ಬಂಟ್ವಾಳ: ಕರೋಪಾಡಿ ಗ್ರಾಮಪಂಚಾಯತ್ ನಲ್ಲಿ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಯವರ ಹತ್ಯೆಯಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಮಿತ್ತನಡ್ಕ ಸರ್ಕಾರಿ ಶಾಲೆಯ ಮತದಾನ ಕೇಂದ್ರದಲ್ಲಿ ಉಪಚುನಾವಣೆ ಬಿಗುಬಂದೋಬಸ್ತ್ ನಡುವೆ ನಡೆಯಿತು.
ಶೇ.80.69 ರಷ್ಟು ಮತದಾನವಾಗಿದೆ 517 ಪುರುಷ ಮತದಾರರ ಪೈಕಿ 400 ಮಂದಿ ಹಾಗೂ 462 ಮಹಿಳಾ ಮತದಾರರ ಪೈಕಿ 390 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ, ತಹಶೀಲ್ದಾರ್ ಪುರಂದರ ಹೆಗ್ಡೆಯವರ ಪ್ರಕಟಣೆ ತಿಳಿಸಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನ್ವರ್ ಕರೋಪಾಡಿ(ಮೃತ ಜಲೀಲ್ ಸಹೋದರ) ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಭಟ್ ಕೋಡ್ಲ ಸ್ಪರ್ಧೆಯಲ್ಲಿದ್ದಾರೆ. ಕೇರಳ ಗಡಿ ಪ್ರದೇಶವಾದ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜು .5 ರಂದು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಮತ ಎಣಿಕೆ ನಡೆಯಲಿದೆ.