ಮಂಗಳೂರು: ಉಡುಪಿ ಪೇಜಾವರ ಶ್ರೀಗಳ ಮೇಲೆ ಹಿಂದೂ ಸಮಾಜ ಮುನಿಸಿಕೊಂಡಿದೆ. ಶ್ರೀಗಳು ಹಿಂದೂ-ಮುಸ್ಲಿಂ ಜನರ ಮನದಲ್ಲಿ ವಿಷದ ಬೀಜವನ್ನು ಬಿತ್ತಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಶ್ರೀ ರಾಮ ಸೇನೆ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಠವು ಸಮಸ್ತ ಹಿಂದೂಗಳಿಗೆ ಸಂಬಂಧಪಟ್ಟಿದ್ದು, ಕೇವಲ ಒಂದು ಮತಕ್ಕೆ ಸೀಮಿತವಾಗಿಲ್ಲ. ಶ್ರೀಗಳಿಗೆ ಮುಸ್ಲಿಂ ಬಾಂಧವರ ಕುರಿತು ಕಾಳಜಿ ಇದ್ದರೆ ಇಫ್ತಾರ್ ಕೂಟವನ್ನು ಮಠದಿಂದ ಹೊರಕ್ಕೆ ಮಾಡಲಿ. ಇಫ್ತಾರ್ ಕೂಟ ಮಾಡಿ ಮಠದ ಭೂಮಿಯನ್ನು ಮುಸ್ಲಿಂರಿಗೆ ದಾನವಾಗಿ ನೀಡಿದ್ದೇನೆ ಎಂಬ ಮಾತನ್ನು ಸೇನೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಇತಿಹಾಸವನ್ನು ಶ್ರೀಗಳು ಸರಿಯಾಗಿ ತಿಳಿದುಕೊಳ್ಳಲಿ. 50 ವರ್ಷಗಳ ಹಿಂದೆ ಹಿಂದೂ-ಮುಸ್ಲಿಂ ಎಂಬ ಜಾತೀಯ ಭೇದವನ್ನು ಮರೆತು ಸೌಹಾರ್ದತೆಯಿಂದ ಬದುಕುತ್ತಿದ್ದೆವು. ಮೊದಲಿದ್ದ ಸೌಹಾರ್ದತೆ ಇಂದಿಗೂ ಮುಂದುವರೆಯುತ್ತಿದ್ದರೆ ಕೋಮುವಾದ ಅಂಶ ಪ್ರಾರಂಭವಾಗುತ್ತಿರಲಿಲ್ಲ. ಹಿಂದೂಗಳು ಯಾರ ಗುಲಾಮರಲ್ಲ ಶ್ರೀ ರಾಮನ ಸೇವೆಯನ್ನು ಮಾಡಿ ಸನಾತನ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದೇವೆ. ಅಯೋಧ್ಯೆ ರಾಮ ಮಂದಿರ ಸನಾತನ ಧರ್ಮದ ಪವಿತ್ರ ಸ್ಥಳ ಎಂದು ತಿಳಿಸಿದರು.
ಬಳಿಕ ಹಿಂದೂ ಮಹಾ ಸಭಾ ರಾಜ್ಯ ವಕ್ತಾರ ಹಾಗೂ ಜಿಲ್ಲಾ ಸಮನ್ವಯಕಾರ ಧರ್ಮೇಂದ್ರ ಮಾತನಾಡಿ, ಪೇಜಾವರ ಶ್ರೀಗಳಿಗೆ ವಯಸ್ಸಿನ ಕೊರತೆ ಕಾಣುತ್ತಿದೆ. ಭಾರತದ ಇತಿಹಾಸವನ್ನು ಶ್ರೀಗಳು ಮತ್ತೊಮ್ಮೆ ತಿಳಿದುಕೊಳ್ಳಲಿ. ಮಠದಲ್ಲಿ ಇಫ್ತಾರ ಕೂಟ ಆಯೋಜನೆ ಒಂದು ರಾಜಕೀಯ ಪ್ರೇರಿತ ಉದ್ದೇಶ. ಸ್ಥಳಕ್ಕೆ ಮುಸ್ಲಿಂ ಬಾಂಧವರ ಆಗಮನ ಖಂಡನೀಯ. ಪರಿಸ್ಥಿತಿ ಮುಂದುವರೆದಲ್ಲಿ ಶ್ರೀಗಳು ಮಠದ ಸ್ಥಾನದಿಂದ ಹೊರಗಿಳಿಯಬೇಕು ಎಂದು ಆಗ್ರಹಿಸಿದರು.
ಮಠದಲ್ಲಿ ಇಫ್ತಾರ್ ಕೂಟದ ಆಯೋಜನೆ ಹಾಗೂ ಮಠದ ಪ್ರಾವಿತ್ಯತೆಗೆ ಧಕ್ಕೆ ತಂದಿರುವುದನ್ನು ವಿರೋಧಿಸಿ ಶ್ರೀ ರಾಮ ಸೇನೆ ಜುಲೈ 2 ರಂದು ನಗರದ ಲಾಲ್ ಭಾಗ್ ವೃತ್ತದ ಬಳಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆಯ ವರೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹರೀಶ್ ಅಮ್ಟಾಡಿ, ಪ್ರಸಾದ್ ಉಜಿರೆ, ರಾಜ್ ಮಾರ್ಲ ಪೊಳಲಿ, ನಯನ ತೇಜ, ಚಂದ್ರ ಮುಗೇರ ಉಪಸ್ಥಿತರಿದ್ದರು.