬಂಡೆಗೆ ತಲೆ ತಾಗಿ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.