ಪುತ್ತೂರು: ಮಾನಸಿಕ ಅಸ್ವಸ್ಥ ಯುವಕನೊಬ್ಬ ತನ್ನನ್ನು ಆರೈಕೆ ಮಾಡುತ್ತಿದ್ದ ವ್ಯಕ್ತಿಯನ್ನೇ ಹಾರೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಜಾರತ್ತಾರು ಎಂಬಲ್ಲಿ ನಡೆದಿದೆ.
ಜಾರತ್ತಾರು ನಿವಾಸಿ ಸುಂದರ ಗೌಡ ಎಂಬವರ 21 ವರ್ಷದ ಪುತ್ರ ರತನ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಈತ ತನ್ನನ್ನು ಆರೈಕೆ ಮಾಡಲೆಂದು ನೇಮಿಸಲಾಗಿದ್ದ ಮಡಿಕೇರಿ ದೇವರಗುಂಡಿ 56 ವರ್ಷದ ನಿವಾಸಿ ದೇವಯ್ಯ ಎಂಬುವರನ್ನು ಹಾರೆಯಿಂದ ಬಡಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ರತನ್ ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ದೇವಯ್ಯ ಆತನನ್ನು ನೋಡಿಕೊಳ್ಳುತ್ತಿದ್ದ. ಬುಧವಾರ ಮನೆಯಲ್ಲಿ ಇವರಿಬ್ಬರೇ ಇದ್ದ ವೇಳೆಯಲ್ಲಿ ರತನ್, ದೇವಯ್ಯನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.