News Kannada
Tuesday, December 06 2022

ಕರಾವಳಿ

ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರು ದಾಳಿ: ಸ್ಥಳಿಯರಲ್ಲಿ ಆತಂಕ

Photo Credit :

ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರು ದಾಳಿ: ಸ್ಥಳಿಯರಲ್ಲಿ ಆತಂಕ

ಉಳ್ಳಾಲ: ಅಮಾಯಕ ಯುವಕನ ಮೇಲೆ ಆಗಂತುಕರ ತಂಡವೊಂದು ತಲವಾರು ದಾಳಿಗೈದಿರುವ ಘಟನೆ ರಾಣಿಪುರ ಸಮೀಪದ ಭಂಡಾರಬೈಲು ಎಂಬಲ್ಲಿ ಶನಿವಾರ ರಾತ್ರಿ 8.30ರ ಸುಮಾರಿಗೆ ಸಂಭವಿಸಿದ್ದು, ಘಟನೆಯಿಂದ ಉಳ್ಳಾಲ ಠಾಣಾ ಸರಹದ್ದಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅಂಬ್ಲಮೊಗರು ಕ್ವಾಟ್ರಗುತ್ತು ನಿವಾಸಿ ನಾಗೇಶ್ ಮೂಲ್ಯ ಎಂಬವರ ಪುತ್ರ ಚಿರಂಜೀವಿ (24) ತಲವಾರು ದಾಳಿಗೆ ಒಳಗಾದವರು. ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಕೆಲಸದ ಹುಡುಕಾಟದಲ್ಲಿದ್ದ ಚಿರಂಜೀವಿ ಮನೆ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಕುತ್ತಾರು ಸಮೀಪವಿದ್ದ ಚಿರಂಜೀವಿಗೆ ಮನೆಯಿಂದ ಕರೆ ಮಾಡಿದ್ದ ಸಹೋದರ ಪದಾರ್ಥ ತರಲೆಂದು ಹೇಳಿದ್ದ. ಅದರಂತೆ ಬೈಕಿನಲ್ಲಿ ಪದಾರ್ಥ ಹಿಡಿದುಕೊಂಡು, ಕೈಯಲ್ಲೇ ಹೆಲ್ಮೆಟ್ ಹಿಡಿದುಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ರಾಣಿಪುರ ಚರ್ಚ್ ನ ಮುಂಭಾಗದಿಂದ ಕೆಳಗಿಳಿದು ಭಂಡಾರಬೈಲು ಸಮೀಪ ತಲುಪುತ್ತಿದ್ದಂತೆ ಚಿರಂಜೀವಿ ಅವರನ್ನು ಹಿಂಬದಿಯಿಂದ ಬೈಕೊಂದು ಹಿಂಬಾಲಿಸಿಕೊಂಡು ಬರುವುದು ಗಮನಿಸಿದ್ದರು. ಕೂಡಲೇ ಬೈಕನ್ನು ಮೆಲ್ಲನೆ ಮಾಡಿ, ಹಿಂಬದಿಯಲ್ಲಿರುವ ಬೈಕನ್ನು ಗಮನಿಸುವಷ್ಟರಲ್ಲಿ ಕಪ್ಪು ಬಣ್ಣದ ಪಲ್ಸಾರ್ ಬೈಕಿನಲ್ಲಿದ್ದ ಓರ್ವ ಹೆಲ್ಮೆಟ್ ಧಾರಿ ಬೈಕ್ ಚಲಾಯಿಸುತ್ತಿದ್ದರೆ, ಹಿಂಬದಿ ಕುಳಿತಿದ್ದ ಇಬ್ಬರು ತಲವಾರಿನಿಂದ ಚಿರಂಜೀವಿ ಅವರ ತಲೆಯ ಹಿಂಭಾಗಕ್ಕೆ ಕಡಿದಿದ್ದಾರೆ. ಕೂಡಲೇ ನೆಲಕ್ಕೆ ಉರುಳುತ್ತಿದ್ದಂತೆ, ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ. ಆದರೆ ಚಿರಂಜೀವಿ ಖುದ್ದು ಬೈಕ್ ಚಲಾಯಿಸಿಕೊಂಡು ಕುತ್ತಾರುವರೆಗೆ ಬಂದಿದ್ದು, ಅಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ರಾಜೇಶ್ ಎಂಬವರು ಇನ್ನೋರ್ವ ಸ್ನೇಹಿತನ ಜತೆಗೆ ಸೇರಿಕೊಂಡು ಚಿರಂಜೀವಿಯವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರ್ ಎಸ್ಎಸ್ ಕಾರ್ಯಕರ್ತನ ಹತ್ಯೆ ಯತ್ನವೂ ಇಲ್ಲೇ ನಡೆದಿತ್ತು !
2016ರ ನ.10ರಂದು ಇದೇ ಭಂಡಾರಬೈಲು ಪ್ರದೇಶದಲ್ಲಿ ರಾತ್ರಿ 9ರ ವೇಳೆ ಕೆಲಸದಿಂದ ವಾಪಸ್ಸಾಗುತ್ತಿದ್ದ ಆರ್ ಎಸ್ ಎಸ್ ಕಾರ್ಯಕರ್ತ ರಾಮಮೋಹನ್ ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆಗೆ ಯತ್ನಿಸಿತ್ತು. ಇದೀಗ ಅದೇ ಸ್ಥಳದಲ್ಲಿ ಚಿರಂಜೀವಿ ಅವರ ಮೇಲೆಯೂ ದಾಳಿ ನಡೆದಿದೆ. ಅಂದೂ ಕಪ್ಪು ಪಲ್ಸಾರ್ ಬೈಕಿನಲ್ಲಿ ಬಂದಿದ್ದ ತಂಡ ಕೃತ್ಯ ಎಸಗಿತ್ತು. ಆದರೆ ಈವರೆಗೂ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ಅದೇ ತಂಡ ಈ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿವೆ.

ಸಿಪಿಎಂ ಸದಸ್ಯರ ಪುತ್ರ:
ಐಟಿಐ ಮುಗಿಸಿರುವ ಚಿರಂಜೀವಿ ತಾನಾಯಿತು ತನ್ನ ಸ್ನೇಹಿತರಾಯಿತು ಅನ್ನುವ ವ್ಯಕ್ತಿತ್ವದವನು. ತಂದೆ ಸಿಪಿಎಂನಲ್ಲಿ ಸಕ್ರಿಯ ಸದಸ್ಯರಾಗಿದ್ದರೂ, ಚಿರಂಜೀವಿ ಯಾವುದರಲ್ಲಿಯೂ ಗುರುತಿಸಿಕೊಂಡಿರಲಿಲ್ಲ. ಹೆಚ್ಚಾಗಿ ಸ್ನೇಹಿತರ ಜತೆಗೆ ಸಮಯ ಕಳೆಯುತ್ತಿದ್ದ ಈತ ಯಾವುದೇ ಸಂಘಟನೆಗಳ ವಿಚಾರದಲ್ಲಿ ತಲೆಕೆಡಿಸಿದವನಲ್ಲ. ಬೈಕಿನ ಹಿಂಬದಿಯಲ್ಲಿ `ಸ್ವಾಮಿ ಕೊರಗಜ್ಜ ‘ ಎಂದು ಬರೆದಿತ್ತು. ಬಹುಷ: ಅದನ್ನು ಗಮನಿಸಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಂದು ಚಿರಂಜೀವಿ ಪೊಲೀಸರಿಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್, ಡಿಸಿಪಿ ಶಾಂತರಾಜು, ಎಸಿಪಿ ಶೃತಿ ಎನ್.ಆರ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ಶಾಲೆಗೆ ನುಗ್ಗಿದ ಕಳ್ಳರು: ಲ್ಯಾಪ್ ಟಾಪ್ ಕಳವು

ಬಂಟ್ವಾಳದ ಗಲಭೆಯನ್ನು ಹಬ್ಬಿಸುವ ಸಲುವಾಗಿ ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿರುವ ಆರೋಪ ಸಾರ್ವಜನಿಕರು ಮಾಡಿದ್ದಾರೆ. ಕುತ್ತಾರು, ರಾಣಿಪುರ, ದೇರಳಕಟ್ಟೆ, ತೊಕ್ಕೊಟ್ಟು, ಉಳ್ಳಾಲ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ವಜ್ರಾ ಪೊಲೀಸರು ಬೀಡುಬಿಟ್ಟಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು