News Kannada
Sunday, December 04 2022

ಕರಾವಳಿ

ಒಟ್ಟಾಗಿ ದುಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ದಿನೇಶ್ ಗುಂಡೂರಾವ್

Photo Credit :

ಒಟ್ಟಾಗಿ ದುಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ದಿನೇಶ್ ಗುಂಡೂರಾವ್

ಸುಳ್ಯ: ಎಲ್ಲಾ ಭೇದ ಭಾವಗಳನ್ನೂ ದೂರವಿಸಿರಿ ಎಲ್ಲರೂ ಒಟ್ಟಾಗಿ ದುಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲಯನ್ಸ್ ಸೇವಾ ಸದನದಲ್ಲಿ ನಡೆದ ತಾಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷ ಸೃಷ್ಠಿಸಿ ಶಾಂತಿಭಂಗ ಮಾಡುವ ಮೂಲಕ ಸಮಾಜವನ್ನು ಒಡೆದು ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತಿದೆ. ಆದರೆ ಇವರ ಈ ಕುಮ್ಮಕ್ಕು ಯಶಸ್ಸು ಗಳಿಸುವುದಿಲ್ಲ. ಈ ರೀತಿಯ ಪ್ರಯತ್ನವನ್ನು ಜನತೆ ತಿರಸ್ಕರಿಸಲಿದೆ ಎಂದು ಅವರು ಹೇಳಿದರು.

ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಾಗಬೇಕು ಆ ದೃಷ್ಠಿಯಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ಬೂತ್ ಮಟ್ಟಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಲಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮೋದಿಯನ್ನು ಉತ್ತಮ ಪ್ರಧಾನಿ ಎಂದು ಬಿಂಬಿಸುವ ಪ್ರಯತ್ನ ನಡೆಯುತಿದೆ. ಈ ರೀತಿಯ ಪ್ರಚಾರಗಳನ್ನು ಮಾಧ್ಯಮಗಳು ಪರಾಂಬರಿಸಿ ಪ್ರಕಟಿಸಬೇಕು ಎಂದರು. ಹಿಂದೆ ಜಿಎಸ್ಟಿ, ಎಫ್ಡಿಐ ಯನ್ನು ವಿರೋಧಿಸುತ್ತಿದ್ದ ಬಿಜೆಪಿ ತಾವು ಅಧಿಕಾರಕ್ಕೆ ಬಂದಾಗ ಅದನ್ನು ಮಾಡಿ ತಮ್ಮದು ಎಂದು ಬೀಗುತ್ತಿದ್ದಾರೆ. ಬಿಜೆಪಿಯವರ ವಿರೋಧ ಇಲ್ಲದಿದ್ದರೆ ಜಿಎಸ್ಟಿ ನಾಲ್ಕು ವರ್ಷಗಳ ಹಿಂದೆಯೇ ಅನುಷ್ಠಾನ ಆಗುತ್ತಿತ್ತು ಎಂದ ಅವರು ಕಾಶ್ಮೀರ ವಿಚಾರ, ಚೈನಾ ತಗಾದೆ ಬಗ್ಗೆ ಪ್ರಧಾನಿ ಮೌನ ಯಾಕೆ ಎಂದು ಪ್ರಶ್ನಿಸಿದರು.

ಜನರನ್ನು ಕೊಲ್ಲುವುದು ಕೀಳು ರಾಜಕೀಯ- ವಿಷ್ಣುನಾಥ್:
ಇಂದು ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಗೋವಿನ ಹೆಸರಿನಲ್ಲಿ ಜನರನ್ನು ಕೊಲೆ ಮಾಡುತ್ತಿರುವುದು ಅತ್ಯಂತ ಕೀಳುಮಟ್ಟದ ರಾಜಕೀಯ ಇದನ್ನು ಜನತೆ ತಿರಸ್ಕರಿಸಬೇಕು ಎಂದು ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಹಾಗು ಶಾಸಕ ಪಿ.ಸಿ.ವಿಷ್ಣುನಾಥ್ ಹೇಳಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಪ್ರಯತ್ನ ಎಲ್ಲೆಡೆ ನಡೆಯುತಿದೆ. ಗೋವಿನ ಹೆಸರಲ್ಲಿ ಹಲವು ಮಂದಿಯ ಕೊಲೆಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಠಕರ ಎಂದರು. ಕಾಂಗ್ರೆಸ್ ನಿಜವಾದ ಜಾತ್ಯಾತೀತ ಪಕ್ಷ, ಕಾಂಗ್ರೆಸ್ನಲ್ಲಿರುವ ಎಲ್ಲರಿಗೂ ಅವರದ್ದೇ ಆದ ಧರ್ಮ, ಆಚಾರ ಇದೆ. ಅದಕ್ಕೆ ಯಾರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಹೇಳಿದರು.

ವಿದೇಶದಿಂದ 30 ಲಕ್ಷ ಕೋಟಿ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡಲಾಗುವುದು ಎಂದು ಹೇಳಿ ಅಧಿಕಾರಕ್ಕೆ ಬಂದ ನರೆಂದ್ರ ಮೋದಿ ಅದನ್ನು ಮಾಡಿದ್ದಾರಾ, 15 ಲಕ್ಷ ಯಾರಿಗಾದರೂ ಸಿಕ್ಕಿದಾ, 40 ರೂ ಬೆಲೆಗೆ ಪೆಟ್ರೋಲ್ ಕೊಟ್ಟರಾ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಹೇಳಿ ಯಾರಿಗಾದರೂ ಉದ್ಯೋಗ ಸಿಕ್ಕಿತಾ, 56 ಇಂಚು ಎದೆಯ ಪ್ರಧಾನಿ ದೇಶದಲ್ಲಿನ ಭಯೋತ್ಪಾದನೆಯನ್ನೂ ನಿಲ್ಲಿಸಿದ್ರಾ ಎಂದು ಪ್ರಶ್ನಿಸಿದ ಅವರು ಮೋದಿಯವರದ್ದು ಜನರನ್ನು ಮಂಕು ಮಾಡುವ ನಾಟಕ ಎಂದು ಆಪಾದಿಸಿದರು.

See also  ಸುಬ್ರಹ್ಮಣ್ಯದಲ್ಲಿ ಗಲಾಟೆ ಪ್ರಕರಣ: ಗುರುಪ್ರಸಾದ್ ಪಂಜ ಬಂಧನ

ಜುಲೈ 30ರ ಒಳಗಾಗಿ ಎಲ್ಲಾ ಕಾಂಗ್ರೆಸ್ ಬೂತ್ ಸಮಿತಿಗಳ ನೇಮಕ ಆಗಬೇಕು, ಪ್ರತಿ ತಿಂಗಳೂ ಪಕ್ಷದಲ್ಲಿ ಲೆಕ್ಕ ಪರಿಶೀಲನೆ ನಡೆಯಬೇಕು, ಸಿದ್ಧರಾಮಯ್ಯ ಸರ್ಕಾರದ ಸಾಧನೆಯನ್ನು ಮನೆ ಮನೆ ತಲುಪಿಸಬೇಕು ಎಂದು ಕರೆ ನೀಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ನ ನಾಲ್ಕು ವರ್ಷದ ಆಡಳಿತದಲ್ಲಿ ಯಾವುದೇ ಹಗರಣವಾಗಲೀ, ಕಪ್ಪು ಚುಕ್ಕೆಯಾಗಲೀ ಇಲ್ಲ ಎಂಬುದನ್ನು ಜನತೆಗೆ ತಿಳಿಸುವ ಕೆಲಸ ಆಗಬೇಕು ಎಂದರು.

ಗಲಭೆಯಲ್ಲಿ ಕಾಂಗ್ರೆಸ್ನ ಪಾತ್ರವಿಲ್ಲ-ರಮಾನಾಥ ರೈ
ಜಿಲ್ಲೆಯ ಶಾಂತಿಯನ್ನು ಕದಡುವ ದೃಷ್ಠಿಯಿಂದ ಬಂಟ್ವಾಳ ಮತ್ತಿತರ ಕಡೆ ನಡೆದ ಗಲಭೆಯಲ್ಲಿ ಕಾಂಗ್ರೆಸ್ನ ಪಾತ್ರವಿಲ್ಲ ಎಂದು ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಸಮಾಜದ ಸಾಮರಸ್ಯವನ್ನು ಕದಡುವ ದೃಷ್ಠಿಯಿಂದ ಕೆಲವು ಸಂಘಟನೆಗಳು ಈ ರೀತಿಯ ಗಲಭೆಗಳನ್ನು ಸೃಷ್ಠಿಸುತಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕೆಂದ ದೃಷ್ಠಿಯಿಂದ ಮುಂದಿನ ದಿನಗಳಲ್ಲಿ ಮಂಗಳೂರಿನಿಂದ ಮಾಣಿಯವರೆಗೆ ಶಾಂತಿಯಾತ್ರೆ ನಡೆಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ.ಜಿಲ್ಲಾ ಪ.ಜಾತಿ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ, ಕೆಪಿಸಿಸಿ ಸದಸ್ಯ ಡಾ.ಬಿ.ರಘು, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಭಾ ಚಿಲ್ತಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್, ಕಾಂಗ್ರೆಸ್ ಮುಖಂಡರಾದ ಎಸ್.ಬಿ.ದಿನೇಶ್, ಎಸ್.ಸಂಶುದ್ದೀನ್, ಪಡ್ಡಂಬೈಲು ವೆಂಕಟ್ರಮಣ ಗೌಡ, ಟಿ.ಎಂ.ಶಹೀದ್, ಅಬ್ದುಲ್ ಮಜೀದ್, ಪಿ.ಎ.ಮಹಮ್ಮದ್, ಅಚ್ಚುತ ಮಲ್ಕಜೆ, ಮುತ್ತಪ್ಪ ಪೂಜಾರಿ, ಚಂದ್ರಲಿಂಗಂ, ಇಸಾಕ್ ಹಾಜಿ, ನವೀನ್ ಡಿಸೋಜ, ಸತ್ಯನ್ ಪುತ್ತೂರು, ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯಕ್ಕಾಗಿ ಡಿವಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ: ರೈ
ಹುಟ್ಟೂರಾದ ಸುಳ್ಯಕ್ಕೆ ಡಿ.ವಿ.ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಮಾಡಿದ ಅಭಿವೃದ್ಧಿ ಕೆಲಸಕ್ಕಿಂತ ಹೆಚ್ಚು ಕೆಲಸ ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾನು ಮಾಡಿದ್ದೇನೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ಸದಾನಂದ ಗೌಡರ ಊರಿಗೆ ಅವರಿಗಿಂತ ಹೆಚ್ಚು ಬಾರಿ ತಾನು ಭೇಟಿ ನೀಡಿದ್ದೇನೆ ಎಂದ ಅವರು ಸುಳ್ಯದಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕಾರಣಕ್ಕೆ ತಾನು ವಿಶೇಷ ಕಾಳಜಿ ವಹಿಸಿದ್ದೇನೆ ಎಂದು ಬೊಟ್ಟು ಮಾಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು