News Kannada
Saturday, December 03 2022

ಕರಾವಳಿ

8ನೇ ಬಾರಿ ಚುನಾವಣಾ ಕಣಕ್ಕಿಳಿದಿರುವ ರೈಗಳ ಮನದ ಮಾತು

Photo Credit :

8ನೇ ಬಾರಿ ಚುನಾವಣಾ ಕಣಕ್ಕಿಳಿದಿರುವ ರೈಗಳ ಮನದ ಮಾತು

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಏಳುಬಾರಿ ಸ್ಪರ್ಧಿಸಿ, ಆರು ಬಾರಿ ಗೆದ್ದು ಶಾಸಕನಾಗಿ, ಮೂರು ಬಾರಿ ಮಂತ್ರಿಯಾಗಿ ಇದೀಗ ಮತ್ತೆ ಎಂಟನೇ ಬಾರಿ ಸ್ಪರ್ಧೆಗೆ ಇಳಿದಿರುವ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈಯವರ ಜೊತೆಗಿನ ಮಾತುಕತೆ ಇಲ್ಲಿದೆ…

ಕ್ಷೇತ್ರದ ಅಭಿವೃದ್ಧಿ ಕಾರ್ಯ ಹೇಗೆ ನಡೆದಿದೆ..?
ಮತದಾರರ ಆಶೀರ್ವಾದದಿಂದಲೇ ನಾನು ಶಾಸಕನಾದದ್ದು, ಮಂತ್ರಿಯಾದದ್ದು, ಅವರ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಅಭಿವೃದ್ದಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಕೆಲಸ ಮಾಡಿದ್ದೇನೆ, ಅಭಿವೃದ್ದಿ ವಿಚಾರದಲ್ಲಿ ಅತೀ ಹೆಚ್ಚು ಅನುದಾನ ಬಳಸಿಕೊಂಡ ಕ್ಷೇತ್ರ ಬಂಟ್ವಾಳ ಎಂಬುದನ್ನು ರಾಜ್ಯದ ಮುಖ್ಯಮಂತ್ರಿಗಳೇ ಗುರುತಿಸಿ, ಶ್ಲಾಘಿಸಿದ್ದಾರೆ. ಕಳೆದ ಅವಧಿಯಲ್ಲಿ 1200 ಕೋಟಿ ವೆಚ್ಚದ ಅಭಿವೃದ್ದಿ ಕಾರ್ಯಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಆಗಿದೆ ಎನ್ನುವುದನ್ನು ಎದೆತಟ್ಟಿ ಹೇಳಬಲ್ಲೆ.

2013-18ರ ಅವಧಿಯ ಸಾಧನೆಯ ಬಗ್ಗೆ..?
ಒಬ್ಬ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿ ಕಾರ್ಯ ನಡೆಸಿದ್ದೇನೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಎಲ್ಲಾ ಕ್ಷೇತ್ರಗಳಿಗೂ(ಬಿಜೆಪಿ ಶಾಸಕರಿರುವ ಸುಳ್ಯಕ್ಕೂ)ತಲುಪುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದೇನೆ. ಬಿ.ಸಿ.ರೋಡಿನಲ್ಲಿ ಮಿನಿವಿಧಾನ ಸೌಧ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆ.ಎಸ್ಆರ್ ಟಿಸಿ ಬಸ್ ನಿಲ್ದಾಣ, 20 ಸಾವಿರ ಫಲಾನುಭವಿಗಳು ನಿವೇಶನದ ಹಕ್ಕು ಪತ್ರ ನೀಡಿರುವುದು.. ಮತ್ತಷ್ಟು ಇದೆ, ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ.

ಕ್ಷೇತ್ರದಲ್ಲಿ ಜನ ನಿಮ್ಮನ್ನು ಕಂಡುಕೊಳ್ಳುವ ಬಗೆ…
ವಿರೋಧ ಪಕ್ಷಗಳ ರಾಜಕೀಯ ಕಾರಣಗಳ ಟೀಕೆಟಿಪ್ಪಣಿಗಳು ಏನೇ ಇರಲಿ, ಕ್ಷೇತ್ರದಲ್ಲಿ ನಡೆದ ಅಭಿವೃದ್ದಿ ಕಾರ್ಯಗಳ ಬಗ್ಗೆ ನಾನು ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದನ್ನು ಜನ ಮೆಚ್ಚಿದ್ದಾರೆ. ಬಿ.ಸಿ.ರೋಡಿನ ಅಭಿವೃದ್ಧಿಗೆ ಆರು ಅವಧಿ ಬೇಕಿತ್ತಾ.? ಎಂದು ಪ್ರಶ್ನೆ ಮಾಡುವವರೂ ಇದ್ದಾರೆ, ಆದರೆ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ಬಿ.ಸಿ.ರೋಡು ನಗರ ಬಂಟ್ವಾಳ ಕ್ಷೇತ್ರಕ್ಕೆ ಸೇರ್ಪಡೆಯಾಗಿ ಎರಡು ಅವಧಿಗಳಷ್ಟೇ ಆಗಿದೆ ಎನ್ನುವ ಸತ್ಯ ಹಲವರಿಗೆ ಗೊತ್ತಿಲ್ಲ. ಕ್ರಿಯಾಶೀಲತೆ, ಅಭಿವೃದ್ಧಿ, ಶಾಂತಿ, ಸಾಮರಸ್ಯ ಬಯಸುವ ಎಲ್ಲಾ ಜನರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ.

ಬಂಟ್ವಾಳ ಕ್ಷೇತ್ರದ ಬಗ್ಗೆ ತಮ್ಮ ಮುಂದಿನ ಯೋಜನೆಗಳು…
ಸಾಕಷ್ಟಿದೆ. ಮತದಾರರು ನನ್ನನ್ನು ಗೆಲ್ಲಿಸಿದರೆ ಈಗ ಆಗಿರುವುದರ ಎರಡು ಪಟ್ಟು ಅಭಿವೃದ್ದಿ ಕಾರ್ಯ ಮಾಡಿ ತೋರಿಸುತ್ತೇನೆ. ಬಂಟ್ವಾಳ ನಗರದಲ್ಲಿ ಒಳಚರಂಡಿ ಯೋಜನೆಯ ಸಮರ್ಪಕ ಅನುಷ್ಠಾನ ಆಗಬೇಕಿದೆ. ಜೊತೆಗೆ ಎಆರ್ ಟಿಓ ಕಚೇರಿ, ಡಿವೈಎಸ್ಪಿ ಕಚೇರಿ, ದೇವರಾಜು ಅರಸು ಸಭಾಭವನ ಹೀಗೆ ಹಲವಾರು ಕಟ್ಟಡಗಳಿಗೆ ಜಮೀನಿನ ಕೊರತೆಯಾದ್ದರಿಂದ ಮತ್ತಷ್ಟು ಮುನ್ನಡೆ ಸಾಧಿಸಲಾಗಿಲ್ಲ. ಈ ಬಗ್ಗೆ ಹೆಚ್ಚಿನ ನಿಗಾವಹಿಸುತ್ತೇನೆ.

ಹಿಂದೂಗಳ ಮತ ಬೇಕಿಲ್ಲ ಎಂದು ರೈ ಹೇಳಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿದೆಯಲ್ಲ..
ನನ್ನ ಮನಸ್ಸಿಗೆ ಅತ್ಯಂತ ವೇದನೆ ಉಂಟು ಮಾಡಿದ ಆರೋಪವಿದು. ನಾನು ಒಬ್ಬ ಹಿಂದೂವಾಗಿ ಎಲ್ಲಾ ಧರ್ಮಗಳನ್ನು ಪ್ರೀತಿಸುವವ. ಆದರೆ ಬಿಜೆಪಿಯ ಹಿಂದುತ್ವ ಪರಧರ್ಮವನ್ನು ಧ್ವೇಷ ಮಾಡುವಂತದ್ದು. ಹಾಗಾಗಿ ಕಾಂಗ್ರೆಸ್ ಹಾಗೂ ನನ್ನ ಪರಧರ್ಮ ಸಹಿಷ್ಣುತೆ ಅವರಿಗೆ ಹಿಡಿಸದೆ ಅಪಪ್ರಚಾರಕ್ಕೆ ತೊಡಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಧರ್ಮದ ಜಾತ್ಯತೀತ ಮನಸ್ಸುಗಳು ನನ್ನನ್ನು ಗೆಲ್ಲಿಸುತ್ತಾ ಬಂದಿದ್ದಾರೆ. ಹಿಂದೂಗಳ ಮತ ಬೇಡ ಎಂದು ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಈ ಬಗ್ಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಾಗಲಿ, ಪಣೋಲಿಬೈಲು ದೈವ ಸನ್ನಿಧಿಯಲ್ಲಾಗಲೀ ಪ್ರಮಾಣಕ್ಕೆ ನಾನು ಸಿದ್ದನಿದ್ದೇನೆ. ಇದು ಬಿಜೆಪಿಯವರಿಗೆ ಹಾಗೂ ನನ್ನ ಬಗ್ಗೆ ಅಪಪ್ರಚಾರ ನಡೆಸುವವರಿಗೆ ನನ್ನ ಸವಾಲು. ಅವರೂ ಸಾಕ್ಷಿಯೊಂದಿಗೆ ಬಂದು ಪ್ರಮಾಣ ಮಾಡಲಿ. ಅಪಪ್ರಚಾರ ನಡೆಸುವವರನ್ನು ದೈವದೇವರೇ ನೋಡಿಕೊಳ್ಳುತ್ತಾರೆ.

See also  ಕಾರು-ಬೈಕ್ ನಡುವೆ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ಕಲ್ಲಡ್ಕ ಬಿಸಿಯೂಟ ಪ್ರಕರಣದ ಬಗ್ಗೆ ಏನನ್ನುತ್ತೀರಿ..?
ಹುಂಡಿಗೆ ಹಾಕಿದ ಹಣ ದೇವಸ್ಥಾನಕ್ಕೆ ಸಲ್ಲಿಕೆಯಾಗಬೇಕು. ಶಿಕ್ಷಣ ಇಲಾಖೆಯ ದುಡ್ಡು ಶಿಕ್ಷಣ ಇಲಾಖೆಗೆ ಬಳಕೆಯಾಗಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ 300ಕ್ಕೂ ಅಧಿಕ ಅನುದಾನಿತ ಶಾಲೆಗಳಿದ್ದರೂ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಒಂದು ಸಂಘಟನೆಯ ಎರಡು ಶಾಲೆಗಳಿಗೆ ಮಾತ್ರ ಹಣದ ರೂಪದಲ್ಲಿ ತಿಂಗಳಿಗೆ 4.5 ಲಕ್ಷ ಅನುದಾನ ಹೋಗ್ತಾ ಇತ್ತು.. ಇದನ್ನು ತಡೆಯಲು ನನಗೆ ಬಿಜೆಪಿಯವರಿಂದಲೂ ಒತ್ತಡ ಬಂದಿತ್ತು. ಸರ್ಕಾರಕ್ಕೆ ಪತ್ರ ಬರೆದು ಅಕ್ರಮಕ್ಕೆ ಬ್ರೇಕ್ ಹಾಕಿದ್ದೇನೆ. ಇದು ತಪ್ಪಾ..
ಅನುದಾನಿತ ಶಾಲೆಯಾದ್ದರಿಂದ, ಅಪೇಕ್ಷೆ ಬಂದಲ್ಲಿ ಸರ್ಕಾರದಿಂದಲೇ ಮಕ್ಕಳಿಗೆ ಬಿಸಿಯೂಟ ಕೊಡಬಹುದಾಗಿತ್ತು. ಬೇಡ ಎಂದು ಬಿಟ್ಟರು. ಜೊತೆಗೆ ರಾಜಕೀಯ ದುರುದ್ದೇಶಕ್ಕೆ ಮಕ್ಕಳನ್ನು, ಅವರ ಹಸಿವನ್ನು ಬಳಸಿಕೊಂಡರು. ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ.. ಕೊಲ್ಲೂರು ಮೂಕಾಂಬಿಕೆ ನನ್ನನ್ನು ಹರಸುತ್ತಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವಿರುದ್ದದ ಅವಹೇಳನಗಳ ಬಗ್ಗೆ..?
ಮಾಡಲು ಕೆಲಸವಿಲ್ಲದವರು,ಮನಸ್ಸಿನ ತುಂಬಾ ದ್ವೇಷವನ್ನು, ವಿಷವನ್ನು ತುಂಬಿಕೊಂಡವರು ಸದಾ ಅವಹೇಳನವನ್ನೇ ಮಾಡುತ್ತಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುತ್ತಾರೆ. ಮತ್ತೊಬ್ಬರನ್ನು ಟೀಕಿಸಿ, ಅವಹೇಳನ ಮಾಡಿ ತಾನು ಮೇಲೆ ಬರಬಹುದು ಎಂಬ ಮನಸ್ಥಿತಿ ಇದ್ದರೆ ಅದು ನಡೆಯುವುದಿಲ್ಲ. ಪ್ರಚಾರಕ್ಕೆ ಬಳಸಿಕೊಳ್ಳಬಹುದಾದ್ದನ್ನು ಅಪಪ್ರಚಾರಕ್ಕೆ ಬಳಸುತ್ತಾರೆ. ಆದರೆ ಜನ ಪ್ರಜ್ಞಾವಂತರು ಅವರ ನಿರ್ಧಾರ ಸರಿಯಾಗಿರುತ್ತದೆ. ಅಪಪ್ರಚಾರಗಳಿಗೆ ಮತದಾರರು ಮಣೆಹಾಕುವುದಿಲ್ಲ.

ಸಾಮಾಜಿಕ ಸಾಮರಸ್ಯ ರೈ ಅವರ ದೊಡ್ಡ ಬಲವಂತೆ .. ಹೌದಾ..?

ಖಂಡಿತ. ನನ್ನ ಧರ್ಮ ಕಾಂಗ್ರೆಸ್. ಸಾಮರಸ್ಯ ಕಾಂಗ್ರೆಸ್ ನ ಉಸಿರು.. ಹೀಗಾಗಿ ಅದೇ ನನ್ನ ದೊಡ್ಡ ಬಲ. ಶಾಂತಿ-ಸೌಹಾರ್ದತೆ ಯನ್ನು ನನ್ನ ಪ್ರತೀ ನಡೆ ನುಡಿಯಲ್ಲಿ ಅನುಷ್ಠಾನ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕೋಮುಶಕ್ತಿಗಳಿಂದ ಅಹಿತಕರ ಘಟನೆಗಳು ಹೆಚ್ಚಾದಾಗ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ನಡೆಸಿದ್ದೆ. ಅದಕ್ಕೆ ಸಿಕ್ಕ ಜನಬೆಂಬಲ ನಿಜಕ್ಕೂ ಮರೆಯಲಾರೆ.

ರೈ ನಡವಳಿಕೆಯಲ್ಲಿ ಮುಸ್ಲಿಂ ಓಲೈಕೆ ಹೆಚ್ಚು ಎಂಬ ಆರೋಪಕ್ಕೆ ಏನನ್ನುತ್ತೀರಿ..?
ನಾನು ಮತೀಯವಾದಿಯಲ್ಲ. ಬಹುಸಂಖ್ಯಾತ ಮತೀಯವಾದ ಹಾಗೂ ಅಲ್ಪಸಂಖ್ಯಾತ ಮತೀಯವಾದ ಎರಡನ್ನೂ ವಿರೋಧಿಸುವವ. ಹಾಗಾಗಿ ಎರಡೂ ವರ್ಗದ ಮತೀಯವಾದಿಗಳು ನನ್ನನ್ನು ವಿರೋಧಿಸುತ್ತಾರೆ. ಎಲ್ಲಾ ಸಮುದಾಯದ ಪ್ರಜ್ಞಾವಂತ ಮತದಾರರು ನನ್ನನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ. ಮುಖ್ಯವಾಗಿ ನನ್ನ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆಯೂ ಹೆಚ್ಚಿದೆ. ಹಾಗಾಗಿ ನನ್ನ ವಿರೋಧಿಸುವವರು ಪ್ರತೀಬಾರಿಯೂ ಪ್ರಬಲ ಮುಸ್ಲಿಂ ಅಭ್ಯರ್ಥಿಯನ್ನು ನನ್ನ ವಿರುದ್ದ ಕಣಕ್ಕೆ ಇಳಿಸುತ್ತಲೇ ಬಂದಿದ್ದಾರೆ. ಮಾಜಿ ಎಂಎಲ್ಎ ಕೆ.ಎಂ.ಇಬ್ರಾಹಿಂ ಅವರು ಜೆಡಿಎಸ್ ನಿಂದ ನನ್ನ ವಿರುದ್ದ ಕಣದಲ್ಲಿದ್ದಾಗ, ಎಲ್ಲಾ ಸಮುದಾಯದವರ ಬೆಂಬಲದ ಜೊತೆಗೆ ಪ್ರಜ್ಞಾವಂತ ಮುಸ್ಲಿಂ ಮತದಾರರೂ ಕೂಡ, ಮತೀಯವಾದಕ್ಕೆ ಮಣೆಹಾಕದೆ ನನ್ನನ್ನು ಗೆಲ್ಲಿಸಿದ್ದಾರೆ. ಈ ವಿಚಾರವಾಗಿ ನಾನು ಕಾರ್ಯಕ್ರಮವೊಂದರಲ್ಲಿ ಮಾತನಾಡಿದರೆ ಅದನ್ನು ಸಂಪೂರ್ಣ ತಪ್ಪು ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಿದರು. ನಾನೇನು ಮಾತನಾಡಿದೆ ಎನ್ನುವುದರ ಪೂರ್ಣ ವಿಡಿಯೋ ಕ್ಲಿಪ್ಪಿಂಗ್ ಈಗಲೂ ಯೂಟ್ಯೂಬ್ ನಲ್ಲಿದೆ.

See also  ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳ ಸಮೀಕ್ಷೆ

ಈ ಬಾರಿಯ ಪ್ರಚಾರ ಕಾರ್ಯ ಹೇಗಿದೆ..?
ನಮ್ಮ ಬೂತ್ ನಮ್ಮ ಹೊಣೆ ಎನ್ನುವ ಸಂಕಲ್ಪದಡಿಯಲ್ಲಿ ಈ ಬಾರಿಯ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ಮುನ್ನಡೆಯುತ್ತಿರುವ ಪಕ್ಷದ ಕಾರ್ಯಕರ್ತರೇ ನಮ್ಮ ದೊಡ್ಡ ಬಲ. ಅವರ ಕಾಳಜಿಯ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ನೆನಪಿಸಿದ್ದೇವೆ. ನಾಲ್ಕೈದು ಬಾರಿ ಮನೆಭೇಟಿ ಕಾರ್ಯವನ್ನು ನಮ್ಮ ಕಾರ್ಯಕರ್ತರು ನಡೆಸಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಂಟ್ವಾಳಕ್ಕೆ ಭೇಟಿ ನೀಡಿರುವುದು ಪಕ್ಷದ ಕಾರ್ಯರ್ತರಲ್ಲೂ ಉತ್ಸಾಹ ತುಂಬಿದ್ದು, ಎಲ್ಲೆಲ್ಲೂ ಕಾಂಗ್ರೆಸ್ ಪರ ಅಲೆ ಕಂಡುಬಂದಿದೆ.

ಕಳೆದ ಐದು ವರ್ಷದ ಅವಧಿಯಲ್ಲಿ ನಿಮಗೆ ನೋವು ತಂದ ಘಟನೆ
ನನ್ನ ಕ್ಷೇತ್ರದಲ್ಲಿ ನಡೆದ ಹತ್ಯೆಗಳು ನನಗೆ ಅತೀವ ನೋವು ತಂದಿದೆ. ಕೋಮುವಾದಿಗಳ ಅಟ್ಟಹಾಸಕ್ಕೆ ಮುಗ್ಧಜೀವಿಗಳು ಬಲಿಯಾಗಿವೆ. ಒಂದು ಹಂತದಲ್ಲಿ ಯಾರೋ ಮಾಡಿದ್ದ ತಪ್ಪುಗಳಿಗೆ ನನ್ನನ್ನೇ ಬೊಟ್ಟು ಮಾಡುವ ಪ್ರಯತ್ನಗಳೂ ನಡೆದಿತ್ತು. ಸಾಮರಸ್ಯ, ಶಾಂತಿ, ಸೌಹಾರ್ದತೆಯ ಜೊತೆಗೆ ಮಾನವತ್ವವನ್ನು ಬಯಸುವ ನನಗೆ ಇಂತಹ ಆರೋಪಗಳು ಆಘಾತ ತಂದಿತ್ತು. ಎಲ್ಲವನ್ನೂ ದೇವರ ಮೇಲೆ ಹಾಕಿ, ಕೊಲೆಗಡುಕರಿಗೆ, ಅಪಪ್ರಚಾರ ನಡೆಸುವವರಿಗೆ ಶಿಕ್ಷೆ ಕೊಡಿಸು ಎಂದು ದೇವಸ್ಥಾನ,ಮಸೀದಿ, ಇಗರ್ಜಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ.

ತುಂಬಾ ಖುಷಿ ತಂದು ಕೊಟ್ಟ ಘಟನೆ ಯಾವುದು..?
ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಅನುದಾನ ಬಳಸಿದ ಕ್ಷೇತ್ರ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ವಿಶೇಷವಾಗಿ ಸೌಹಾರ್ದತೆಯ ಪ್ರತೀಕವಾಗಿ ದರ್ಗಾ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 31 ಕೋಟಿ ರೂ ವೆಚ್ಚದ ಅಜಿಲಮೊಗರು-ಕಡೇಶ್ವಾಲ್ಯ ಸೇತುವೆಗೆ ಮಂಜೂರಾತಿ ದೊರಕಿ, ಕಾಮಗಾರಿ ಆರಂಭಗೊಂಡಿರುವುದು ನನ್ನ ಮಟ್ಟಿಗೆ ಅತ್ಯಂತ ಖುಷಿಯ ಸಂಗತಿ ಜೊತೆಗೆ ಪುರಸಭಾ ವ್ಯಾಪಿಗೆ ಒಳಚರಂಡಿ ಯೋಜನೆ ಮಂಜೂರು ಮಾಡಿಸಿರುವುದು, ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣದ ಕಾಮಗಾರಿ ಆರಂಭಗೊಂಡಿರುವುದು ನನಗೆ ಹೆಚು ಸಂತೃಪ್ತಿ ತಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು