ಪುತ್ತೂರು: ವಿಳಾಸ ಕೇಳುವ ನೆಪದಲ್ಲಿ ಉದ್ಯಮಿಯೋರ್ವರ ಗಮನ ಬೇರೆಡೆ ಸೆಳೆದು ನಗದು ಇದ್ದ ಹ್ಯಾಂಡ್ ಬ್ಯಾಗನ್ನು ಕಸಿದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ನಗರಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಕಬಕ ಗ್ರಾಮದ ಮುರ ನಾಯಕ್ ಕಂಪೌಂಡ್ ನಿವಾಸಿ ಸೀತಾರಾಮ ಬಂಗೇರರವರ ಪುತ್ರ ಮನೀಷ್(19.ವ) ಹಾಗು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಬೀರ್ನಹಿತ್ಲು ನಿವಾಸಿ ದಿವಾಕರ ದೇವಾಡಿಗರವರ ಪುತ್ರ ವಿಖ್ಯಾತ್ ಯಾನೆ ವಿಕ್ಕಿ(21.ವ) ಬಂಧಿತರು. ನೆಹರು ನಗರದ ಮಂಜಲ್ಪಡ್ಪುವಿನಲ್ಲಿರುವ ಮಂಗಳಾ ಸ್ಟೋರ್ಸ್ನ ಪಾಲುದಾರರಲ್ಲಿ ಓರ್ವರಾದ ಸುದರ್ಶನ್ ರವರು ಜೂ.22ರಂದು ರಾತ್ರಿ ಸಂಸ್ಥೆಯ ವ್ಯವಹಾರ ಮುಗಿಸಿ ದಿನದಲ್ಲಿ ಸಂಗ್ರಹವಾಗಿದ್ದ 3 ಲಕ್ಷ ರೂಪಾಯಿಯನ್ನು ಬ್ಯಾಗೊಂದರಲ್ಲಿ ಹಾಕಿಕೊಂಡು ಸಂಸ್ಥೆಯ ಇನ್ನೋರ್ವ ಪಾಲುದಾರ, ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ.ಆನಂದ್ರವರ ಮಂಜಲ್ಪಡ್ಪುವಿನ ಮನೆಗೆ ತಲುಪಿಸುವ ನಿಟ್ಟಿನಲ್ಲಿ ತನ್ನ ಆ್ಯಕ್ಟೀವಾ ಹೋಂಡಾದಲ್ಲಿ ಬಂದು ಎಸ್.ಕೆ.ಆನಂದ್ ರವರ ಮನೆಯಂಗಳದಲ್ಲಿ ಆ್ಯಕ್ಟೀವಾವನ್ನು ನಿಲ್ಲಿಸಿ ನಗದು ಇದ್ದ ಹ್ಯಾಂಡ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಮನೆಯೊಳಗೆ ತೆರಳಲು ಸಿದ್ದರಾಗಿದ್ದರು. ಈ ವೇಳೆ ಮನೆಯಂಗಳದ ಗೇಟ್ ನ ಎದುರು ಸ್ಕೂಟರ್ ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ವಿಳಾಸ ಕೇಳುವ ನೆಪದಲ್ಲಿ ಸುದರ್ಶನ್ ರವರೊಂದಿಗೆ ಮಾತನಾಡುತ್ತಾ ಅವರ ಗಮನ ಬೇರೆಡೆ ಸೆಳೆದು ಅವರ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್ ಅನ್ನು ಕಸಿದು ಪರಾರಿಯಾಗಿದ್ದರು. ಕೂಡಲೇ ಸುದರ್ಶನ್ ರವರು ಅವರನ್ನು ಬೆನ್ನಟ್ಟಿದರೂ ಅವರು ಮಂಜಲ್ಪಡ್ಪು ತೋಟಗಾರಿಕಾ ಇಲಾಖೆಯ ಬಳಿಯ ರಸ್ತೆಯಿಂದಾಗಿ ಓಡಿ ಪರಾರಿಯಾಗಿದ್ದರು. ಈ ಕುರಿತು ಸುದರ್ಶನ್ ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೊನೆಗೂ ಕೃತ್ಯಗೈದ ಯುವಕರ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಜು.3ರಂದು ಮನೀಷ್ ಹಾಗು ವಿಖ್ಯಾತ್ ರವರು ಉಪ್ಪಿನಂಗಡಿ ಭಾಗದಿಂದ ಬರುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರದಲ್ಲಿ ನಗರಠಾಣಾ ಪೊಲೀಸರು ಅವರಿಬ್ಬರು ಸಂಚರಿಸುತ್ತಿದ್ದ ಆ್ಯಕ್ಟೀವಾ(ಕೆಎ.21-8997)ವನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಅವರು ತದ್ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ. ಅವರನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ತಾವು ಮಾಡಿರುವ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದರು. ಪೊಲೀಸರು ಬಂಧಿತ ಆರೋಪಿಗಳ ಕೈಯಿಂದ 1,30 ಲಕ್ಷ ರೂ ನಗದು, 30 ಸಾವಿರ ಮೌಲ್ಯದ ಇತರ ಸೊತ್ತು ಹಾಗು ಕೃತ್ಯ ನಡೆಸುವಾಗ ಬಳಸಿದ ಆ್ಯಕ್ಟೀವಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಹೆಚ್ ಸುರ್ ಕುಮಾರ್ ರೆಡ್ಡಿಯವರ ನಿರ್ದೇಶನದಲ್ಲಿ ಪುತ್ತೂರು ಡಿವೈಎಸ್ಪಿ ಬಿ.ಎಸ್ ಶ್ರೀನಿವಾಸ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ನಗರಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ರವರ ನೇತೃತ್ವದಲ್ಲಿ ನಗರಠಾಣಾ ಎಸ್ಐ ಒಮನ, ಅಪರಾಧ ವಿಭಾಗದ ಎಸ್ಐ ವೆಂಕಟೇಶ್ ಕೆ, ಎಎಸ್ಐ ಚಿದಾನಂದ ರೈ, ಸಿಬ್ಬಂದಿಗಳಾದ ಸ್ಕರಿಯ, ದಾಮೋದರ ನಾಯ್ಕ್, ಕೃಷ್ಣಪ್ಪ, ಮಂಜುನಾಥ, ಪ್ರಶಾಂತ್ ರೈ, ಹರೀಶ್, ಪ್ರಶಾಂತ್ ಶೆಟ್ಟಿ, ರಾಜೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವಿಖ್ಯಾತ್ ಹಾಗು ಮನೀಷ್ ಸ್ನೇಹಿತರಾಗಿದ್ದು ಮಾದಕ ವ್ಯಸನಿಗಳಾಗಿದ್ದರು. ವಿಖ್ಯಾತ್ ಅಲ್ಲಿ ಇಲ್ಲಿ ಇಲೇಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದರೆ, ಮನೀಶ್ ಬಪ್ಪಳಿಗೆ ಸಮೀಪದ ವ್ಯಕ್ತಿಯೋರ್ವರೊಂದಿಗೆ ಅಲ್ಯೂಮೀನಿಯಂ –ಫ್ಯಾಬ್ರಿಕೇಶನ್ ನ ಕೆಲಸ ಮಾಡುತ್ತಿದ್ದ. ಮಂಜಲ್ಪಡ್ಪು ನೆಹರೂ ನಗರ, ಸೀಟಿಗುಡ್ಡೆ ಮೊದಲಾದ ಕಡೆಗಳನ್ನೇ ತಮ್ಮ ತಾಣವನ್ನಾಗಿಸಿರುವ ಇವರಿಬ್ಬರು ಒಮ್ಮೆಲೆ ಹಣ ಮಾಡುವ ಬಗ್ಗೆ ಆಲೋಚಿಸಿದ್ದರು. ಮಂಗಳ ಸ್ಟೋರ್ಸ್ ನಿಂದ ಎಸ್.ಕೆ ಆನಂದರವರ ಮನೆಗೆ ಹಣವನ್ನು ಕೊಂಡು ಹೋಗುತ್ತಿರುವ ಬಗ್ಗೆ ಅರಿತು ಕೊಂಡ ಅವರಿಬ್ಬರು ಆ ಹಣವನ್ನು ದೋಚುವ ಪ್ಲ್ಯಾನ್ ಮಾಡಿದರು. ಅವರು ಪ್ಲ್ಯಾನ್ ನಂತೆ ಜೂ.22ರಂದು ಸುದರ್ಶನ್ ನಾಯಕ್ ರವರು ಮಂಗಳ ಸ್ಟೋರ್ ನಿಂದ ಎಸ್.ಕೆ ಆನಂದರ ಮನೆಗೆ ಹಣದ ಬ್ಯಾಗ್ ಅನ್ನು ಕೊಂಡು ಹೋಗುತ್ತಿರುವ ವೇಳೆ ವಿಖ್ಯಾತ್ ನ ಆ್ಯಕ್ಟೀವಾದಲ್ಲಿ ಅವರಿಬ್ಬರು ಸುದರ್ಶನ್ ರನ್ನು ಹಿಂಬಾಲಿಸುತ್ತಾ ಹೋಗಿ ಎಸ್ಕೆ ಆನಂದರ ಗೇಟಿನ ಬಳಿಯಲ್ಲಿ ಸುದರ್ಶನ್ ನಾಯಕ್ ರವರಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಬಳಿ ಇದ್ದ ಹಣದ ಬ್ಯಾಗನ್ನು ಕಸಿದು ಪರಾರಿಯಾಗಿದ್ದರು. ಶೋಕಿ ಜೀವನದ ಆಸೆಗಾಗಿ ತಾವು ಈ ಕೃತ್ಯ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುದರ್ಶನ್ ನಾಯಕ್ ರವರು ಎಸ್.ಕೆ ಆನಂದರವರ ಮನೆಗೆ ತೆರಳ ಬೇಕೆನ್ನುವಷ್ಟರಲ್ಲಿ ಅವರ ಗೇಟಿನ ಬಳಿ ಬಂದು ನಿಂತ ಆ್ಯಕ್ಟೀವಾದಲ್ಲಿದ್ದ ಯುವಕರಿಬ್ಬರು ದಾರಿ ಕೇಳುವ ನೆಪದಲ್ಲಿ ಅವರನ್ನು ಕರೆದಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ಸುದರ್ಶನ್ ನಾಯಕ್ ರವರಲ್ಲಿ ಇಲ್ಲಿ ಏರ್ಟೇಲ್ ಕಚೇರಿ ಎಲ್ಲಿದೆ ಎಂದು ವಿಚಾರಿಸಿದರು. ಈ ವೇಳೆ ಅವರು ಉತ್ತರಿಸಲು ಆಲೋಚಿಸುತ್ತಿರುವಂತೆ ಆ್ಯಕ್ಟೀವಾದ ಹಿಂಭಾಗದಲ್ಲಿ ಕುಳಿತಿದ್ದ ಮನೀಶ್ ಸುದರ್ಶನ್ ನಾಯಕ್ ರವರ ಕೈಯಲ್ಲಿದ್ದ ಹಣದ ಬ್ಯಾಗನ್ನು ಕಸಿದು ತಾವು ಬಂದ ಆ್ಯಕ್ಟೀವಾದಲ್ಲಿ ಪರಾರಿಯಾಗಿದ್ದರು. ಕೃತ್ಯ ನಡೆಸಿದ ವಿಖ್ಯಾತ್ ನ ಆ್ಯಕ್ಟೀವಾವನ್ನು ಆತನ ಮನೆಯಲ್ಲಿಟ್ಟು ಬ್ಯಾಗಿನಲ್ಲಿದ್ದ ಚಿಲ್ಲರೆ ಹಣವನ್ನು ಮನೆಯಲ್ಲಿಟ್ಟು ಉಳಿದ ಹಣದೊಂದಿಗೆ ರಾತ್ರೀಯೇ ಮನೆ ಬಿಟ್ಟ ಅವರಿಬ್ಬರು ಉಪ್ಪಿನಂಗಡಿವರೆಗೆ ಬಸ್ಸಿನಲ್ಲಿ ತೆರಳಿ ಅಲ್ಲಿಂದ ಬೆಂಗಳೂರಿಗೆ ತೆರಳುವ ಬಸ್ಸು ಹತ್ತಿದ್ದರು. ಅಲ್ಲಿ ಎರಡು ದಿನಗಳ ಕಾಲ ನಿಂತು ಬಳಿಕ ಅಲ್ಲಿಂದ ಗೋವಾ ಸಹಿತ ವಿವಿಧ ಕಡೆಗಳಿಗೆ ತೆರಳಿ ಸುತ್ತಾಡಿ ದರೋಡೆಗೈದ ಹಣದಲ್ಲಿ ಮಜಾ ಮಾಡಿದ್ದರು. ದಿನಗಳ ಹಿಂದೆ ಮರಳಿ ಊರಿಗೆ ಬಂದು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅವರು ವರ್ತಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.