ಬೆಳ್ತಂಗಡಿ: ತಾಲೂಕಿನ ಸಬರಬೈಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಸೋರಿಕೆಯಿಂದಾಗಿ ಹಲವು ತಾಸು ಅಪಾಯಕಾರಿ ವಾತಾವರಣ ನಿರ್ಮಾಣವಾದ ಘಟನೆ ಶುಕ್ರವಾರ ಮಧ್ಯಾಹ್ನದ ಬಳಿಕ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಮಹಾ ದುರಂತವೊಂದು ತಪ್ಪಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸಬರಬೈಲು ಎಂಬಲ್ಲಿ ಗ್ಯಾಸ್ ತುಂಬಿಕೊಂಡು ಬಂದ ಟ್ಯಾಂಕರೊಂದು ಅದರಲ್ಲಿನ ಅನಿಲ ಸೋರಿಕೆಯಿಂದಾಗಿ ನಿಲ್ಲಿಸಲಾಗಿತ್ತು. ಹೀಗಾಗಿ ಅದನ್ನು ಸೂಕ್ತ ನಿರ್ವಹಣೆ ಮಾಡಲು ಕೆಲಕಾಲ ಬೇಕಾಯಿತು. ಬೆಂಗಳೂರಿನಿಂದ ಬಂದ ಟ್ಯಾಂಕರ್ ಚಾಲಕ ಹಾಸನ ಅರುಣ್ ಅವರು ಕನ್ಯಾಡಿಯಲ್ಲಿನ ಗ್ಯಾಸ್ ಪಂಪ್ ನಲ್ಲಿ ಅರ್ಧ ಟ್ಯಾಂಕರನ್ನು ಖಾಲಿ ಮಾಡಿ ಮಂಗಳೂರಿಗೆ ವಾಪಸಾಗುತ್ತಿತ್ತು. ಆದರೆ ಮದ್ದಡ್ಕ ಬಳಿ ಬಂದಾಗ ಅನಿಲ ಸೋರುತ್ತಿರುವುದು ಚಾಲಕನಿಗೆ ಗೊತ್ತಾಯಿತು. ಕೂಡಲೇ ಆತ ಸ್ಥಳೀಯರಿಗೆ ತಿಳಿಸಿ ಅಗ್ನಿ ಶಾಮಕ ದಳಕ್ಕೆ ತಿಳಿಸುವಂತೆ ಹೇಳಿದ್ದಾನೆ. ಬಳಿಕ ಅದನ್ನು ಚಾಕಚಕ್ಯತೆಯಿಂದ, ನಿಧಾನವಾಗಿ ತಂದು ಪಣೆಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿ ಜನಸಂಚಾರವಿಲ್ಲದ ಜಾಗದಲ್ಲಿ ನಿಲ್ಲಿಸಿದ್ದಾರೆ. ಹೀಗಾಗಿ ಯಾವುದೇ ದುರಂತ ನಡೆಯುವುದು ತಪ್ಪಿದೆ. ಚಾಲಕ ಸಮಯಪ್ರಜ್ಞೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ವಿಷಯ ಅರಿತ ಗುರುವಾಯನಕೆರೆ ಮೆಸ್ಕಾಂ ಸಿಬ್ಬಂದಿ ಡೋಲ್ಫಿ ಎಂಬುವರು ವಿದ್ಯುತ್ ಕಡಿತಗೊಳಿಸಿದ್ದಾರೆ. ನೌಫಲ್, ಮಹಮ್ಮದ್, ನಝೀರ್ ಅವರು ಅಗ್ನಿ ಶಮನ ವಾಹನ ಬರುವುದಕ್ಕೆ ಸಹಕರಿಸಿದ್ದಾರಲ್ಲದೆ ರಸ್ತೆಯಲ್ಲಿ ಸಂಚರಿಸುವವರಿಗೆ ಎಚ್ಚರಿಕೆ ನೀಡಿ ದೂರ ಹೋಗುವಂತೆ ತಿಳಿಸುತ್ತಿದ್ದರು. ಬೆಳ್ತಂಗಡಿಯಿಂದ ಎರಡು, ಬಂಟ್ವಾಳದಿಂದ ಎರಡು ಅಗ್ನಿಶಾಮಕ ತಂಡಗಳು ಬಂದು ನೀರು ಹಾಯಿಸಿ ಗ್ಯಾಸ್ ಸೋರಿಕೆಯಿಂದಾಗುವ ಅಡ್ಡ ಪರಿಣಾಮಗಳಿಗೆ ತಡೆಯೊಡ್ಡಿದ್ದಾರೆ.
ಈ ಸ್ಥಿತಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಮಾರು ನಾಲ್ಕು ತಾಸು ಸ್ಥಗಿತಗೊಂಡಿತ್ತು. ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಬೇಕಾಯಿತು.
ಇತ್ತ ಎಚ್.ಪಿ. ಗ್ಯಾಸ್ ಗೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಅನಿಲ ಸೋರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಅದರೆ ಗ್ಯಾಸ್ ಪೂರ್ತಿ ಹೊರಗಿನ ವಾತಾವರಣಕ್ಕೆ ಬರದೆ ವಾಹನಗಳು ಸಂಚರಿಸುವಂತಿರಲಿಲ್ಲ. ಮತ್ತು ಟ್ಯಾಂಕರ್ ನ್ನೂ ಸ್ಥಳಾಂತರ ಮಾಡುವ ಹಾಗಿರಲಿಲ್ಲ. ಟ್ಯಾಂಕರ್ ನಿಂದ ಅನಿಲ ಪೂರ್ತಿ ಖಾಲಿಯಾದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗುತ್ತದೆ. ಪೊಲೀಸರೂ ಸ್ಥಳದಲ್ಲಿ ಇದ್ದರು. ಬಳಿಕ ಸುಮಾರು 7 ಗಂಟೆಯ ಹೊತ್ತಿಗೆ ಉಳಿದ ಅರ್ಧ ಟ್ಯಾಂಕರ್ ಅನಿಲವನ್ನು ವಾತಾವರಣಕ್ಕೆ ಬಿಟ್ಟ ಮೇಲೆ ಟ್ಯಾಂಕರ್ ಮಂಗಳೂರಿಗೆ ಪಯಣಿಸಿದೆ. ಮತ್ತೆ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ.