News Kannada
Sunday, September 25 2022

ಕರಾವಳಿ

ಮನೆಗೆ ನುಗ್ಗಿ ವ್ಯಕ್ತಿಯ ಕಟ್ಟಿಹಾಕಿ ನಗನಗದು ದರೋಡೆ - 1 min read

Photo Credit :

ಮನೆಗೆ ನುಗ್ಗಿ ವ್ಯಕ್ತಿಯ ಕಟ್ಟಿಹಾಕಿ ನಗನಗದು ದರೋಡೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ದೇಂತನಾಜೆ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ ಮನೆಯಲ್ಲಿದ್ದ ವ್ಯಕ್ತಿಯನ್ನು ಕಟ್ಟಿ ಹಾಕಿ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಎ.ಟಿ,ಎಂ ಕಾರ್ಡ್ ಗಳನ್ನು ಅಪಹರಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಲಕ್ಷೀನಾರಾಯಣ ನೂರಿತ್ತಾಯ ಎಂಬವರ ಪುತ್ರ ನಾಗೇಂದ್ರ ಪ್ರಸಾದ್ ಎಂಬವರ ಮನೆಯಲ್ಲಿಯೇ ದರೋಡೆ ನಡೆದಿದೆ. ಇಲ್ಲಿ ಪ್ರಸಾದ್ ಅವರು ಒಬ್ಬರೇ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ 10.30 ಸುಮಾರಿಗೆ ಪ್ರಸಾದ್ ಅವರು ಪೇಟೆಯಿಂದ ಮನೆಗೆ ಬಂದಿದ್ದಾರೆ. ಅವರು ಮನೆಯ ಬೀಗ ತೆಗೆದು ಒಳಗೆಹೋಗುತ್ತಿದ್ದಂತೆಯೇ ಮನೆಯ ಸಮೀಪವೇ ಅಡಗಿ ಕುಳಿತಿದ್ದ ದರೋಡೆಕೋರರು ಅವರ ಮೇಲೆ ದಾಳಿ ನಡೆಸಿದ್ದಾರೆ. ಕೈಯಲ್ಲಿ ಚಾಕು ಹಾಗೂ ರಿವಾಲ್ವರ್ ಹಿಡಿದಿದ್ದ ತಂಡ ಅವರನ್ನು ಹಿಡಿದು ಮನೆಯ ಒಳಗಿದ್ದ ಕುರ್ಚಿಯೊಂದಕ್ಕೆ ಕಟ್ಟಿ ಹಾಕಿದ್ದಾರೆ. ಕೈಗಳೆರಡನ್ನೂ ಕಟ್ಟಿ ಕಾಲುಗಳನ್ನು ಕುರ್ಚಿಯ ಕಾಲಿಗೆ ಸೇರಿಸಿ ಕಟ್ಟಿದ್ದಾರೆ, ಹಾಗೂ ಅದರ ಮೇಲೆ ಪ್ಲಾಸ್ಟರ್ ಹಾಕಿದ್ದಾರೆ. ಬಳಿಕ ಇಡೀ ಮನೆಯನ್ನು ಜಾಲಾಡಿದ್ದಾರೆ. ದರೋಡೆಕೋರರು ಮನೆಯಲ್ಲಿದ್ದ 40 ಸಾವಿರ ನಗದು ಹಣ, ಸುಮಾರು 60 ಸಾವಿರ ಮೌಲ್ಯದ ಚಿನ್ನದ ಸರ, ಮೊಬೈಲ್,ಎ.ಟಿ.ಎಂ ಕಾರ್ಡ್ ಗಳನ್ನು ಅಪಹರಿಸಿದ್ದಾರೆ. ಹಣ ನೀಡುವಂತೆಯೂ ಇಲ್ಲದಿದ್ದರೆ ಕೊಲೆ ಮಾಡುವುದಾಗಿಯೂ ಪ್ರಸಾದರಿಗೆ ಬೆದರಿಕೆ ಹಾಕಿರುವುದಾಗಿ ಹಾಗೂ ಚೂರಿ ಹಿಡಿದು ಬೆದರಿಸಿ ಎ.ಟಿ.ಎಂ ಕಾರ್ಡ್ ನ ನಂಬರ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಸಾದನನ್ನು ಕಟ್ಟಿ ಹಾಕಿಯೇ ದರೋಡೆಕೋರರು ತೆರಳಿದ್ದು ಬಳಿಕ ಅವರು ಹಲ್ಲಿನಿಂದ ಕಚ್ಚಿಯೇ ಕೈಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದ್ದಾರೆ. ಇದಕ್ಕಾಗಿ ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ಅವರು ಪರದಾಡಿದ್ದಾರೆ. ಬಳಿಕ ನೆರೆಯ ಮನೆಗೆ ತೆರಳಿ ಮಾಹಿತಿ ನೀಡಿದ್ದಾರೆ ಹಾಗೂ ಕೂಡಲೇ ಧರ್ಮಸ್ಥಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಎ.ಎಸ್ಪಿ ಡಾ. ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದ್ದು ಅದು ಮನೆಯಿಂದ ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿ ಹೋಗಿ ಹಿಂತಿರುಗಿದೆ. ಬೆರಳಚ್ಚು ತಜ್ಞರೂ ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಪಟ್ರಮೆ ರಸ್ತೆಗೆ ತಾಗಿಕೊಂಡಿರುವ ಒಂಟಿ ಮನೆ ಇದಾಗಿದ್ದು ಮನೆಯಲ್ಲಿ ಇವರೊಬ್ಬರೇ ಇರುವ ಮಾಹಿತಿಯಿರುವವರು ಯಾರಾದರೂ ದರೋಡೆಕೋರರೊಂದಿಗೆ ಸಹಕರಿಸಿರಬಹುದು ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ. ತಂಡದ ಸದಸ್ಯರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರಸಾದ್ ತಿಳಿಸಿದ್ದಾರೆ.

ದರೋಡೆಕೋರರು ಅಲ್ಲಿಂದ ತೆರಳಿ ರಾತ್ರಿಯೇ ಅಪಹರಿಸಿದ್ದ ಎ.ಟಿ.ಎಂ ಕಾರ್ಡ್ ನ್ನು ಉಪಯೋಗಿಸಿ ಮೂವತ್ತು ಸಾವಿರ ನಗದನ್ನು ತೆಗೆದಿದ್ದಾರೆ. ಮತ್ತೊಂದು ಕಾರ್ಡ್ ನ್ನು ಉಪಯೋಗಿಸಿ ಬೆಳಿಗ್ಗೆ ರೂ 40 ಸಾವಿರ ನಗದೀಕರಿಸಿರುವುದಾಗಿಯೂ ತಿಳಿದು ಬಂದಿದೆ. ದರೋಡೆಕೋರರು ಹಣ ಡ್ರಾ ಮಾಡಿರುವ ಎ.ಟಿ.ಎಂ ಅನ್ನು ಪೊಲೀಸರು ಪತ್ತೆ ಹಚ್ಚಿದ್ದು ಅಲ್ಲಿನ ಸಿಸಿ ಕ್ಯೆಮಾರಾಗಳಲ್ಲಿ ದರೋಡೆಕೋರರ ಚಹರೆಗಳು ಪತ್ತೆಯಾಗಬಹುದೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು ತನಿಖೆ ನಡೆಯುತ್ತಿದೆ.

See also  ರೈಲಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು