News Kannada
Friday, October 07 2022

ಕರಾವಳಿ

ವಸತಿ ಅದಾಲತ್ ನಲ್ಲಿ ಫಲಾನುಭವಿಗಳ ಆಕ್ರೋಶ - 1 min read

Photo Credit :

ವಸತಿ ಅದಾಲತ್ ನಲ್ಲಿ ಫಲಾನುಭವಿಗಳ ಆಕ್ರೋಶ

ಸುಳ್ಯ: ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸುಳ್ಯ ತಾಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಸತಿ ಯೋಜನೆಯ ಪ್ರಗತಿ ಕುಂಠಿತವಾಗಿದ್ದು, ಅಧಿಕಾರಿಗಳ ತಂಡ ರಚಿಸಿ ನಿಗಮದ ಹಂತದಲ್ಲಿಯೇ ಈ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಸತಿ ಅದಾಲತ್ ನಲ್ಲಿ ನಿರ್ಧರಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮತ್ತು ಸುಳ್ಯ ತಾಲೂಕು ಪಂಚಾಯಿತಿ ವತಿಯಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಂತ್ರಾಂಶಗಳ ಬದಲಾವಣೆ, ಆಧಾರ್ ಲಿಂಕ್, ಜಿಪಿಎಸ್ ಅಪ್ಲೋಡ್, ಬ್ಯಾಂಕ್ ಖಾತೆಗಳ ಲಿಂಕ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಮನೆ ನಿರ್ಮಾಣ ಎರಡು ಅಥವಾ ಮೂರು ಹಂತ ಪೂರ್ತಿಯಾಗಿದ್ದರೂ ಅನುದಾನ ಬಿಡುಗಡೆಗೊಂಡಿಲ್ಲ. ಇದರಿಂದ ಹಲವು ಮಂದಿ ಫಲಾನುಭವಿಗಳು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಂತಹ ಸಮಸ್ಯೆಗಳಿದ್ದು ಇವುಗಳನ್ನು ಕ್ರೂಢೀಕರಿಸಿ ಜಿಲ್ಲೆಯ ವಸತಿ ಯೋಜನೆಗಳ ನೋಡೆಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ತಂಡವನ್ನು ರಚಿಸಿ ತಂಡ ಬೆಂಗಳೂರಿಗೆ ತೆರಳಿ ನಿಗಮದ ಹಂತದಲ್ಲಿ ಈ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು 15 ದಿನದಲ್ಲಿ ಪರಿಹರಿಸಲಾಗುವುದು ಎಂದು ಜಿ.ಪಂ.ಸಿ.ಇ.ಒ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಮರಳು ಸಮಸ್ಯೆಯಿಂದ ಕೆಲಸ ಕುಂಠಿತ
ಮರಳಿನ ಅಭಾವ, ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಏರ್ಪಡಿಸಿದ ನಿರ್ಬಂಧದಿಂದಾಗಿ ವಸತಿ ಯೋಜನೆಗಳ ಬಹುತೇಕ ಮನೆಗಳು ಸ್ಥಗಿತವಾಗಿದೆ ಎಂದು ಫಲಾನುಭವಿಗಳು ಮತ್ತು ಜನಪ್ರತಿನಿಧಿಗಳು ಸಭೆಯ ಗಮನಕ್ಕೆ ತಂದರು. ಮರಳು ಸಮಸ್ಯೆಯು ಇನ್ನೊಂದು ವಾರದಲ್ಲಿ ಪರಿಹಾರಗೊಳ್ಳಲಿದೆ. ಮರಳು ತೆಗೆಯುವುದಕ್ಕೆ ಇರುವ ಕಾನೂನಿನಲ್ಲಿ ಕೆಲವೊಂದು ರಿಯಾಯಿತಿಯನ್ನು ನೀಡಲಾಗಿದೆ. ಸರ್ಕಾರದ ವಸತಿ ಯೋಜನೆಗಳಿಗೆ ಪಿಕ್ ಅಫ್ ಮತ್ತಿತರ ಲಘು ವಾಹನಗಳಲ್ಲಿ ಮರಳು ಸಾಗಾಟ ಮಾಡುವದನ್ನು ತಡೆದು ಕೇಸು ಹಾಕದಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದು ವಿನಂತಿಸಲಾಗಿದೆ. ಅದರಂತೆ ಇನ್ನು ವಸತಿ ಯೋಜನೆಗಳಿಗೆ ಮರಳಿನ ಅಭಾವ ಎದುರಾಗದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದರು.

ಚಪ್ಪರದಲ್ಲಿ ವಾಸ.. ಫಲಾನುಭವಿಗಳ ಅಳಲು
ನೂರಾರು ಮಂದಿ ವಸತಿ ಯೋಜನೆಯ ಫಲಾನುಭವಿಗಳು ಅದಾಲತ್ ನಲ್ಲಿ ಭಾಗವಹಿಸಿದ್ದರು. ತಾ.ಪಂ.ಸಾಮರ್ಥ್ಯ ಸೌಧದ ಸಭಾಂಗಣ ತುಂಬಿ ತುಳುಕಿತ್ತು. ಪ್ರತಿಯೊಬ್ಬರೂ ಹಲವು ಸಮಸ್ಯೆಗಳನ್ನು ಸಭೆಯ ಮುಂದಿರಿಸಿದರು. ಪಂಚಾಂಗ, ಗೋಡೆ ಆದರೂ ಹಣ ಸಿಕ್ಕಿಲ್ಲ, ಕಳೆದ ಎಂಟು ತಿಂಗಳಿನಿಂದ ಚಪ್ಪರ ಹಾಕಿ ಮನೆ ಮಂದಿಯೆಲ್ಲ ಅದರಡಿಯಲ್ಲಿ ವಾಸಿಸುತ್ತಿದ್ದೇವೆ ಎಂದು ಸಂಪಾಜೆ ಗ್ರಾಮದ ಫಲಾನುಭವಿ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಮೂರು ಹಂತದ ಕೆಲಸ ಪೂರ್ತಿಯಾದರೂ ಆಧಾರ್ ಲಿಂಕ್ ಆಗಿಲ್ಲ ಎಂದು ಹಣ ಸಿಕ್ಕಿಲ್ಲ, ಆಧಾರ್ ಮತ್ತು ಒಪ್ಪಿಗೆ ಪತ್ರವನ್ನು ನಾಲ್ಕು ತಿಂಗಳ ಹಿಂದೆಯೇ ನೀಡಲಾಗಿದ್ದರೂ ಆಧಾರ್ ಲಿಂಕ್ ಆಗಿಲ್ಲ ಎಂಬ ಕಾರಣಕ್ಕೆ ಹಣ ನೀಡಿಲ್ಲ ಎಂದು ಹರಿಹರ ಗ್ರಾ.ಪಂ.ನ ಫಲಾನುಭವಿ ತಮ್ಮ ನೋವು ತೋಡಿಕೊಂಡರು. ಹೀಗೆ ಎರಡು, ಮೂರು ಹಂತದ ಕಾಮಗಾರಿ ಆಗಿದ್ದರೂ ಅನುದಾನ ಬಿಡುಗಡೆಯಾಗದೆ ಇರುವ ಬಗ್ಗೆ ಹಲವರು ತಮ್ಮ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ವಸತಿ ಯೋಜನೆಯಲ್ಲಿನ ಪ್ರತಿ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

See also  ಕುಡಿದು ಬಿಲ್ ಹಣ ನೀಡದ ಕ್ರೀಡಾಪಟುವಿಗೆ ಹಲ್ಲೆ: ಮೂವರ ಬಂಧನ

ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ.ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಜಿಲ್ಲಾ ಯೋಜನಾ ನಿರ್ದೇಶಕ ಟಿ.ಎಸ್.ಲೋಕೇಶ್, ವಸತಿ ಯೋಜನೆಯ ಜಿಲ್ಲಾ ನೋಡೆಲ್ ಅಧಿಕಾರಿ ಜ್ಯೋತಿ ಲಕ್ಷ್ಮಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು