News Kannada
Friday, September 30 2022

ಕರಾವಳಿ

`ಹೇಟ್ ಪಾಲಿಟಿಕ್ಸ್ ಮತ್ತು ಮರ್ಡರ್ ಪಾಲಿಟಿಕ್ಸ್ ಕೊನೆಗೊಳಿಸುವ ಕಾಲ ಬಂದಿದೆ’ - 1 min read

Photo Credit :

`ಹೇಟ್ ಪಾಲಿಟಿಕ್ಸ್ ಮತ್ತು ಮರ್ಡರ್ ಪಾಲಿಟಿಕ್ಸ್ ಕೊನೆಗೊಳಿಸುವ ಕಾಲ ಬಂದಿದೆ'

ಬಂಟ್ವಾಳ: ಮುಸಲ್ಮಾನರನ್ನು ಓಟ್ ಬ್ಯಾಂಕ್ ಮಾಡಿ ಕಾಂಗ್ರೆಸ್ ತುಷ್ಟೀಕರಣ ನೀತಿಯಡಿ ಬಳಸಲಾಗುತ್ತದೆ. ದೇಶದಲ್ಲಿ ಮುಸ್ಲಿಂ ಉಗ್ರವಾದಕ್ಕೆ ಕಾಂಗ್ರೆಸ್ ನೀತಿಯೇ ಕಾರಣ ಎಂದು ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದ್ದಾರೆ.

ಕೊಡಗಿನಿಂದ ಆರಂಭಗೊಂಡ ಬಿಜೆಪಿ ಜನಸುರಕ್ಷಾ ಯಾತ್ರೆ ಸೋಮವಾರ ಬೆಳಗ್ಗೆ ಬಂಟ್ವಾಳ ಕ್ಷೇತ್ರ ಪ್ರವೇಶಿಸಿದ್ದು, ಈ ಸಂದರ್ಭ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಹೇಟ್ ಪಾಲಿಟಿಕ್ಸ್ ಮತ್ತು ಮರ್ಡರ್ ಪಾಲಿಟಿಕ್ಸ್ ಕೊನೆಗೊಳಿಸುವ ಕಾಲ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಡೆದು ಆಳುವ ಕಾರ್ಯನೀತಿ ಅನುಸರಿಸುತ್ತಿದ್ದು, ಹತ್ಯೆಗಳನ್ನು ನಡೆಸುವವರಿಗೆ ಬೆಂಬಲ ಮತ್ತು ದ್ವೇಷದ ರಾಜಕಾರಣ ನಡೆಸುತ್ತಿದೆ ಭಾರತ್ ಮಾತಾ ಕೀ ಜೈ ಎಂದು ಹೇಳಲು ಕೆಲವರು ಹಿಂದೆಮುಂದೆ ನೋಡಲು ಕಾಂಗ್ರೆಸ್ ಎಡಬಿಡಂಗಿ ನೀತಿಯೇ ಕಾರಣ ಎಂದರು. ದೇಶ, ರಾಜ್ಯದಲ್ಲಿ ಸುರಕ್ಷತೆ ತರಬೇಕು, ಹಿಂದುಗಳನ್ನು ಒಡೆಯುವುದು, ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿಯಷ್ಟೇ ಪರಿಗಣಿಸುವುದು, ಮತ್ತೊಬ್ಬರ ವಿಚಾರಧಾರೆಯನ್ನು ಮಟ್ಟ ಹಾಕುವುದು ಕಾಂಗ್ರೆಸ್ ನೀತಿ ಎಂದು ಜೋಷಿ ಟೀಕಿಸಿದರು.

ಸಿದ್ದರಾಮಯ್ಯ ಸಿಎಂ ಆದ ಮೇಲೆ ಕಮೀಷನ್ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕುರಿತು ಪ್ರಧಾನಿ ಹೇಳಿದ್ದು ಸತ್ಯ ಎಂದ ಜೋಷಿ, ಕೆಆರ್ ಡಿಸಿಎಲ್ ಗೆ ಟೆಂಡರ್ ಇಲ್ಲದೆ ಕೋಟ್ಯಂತರ ರೂ. ಮೊತ್ತದ ಕಾಮಗಾರಿ ನಡೆಸಲು ಅನುಮತಿ ನೀಡಿದ್ದು ಈ ಅನುಮಾನಕ್ಕೆ ಕಾರಣ ಎಂದರು. ಅಮಿತ್ ಶಾ ಟೀಕಿಸುವ ಸಿಎಂ, ರಾಹುಲ್ ಪರಮಾಪ್ತ ಕೆ.ಸಿ.ವೇಣುಗೋಪಾಲ್ ಬಗ್ಗೆ ಯಾಕೆ ಹೇಳುವುದಿಲ್ಲ, ವೇಣುಗೋಪಾಲ ಮೇಲೆ ಅತ್ಯಾಚಾರ ಕೇಸ್ ಇದೆ ಎಂದರು.

ನಾನ್ ಸೀರಿಯಸ್, ಪಾರ್ಟ್ ಟೈಂ ರಾಜಕಾರಣಿ ರಾಹುಲ್ ಗಾಂಧಿ ಎಂದು ಹೇಳಿದ ಜೋಷಿ, ರಾಹುಲ್ ಎಡಬಿಡಂಗಿ ನೀತಿ ಪರಿಣಾಮ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲುತ್ತಿದೆ. ರಾಹುಲ್ ಗಾಂಧಿ ಒಂದ್ವೇಳೆ ಬಂಟ್ವಾಳಕ್ಕೆ ಬಂದರೆ ಬಿಜೆಪಿಗಂತೂ ಖಂಡಿತಾ ಲಾಭವಾಗಲಿದೆ. ದೇಶದಲ್ಲಿ ಶೇ.50ರಷ್ಟು ಬಡವರು ಇರಲು ಯಾರು ಕಾರಣ ಎಂಬುದನ್ನು ರಾಹುಲ್ ಉತ್ತರಿಸಬೇಕು ಎಂದರು. ಶರತ್ ಮಡಿವಾಳ ಹತ್ಯೆಗೆ ಪರೋಕ್ಷ ಪ್ರೇರಣೆ ನೀಡಿದ ನಾಯಕರು, ಹಿಂದುಗಳ ಮೇಲೆ ದೌರ್ಜನ್ಯವೆಸಗುವ ಮಂತ್ರಿಗಳನ್ನು ಮನೆಗೆ ಕಳಿಸುವ ಕಾರ್ಯವಾಗಬೇಕು ಎಂದು ಪ್ರಹ್ಲಾದ ಜೋಷಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಯೋತ್ಪಾದಕ ಎಂಬ ಗಂಭೀರ ಟೀಕೆ ಮಾಡಿದರು. ಈ ಹೇಳಿಕೆಯನ್ನು ಮತ್ತೆ ಸಮರ್ಥಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯವನ್ನು ಉತ್ಪಾದಿಸುವ ಕೆಲಸ ಮಾಡುತ್ತಿದ್ದಾರೆ, 24 ಹಿಂದು ಕಾರ್ಯಕರ್ತರ ಕೊಲೆಯಾಗಿದೆ. ಇಷ್ಟೇ ಅಲ್ಲ, ರಾಜ್ಯದಲ್ಲಿ ಅಮಾಯಕರು, ಐಎಎಸ್, ಐಪಿಎಸ್ ಅಧಿಕಾರಿಗಳು, ಕೂಲಿ ಕಾರ್ಮಿಕರು ಸಾಯುತ್ತಲೇ ಇದ್ದಾರೆ, ಇವರ ಕುರಿತು ಕಣ್ಣೀರು ಸುರಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಗಳನ್ನು ಕೆರಳಿಸುವ ಕೆಲಸ ಮಾಡುತ್ತಲಿದ್ದಾರೆ. ದತ್ತಪೀಠವನ್ನು ಇಸ್ಲಾಮೀಕರಣ ಮಾಡಿ ಸಮಾಜ ನಾಶಕ್ಕೆ ಹೊರಟಿದ್ದಾರೆ, ಅವರು ಹಿಂದುಗಳಿಗೂ ಮುಸ್ಲಿಮರಿಗೂ ದ್ರೋಹ ಮಾಡಿದ್ದಾರೆ ಎಂದರು.

See also  ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣ: ಹಲವರ ವಿಚಾರಣೆ

ಭಯೋತ್ಪಾದಕರ ಸೃಷ್ಟಿಸಿದ್ದು ಇಂದಿರಾಗಾಂಧಿ, ಕಾಂಗ್ರೆಸ್ ಭಯೋತ್ಪಾದಕರಿಗೆ ಪರೋಕ್ಷ ನೆರವು ನೀಡಿತು ಎಂದು ನಳಿನ್ ಹೇಳಿದರು.

ರಮಾನಾಥ ರೈ ಅವರು ತಾಕತ್ತಿದ್ದರೆ ನನಗೆ ಹಿಂದುಗಳ ಓಟು ಬೇಡ ಎನ್ನಲಿ ಎಂದು ಹೇಳಿದ ನಳಿನ್ ಕುಮಾರ್ ಕಟೀಲ್, ದೀಪಕ್, ಶರತ್, ಪ್ರಶಾಂತ್, ರಾಜು ಮೊಗವೀರ, ಹತ್ಯೆಗಳು ಆಗಿವೆ. 12 ಮಂದಿಗೆ ಚೂರಿ ಇರಿತ ಆಗಿದೆ. ಡ್ರಗ್ಸ್, ಮರಳು ಮಾಫಿಯಾ ರಾಜಕಾರಣ ನಡೆಯುತ್ತಿದೆ, ರಾಜಾರೋಷವಾಗಿ ಗೋವುಗಳ ಅಪಹರಣವಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಅಂತ್ಯಸಂಸ್ಕಾರಕ್ಕಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದ ನಳಿನ್, ರಾಜ್ಯದಲ್ಲಿ ಜಂಗಲ್ ರಾಜ್ ಇದೆ. ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ರಮಾನಾಥ ರೈ ಅವರನ್ನು ಕರ್ನಾಟಕದ ಗಡಿ ದಾಟಿಸುವ ಕಾಲ ಬಂದಿದೆ. ಇಂದು ತುಷ್ಟೀಕರಣ ನೀತಿ ಮೂಲಕ ಸಿದ್ದರಾಮಯ್ಯ ಮತ್ತು ರಮಾನಾಥ ರೈ ಆಕ್ರಮಣಕಾರಿ ಸುಲ್ತಾನ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಭಾವೇದಿಕೆಯಲ್ಲಿ ಶರತ್ ಮಡಿವಾಳ ಭಾವಚಿತ್ರವನ್ನಿಟ್ಟು ಅದಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರ.ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾ ವಕ್ತಾರರಾದ ಜಿತೇಂದ್ರ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮೋನಪ್ಪ ಭಂಡಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಭಟ್, ಮುಖಂಡರಾದ ಜಿ.ಆನಂದ, ಸತ್ಯಜಿತ್ ಸುರತ್ಕಲ್, ಸಂಘಟನಾ ಕಾರ್ಯದರ್ಶಿ ಅರುಣ್ ಜೀ, ದಿ.ಶರತ್ ತಂದೆ ತನಿಯಪ್ಪ ಮಡಿವಾಳರವರು ವೇದಿಕೆಯಲ್ಲಿದ್ದರು.
ಬಂಟ್ವಾಳ ಕ್ಷೇತ್ರದ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಅವರ ಬೆಂಬಲಿಗರ ದೌರ್ಜನ್ಯ ಎಲ್ಲೆ ಮೀರಿದ್ದು, ಬಂಟ್ವಾಳದ ಜನ ಪರಿವರ್ತನೆಯನ್ನು ಬಯಸಿದ್ದಾರೆ. ಈ ದೆಸೆಯಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು. ಇದಕ್ಕೂ ಮೊದಲು ದಿ.ಶರತ್ ಮಡಿವಾಳ ಭಾವಚಿತ್ರಕ್ಕೆ ಪುಷ್ಷಾರ್ಚನೆ ಸಲ್ಲಿಸಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಸ್ವಾಗತಿಸಿ , ನಿರೂಪಿಸಿದರು. ಮೋನಪ್ಪ ದೇವಸ್ಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು