News Kannada
Monday, December 05 2022

ಕರಾವಳಿ

ಅಬ್ಬರದ ಪ್ರಚಾರವಿಲ್ಲ, ನಿಶ್ಯಬ್ದತೆ ಮಧ್ಯೆ ವೋಟಿನ ಬೇಟೆ!

Photo Credit :

ಅಬ್ಬರದ ಪ್ರಚಾರವಿಲ್ಲ, ನಿಶ್ಯಬ್ದತೆ ಮಧ್ಯೆ ವೋಟಿನ ಬೇಟೆ!

ಸುಳ್ಯ: ಇಲ್ಲೊಂದು ಚುನಾವಣೆ ನಡೆಯುತ್ತಿದೆಯೇ ಎಂದು ಆಶ್ಚರ್ಯಪಡುವಷ್ಟು ನಿಶ್ಯಬ್ದತೆ. ಬ್ಯಾನರ್, ಬಂಟಿಂಗ್ಸ್ ಗಳ, ಪೋಸ್ಟರ್ ಗಳ ಭರಾಟೆಯಿಲ್ಲ. ಮೈಕಾಸುರನ ಅಬ್ಬರವಿಲ್ಲ. ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಚುನಾವಣಾ ಪ್ರಚಾರದ ಅಬ್ಬರದ ಬದಲಾಗಿ ಎಲ್ಲೆಲ್ಲೂ ನಿಶ್ಯಬ್ದ ವೋಟಿನ ಬೇಟೆ ಮಾತ್ರ.

ಚುನಾವಣಾ ಆಯೋಗವು ಅಭ್ಯರ್ಥಿಗಳ ಖರ್ಚು ವೆಚ್ಚಗಳಿಗೆ ನಿಯಂತ್ರಣ ಹೇರಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೆಲ್ಲರೂ ಖರ್ಚು ಕಡಿಮೆ ಮಾಡಿ ಕಲರ್ಫುಲ್ ಪ್ರಚಾರದ ಬದಲು ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡುವುದರಲ್ಲೇ ನಿರತರಾಗಿದ್ದಾರೆ. ಏರುತ್ತಿರುವ ಬಿಸಿಲು, ಉಷ್ಣತೆಯನ್ನೂ ಲೆಕ್ಕಿಸದೆ ಅಭ್ಯರ್ಥಿಗಳು, ಕಾರ್ಯಕರ್ತರು ಬೆಗ್ಗಿನಿಂದ ರಾತ್ರಿಯವರೆಗೂ ಮನೆ ಮನೆ ಭೇಟಿಯಲ್ಲೇ ನಿರತರಾಗಿದ್ದಾರೆ. ಸುಳ್ಯ, ಪುತ್ತೂರು ಕ್ಷೇತ್ರಗಳಲ್ಲಿ ಎಲ್ಲಿಯೂ ಬಂಟಿಂಗ್ಸ್, ಪೋಸ್ಟರ್, ಬ್ಯಾನರ್, ಗೋಡೆ ಬರಹಗಳ ವರ್ಣ ರಂಜಿತ ದೃಶ್ಯಗಳು ಕಾಣುವುದೇ ಇಲ್ಲ. ಇದು ಒಂದು ಅಥವಾ ಎರಡು ಕ್ಷೇತ್ರಗಳ ಕಥೆಯಲ್ಲ. ಎಲ್ಲೆಡೆಯೂ ನಿಶ್ಯಬ್ದ ಪ್ರಚಾರದ್ದೇ ಕಾರುಬಾರು. ಒಬ್ಬ ಅಭ್ಯರ್ಥಿಯ ಚುನಾವಣಾ ವೆಚ್ಚ 28 ಲಕ್ಷವಾಗಿ ನಿಗದಿ ಪಡಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಹಲವು ರೀತಿಯ ಖರ್ಚುಗಳಿಗೆ ಕಡಿವಾಣ ಹಾಕಿ ಮತದಾರರನ್ನು ನೇರ ಭೇಟಿ ಮಾಡಿ ಓಲೈಕೆ ಮಾಡುವುದಕ್ಕೇ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾದ ಬಳಿಕ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಎರಡು ಹಂತದಲ್ಲಿ ಮನೆ ಮನೆ ಭೇಟಿ ಕಾರ್ಯ ಮುಗಿಸಿದೆ. ಚುನಾವಣೆಗೆ ಮುನ್ನ ಇನ್ನೂ ಒಂದು ಹಂತದಲ್ಲಿ ಮನೆ ಮನೆ ಭೇಟಿ ನೀಡಿ ಮತದಾರರನ್ನು ಭೇಟಿ ಮಾಡುವ ಪ್ರಯತ್ನ ನಡೆಸಲಾಗುವುದು ಎಂದು ನಾಯಕರು ಹೇಳುತ್ತಾರೆ.

ಮನೆ ಮನೆ ಪ್ರಚಾರದ ಜೊತೆಗೆ ಪ್ರಮುಖ ನಾಯಕರನ್ನು ಮತ್ತು ತಾರಾ ಪ್ರಚಾರಕರನ್ನು ಕರೆ ತಂದು ಸಾರ್ವಜನಿಕ ಸಮಾರಂಭವನ್ನು ನಡೆಸಿ ಪ್ರಚಾರದ ರಂಗನ್ನು ಹೆಚ್ಚಿಸುವ ದೃಷ್ಠಿಯಲ್ಲಿಯೂ ಪಕ್ಷಗಳು ತಯಾರಿ ನಡೆಸುತ್ತಿದ್ದಾರೆ. ಪ್ರಚಾರದ ಕೊನೆಯ ದಿನಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಕೇಂದ್ರ ನಾಯಕರು, ಸಚಿವರುಗಳನ್ನು ಕರೆಸಿ ಪ್ರಚಾರಕ್ಕೆ ರಂಗು ತರಲು ಸುಳ್ಯದ ಬಿಜೆಪಿ ಸಿದ್ದತೆ ನಡೆಸಿದೆ. ಬಿಜೆಪಿಗಾಗಿ ಕೇಂದ್ರ ಸಚಿವ ಡಿ.ವಿ.ಸಾದನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದ್ದಾರೆ. ಸುಳ್ಯದಲ್ಲಿ ಕಾಂಗ್ರೆಸ್ ಪರ ಎಂ.ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿದ್ದಾರೆ. ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೆ ಮಾಡುವ ಕ್ಷೇತ್ರವಾದ ಕಾರಣ ಕೇರಳದಿಂದ ನಾಯಕರನ್ನು ಕರೆ ತಂದು ಪ್ರಚಾರ ಮಾಡಿ ಮತದಾರರನ್ನು ಸೆಳೆಯುವ ತಂತ್ರವನ್ನು ಎಲ್ಲಾ ಪಕ್ಷಗಳೂ ಮಾಡುತ್ತಾರೆ. ಈ ಬಾರಿ ಬಿಜೆಪಿ ನೇತಾರ ಕೆ.ಸುರೇಂದ್ರನ್ ಒಂದು ಹಂತದಲ್ಲಿ ಪ್ರಚಾರ ನಡೆಸಿದ್ದಾರೆ. ಕೊನೆಯ ಹಂತದಲ್ಲಿ ಸುರೇಂದ್ರನ್ ಮತ್ತು ಇತರ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಪರ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಹಲವು ಮಂದಿ ನಾಯಕರು ಆಗಮಿಸಿ ಸುಳ್ಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

See also  ಎಂಡೋಸಲ್ಫಾನ್ ಸಂತ್ರಸ್ಥ ಪ್ರದೇಶಗಳಿಗೆ ಪಿಣರಾಯಿ ವಿಜಯನ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು