ಮಂಗಳೂರು: ಪತ್ರಕರ್ತರಿಂದ ಸಮಾಜ ಹೆಚ್ಚಿನ ಮಟ್ಟದ ನಿರೀಕ್ಷೆಯನ್ನು ಹೊಂದಿರುವುದು ಪತ್ರಿಕಾ ರಂಗ ಸಕ್ರೀಯವಾಗಿರುವುದಕ್ಕೆ ಸಾಕ್ಷಿ ಎಂದು ಬಿ.ಟಿವಿಯ ಮನೋರಂಜನಾ ವಿಭಾಗದ ಮುಖ್ಯಸ್ಥ ಸದಾಶಿವ ಶೆಣೈ ಹೇಳಿದರು.
ನಗರದ ಪತ್ರಿಕಾಭವನ ಹಾಗೂ ಪತ್ರಿಕಾ ಹೋರಾಟ ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಮಾಜದಲ್ಲಿನ ರೋಗಗಳನ್ನು ತೆಗೆದು ಸುಂದರವಾದ ಸಮಾಜದ ನಿರ್ಮಾಣ ಪತ್ರಕರ್ತರಿಂದ ಮಾತ್ರ ಸಾಧ್ಯ. ಲೇಖಕ ಸಮಾಜದ ಹಾಗೂ ಸಮುದಾಯದ ಜನರಲ್ಲಿ ಬೆಳಕನ್ನು ತೋರಿ ನಕಾರಾತ್ಮಕ ಭಾವನೆಗಳನ್ನು ತೆಗೆದು ಹಾಕಿ ಸಮಾಜವನ್ನು ಬದಲಾಯಿಸುವ ಕಾರ್ಯವನ್ನು ಮಾಡುತ್ತಾನೆ ಎಂದು ತಿಳಿಸಿದರು.
ಪತ್ರಕರ್ತ ಬರೀ ಪತ್ರಕರ್ತನಲ್ಲ. ಬದಲಾಗಿ ಆತನೊಳಗೆ ಸಂಶೋಧಕ, ಹೋರಾಟಗಾರ, ವಿಶ್ಲೇಷಕವಿದ್ದಲ್ಲಿ ಸಕ್ರೀಯ ಪತ್ರಕರ್ತನಾಗಿ ಹೊಮ್ಮಲು ಸಾಧ್ಯ. ಲೇಖಕನಿಗೆ ಹಸಿವು ಹಾಗೂ ಕ್ರಿಯಾಶೀಲತೆ ಇದ್ದರೆ ಯಶಸ್ಸು ಸಾಧ್ಯ. ಯಾರೂ ಏನೇ ಮಾಡಿದರೂ ಜನರು ಗಮನಿಸುತ್ತಾರೆ. ರಾಜಕಾರಣಿಗಳು ಒಡೆದು ಹೋದ ನಡೆಗೆ ಹೆಸರುವಾಸಿಯಾದವರು. ರಾಜ್ಯದ ಯಾವುದೇ ಬಂದ್ ಗಳಿಗೆ, ಗೊಂದಲಗಳಿಗೆ ತಲೆಕೊಡದೆ ಬುದ್ಧಿವಂತರು ಎಂಬ ಹಣೆಪಟ್ಟಿಯನ್ನು ಮಂಗಳೂರಿಗರು ಹೊಂದಿರುವುದು ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಉದಯವಾಣಿ ನ್ಯೂಸ್ ಬ್ಯೂರೋ ಮುಖ್ಯಸ್ಥ ಮನೋಹರ್ ಪ್ರಸಾದ್ ಮಾತನಾಡಿ, ವೃತ್ತಿ ಜೀವನದ 33 ವರ್ಷಗಳಲ್ಲಿ 3 ತಲೆಮಾರಿನ ವರದಿಗಳನ್ನು ಮಾಡಿದ್ದೇನೆ. ಎಲ್ಲವನ್ನೂ ತಿಳಿದಿದ್ದರೂ ಏನೂ ತಿಳಿಯದ ಹಾಗೆ ಮುಗ್ಧ ಮನಸ್ಸಿನ ಹಾಗೆ ವರ್ತಿಸುವುದು ಪತ್ರಕರ್ತನಾದವನ ಲಕ್ಷಣ ಎಂದರು.
ಉತ್ಸಾಹ, ಸದಭಿರುಚಿಯ ಮನಸ್ಸು ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿ ಬಂದ ಅವಕಾಶಗಳನ್ನು ಸಮಯಕ್ಕೆ ತಕ್ಕಂತೆ ಸರಿಯಾಗಿ ಬಳಸಿ ಯಶಸ್ಸಿನತ್ತ ಸಾಗಲು ಸಹಾಯಕಾರಿಯಾಗುತ್ತದೆ. ಯಾವುದೇ ವಿಷಯದ ಕುರಿತು ಓದುಗನಲ್ಲಿ ಪರಕಾಯ ಪ್ರವೇಶ ಮಾಡುವ ಸಾಮರ್ಥ ಪತ್ರಕರ್ತನಿಗಿರಬೇಕು. ಭಾಷಾ ಬಳಕೆ, ಪದ ಬಳಕೆ ಪತ್ರಕರ್ತನಿಗಿರುವ ದೊಡ್ಡ ಸವಾಲು. ಭಾಷಾ ಬಳಕೆ ಉತ್ತಮವಾಗಿದ್ದರೆ ಪರಿಣಾಮಕಾರಿ ಸಂವಹನ ಸಾಧ್ಯ. ಪತ್ರಕರ್ತನಾದವನು ತನ್ನ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ಪಾಂಚಜನ್ಯ ರೇಡಿಯೋ ಮುಖ್ಯಸ್ಥ ಹಾಗೂ ವಿಶ್ವವಾಣಿ ವರದಿಗಾರ ಗೋಪಾಲಕೃಷ್ಣ ಕುಂಟಿನಿ ಮಾತನಾಡಿ, ಮಾಧ್ಯಮ ರಂಗದಲ್ಲಿ ಸುದ್ದಿ ಪಡೆಯಲು ಧಾವಂತ ಹೆಚ್ಚಾಗಿದ್ದು, ನವ ಮಾಧ್ಯಮವೆಂಬ ಹೊಸ ಆಯಾಮ ಪ್ರಾರಂಭವಾಗಲು ಕಾರಣವಾಗಿದೆ. ನವ ಮಾಧ್ಯಮಗಳು ಮಾಧ್ಯಮಗಳನ್ನು ಹಿಂದಿಕ್ಕಿ ಸ್ಪರ್ಧಾತ್ಮಕ ರೀತಿಯಲ್ಲಿ ಮಾಹಿತಿಗಳನ್ನು ಜನರಿಗೆ ನೀಡುತ್ತಿದೆ. ಸತ್ಯ,ನ್ಯಾಯ, ಕಾನೂನು, ನಿಯತ್ತುಗಳ ಕುರಿತು ಇಲ್ಲಿ ಕಾಳಜಿ ಇಲ್ಲ. ಮುದ್ರಣ ಮಾಧ್ಯಮಗಳು ಸ್ಥಳೀಯತೆಗೆ ಸೀಮಿತವಾಗಿ ನವ ಮಾಧ್ಯಮಗಳು ಜಗತ್ತಿಗೆ ಸುದ್ದಿಯನ್ನು ನೀಡಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಮಾಧ್ಯಮ ನಿರ್ವಹಣಾ ಸಮಿತಿ ಹಾಗೂ ಹಕ್ಕು ಚ್ಯುತಿ ಸಮಿತಿಯು ರಾಜ್ಯ ಸರ್ಕಾರ ಪರ್ತಕರ್ತರ ಮೇಲೆ ನಡೆದುಕೊಳ್ಳುವ ರೀತಿಯನ್ನು ಖಂಡಿಸಿ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ನೇತ್ರಾವತಿ ಉಳಿಸಿ ಹೋರಾಟಗಾರ ದಿನೇಶ್ ಹೊಳ್ಳ ಪತ್ರಿಕೆಗಳ ’ಕೊಲಾಜ್ ಮೇಕ್’ನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಮುಖ್ಯಸ್ಥ ರಾಮಲಿಂಗ ಗೌಡ, ಪುಪ್ಷರಾಜ್ ಶೆಟ್ಟಿ, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.