ಸುಳ್ಯ: ಸುಳ್ಯ ನಗರ ಪಂಚಾಯತಿಯ ಸ್ವಚ್ಚ ಭಾರತ್ ಮಿಷನ್ ರಾಯಭಾರಿ ಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ರಾಜೀನಾಮೆ ನೀಡಿದ್ದಾರೆ. ತಮ್ಮ ಮನೆಯ ಆವರಣ ಹೊಂದಿಕೊಂಡಿರುವ ಪ.ಪಂ.ನ ಗಡಿಭಾಗದ ಖಾಲಿ ಜಾಗದಲ್ಲಿ ಅಂದಾಜು 60 ಸಾವಿರ ರೂ. ವೆಚ್ಚದಲ್ಲಿ ನೆಟ್ಟಿರುವ ಗಿಡಗಳನ್ನು ನಗರ ಪಂಚಾಯಿತಿಯವರು ಕಿತ್ತೆಸೆದಿರುವುದಕ್ಕೆ ಬೇಸರಗೊಂಡು ರಾಜೀನಾಮೆ ನೀಡುತ್ತಿರುವುದಾಗಿ ರಾಜಿನಾಮೆ ಪತ್ರದಲ್ಲಿ ಅವರು ವಿವರಿಸಿದ್ದಾರೆ.
ಶನಿವಾರ ಚಿದಾನಂದ ಪುತ್ರ ಕೆ.ಸಿ.ಅಕ್ಷಯ್ ಹಾಗೂ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಆಯುರ್ವವೇದ ಕಾಲೇಜು ಆಡಳಿತಾಧಿಕಾರಿ ಡಾ.ಲೀಲಾಧರ್, ಮತ್ತಿತರರ ನೇತೃತ್ವದಲ್ಲಿ 50 ಕ್ಕೂ ಅಧಿಕ ಮಂದಿಯ ನಿಯೋಗ ತೆರಳಿ ರಾಜೀನಾಮೆ ಪತ್ರವನ್ನು ನ.ಪಂ. ಮುಖ್ಯಾಧಿಕಾರಿಯಾಗಿ ಗೋಪಾಲ ನಾಯ್ಕ್ ಹಸ್ತಾಂತರಿಸಿದರು. ಪತ್ರದ ಪ್ರತಿಯನ್ನು ಸಂಸದರು, ಕೇಂದ್ರ ಹಾಗೂ ರಾಜ್ಯ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಕಳುಹಿಸಿದ್ದಾರೆ. ಎರಡು ವರ್ಷಗಳಿಂದ ಡಾ.ಕೆ.ವಿ.ಚಿದಾನಂದ ಅವರನ್ನು ನ.ಪಂ. ಸ್ವಚ್ಚತಾ ರಾಯಭಾರಿಯಾಗಿ ನೇಮಿಸಿತ್ತು. ಪತ್ರ ಸ್ವೀಕರಿಸಿದ ಮುಖ್ಯಾಧಿಕಾರಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆ.
ಪ್ರಕರಣ ಏನು?
ಡಾ. ಕೆ.ವಿ.ಚಿದಾನಂದ ಅವರ ಮನೆ ಹಾಗೂ ಪಟ್ಟಣ ಪಂಚಾಯತಿ ಕಚೇರಿ ಹೊಂದಿಕೊಂಡಿದ್ದು ಗಡಿಭಾಗದಲ್ಲಿ ಹಿಂದೆ ಕಂಪೌಂಡ್ ಕಟ್ಟಿಸಿದ್ದರು. ಅದರ ಮೇಲ್ಬಾಗದಲ್ಲಿ ಗಿಡವೊಂದಕ್ಕೆ 750 ರೂ ಬೆಲೆ ಬಾಳುವ 49 ಬೋಗನ್ವಿಲ್ಲಾ ಗಿಡಗಳನ್ನು 60 ಸಾವಿರ ಖರ್ಚು ಮಾಡಿ ನೆಡಿಸಿದ್ದರು.
ಇದನ್ನು ನಗರ ಪಂಚಾಯತಿ ತೆರವು ಮಾಡಿತ್ತು. ತಾವೆಲ್ಲಾ ಸ್ವಚ್ಚ ಭಾರತ ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡು, ಸುಂದರ ಹಸಿರಿನ ಪಟ್ಟಣವನ್ನಾಗಿ ರೂಪಿಸಲು ಪ್ರಯತ್ನಿಸುವಾಗ ನ.ಪಂ.ನ ಈ ರೀತಿಯ ವರ್ತನೆ ನೋವುಂಟು ಮಾಡಿದೆ. ಕನಿಷ್ಟ ದೂರವಾಣಿ ಕರೆ ಮಾಡಿಯಾದರೂ ಮಾತನಾಡಿದ್ದರೆ ತಾನಾಗಿಯೇ ಗಿಡ ತೆರವುಗೊಳಿಸುತ್ತಿದ್ದೆ. ಆದರೆ ನಡೆದುಕೊಂಡ ರೀತಿ ಬೇಸರ ತರಿಸಿದೆ. ಅಲ್ಲದೇ ನ.ಪಂ.ಕಚೇರಿ ಆವರಣದಲ್ಲಿ ಸಾಕಷ್ಟು ಕಸದ ರಾಶಿ, ಗಿಡ ಪೊದೆಗಳು ತುಂಬಿ ತನ್ನ ಮನೆಗೆ ತೊಂದರೆಯುಂಟಾಗುವ ಬಗ್ಗೆ ವಿನಂತಿಸಿದ್ದರೂ ಸ್ಪಂದನೆ ಕೂಡಾ ದೊರೆತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಗಂಟೆಗೂ ಹೆಚ್ಚು ಸಮಯ ಕಾದರು
ರಾಜೀನಾಮೆ ಪತ್ರ ನೀಡಲು ಬಂದ ನಿಯೋಗ ರಾಜಿನಾಮೆ ಪತ್ರ ನೀಡಲು ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗಿ ಬಂತು. ನಿಯೋಗ ತೆರಳಿದ್ದ ವೇಳೆ ಅಧಿಕಾರಿ ಹೊರಹೋಗಿದ್ದರು. ಕಚೇರಿಗೆ ಆಗಮಿಸಿ ಪೋನಾಯಿಸಿದಾಗ ಕರ್ತವ್ಯ ನಿಮಿತ್ತ ಹೊರಹೋಗಿರುವುದಾಗಿ ತಿಳಿಸಿ, ಒಂದೂವರೆ ಗಂಟೆಗಳ ಕಾಲ ಕಳೆದು ಆಗಮಿಸಿದರು. ಬೆಳಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದಾಗ 3.15ಕ್ಕೆ ಬರುವಂತೆ ತಿಳಿಸಿದ್ದರು, ಆದರೆ ನಿಗದಿತ ಸಮಯಕ್ಕೆ ಬಂದರೂ ಒಂದೂವರೆ ಗಂಟೆ ಕಾಯಬೇಕಾಗಿ ಬಂತು ಎಂದು ನಿಯೋಗದಲ್ಲಿದ್ದ ಪ್ರಮುಖರು ಹೇಳಿದರು.