News Kannada
Monday, October 03 2022

ಕರಾವಳಿ

ಬಂಟ್ವಾಳ ತಾಲೂಕಿನಾದ್ಯಂತ ಡೆಂಗ್ಯೂ ಹಾವಳಿ - 1 min read

Photo Credit :

ಬಂಟ್ವಾಳ ತಾಲೂಕಿನಾದ್ಯಂತ ಡೆಂಗ್ಯೂ ಹಾವಳಿ

ಬಂಟ್ವಾಳ: ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಮಳೆ ಬಿಸಿಲಿನ ಕಣ್ಣಾಮುಚ್ಚಾಲೆಯಾಟ ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಬಂಟ್ವಾಳ ತಾಲೂಕಿನಲ್ಲಿಯೂ ಡೆಂಗ್ಯೂ ಹಾವಳಿ ಕಾಣಿಸಿಕೊಂಡಿದ್ದು, 8 ಮಂದಿ ಡೆಂಗ್ಯೂ ಬಾಧಿತರೆನ್ನುವುದು ಖಚಿತವಾದ ಬೆನ್ನಲ್ಲೇ 53 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ರೋಗಭಾಧಿತರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರು ತಾಲೂಕಿನ ಸರ್ಕಾರಿ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಕೆಲವರು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ಏಳು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಬಾಧಿತರು ಕಂಡುಬಂದಿದ್ದು, ದೈವಸ್ಥಳ, ವಾಮದಪದವು, ಪಂಜಿಕಲ್ಲು, ಬಂಟ್ವಾಳ ನಗರ, ಮಂಚಿ ಹಾಗೂ ಕುರ್ನಾಡು ಪ್ರಾ.ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಹಾಗೂ ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇಬ್ಬರಿಗೆ ಡೆಂಗ್ಯೂ ಬಾಧಿಸಿರುವುದು ವೈದ್ಯಕೀಯ ಪರೀಕ್ಷೆಗಳಿಂದ ಖಚಿತಗೊಂಡಿದೆ. ಇದರ ಬೆನ್ನಲ್ಲೇ ತಾಲೂಕಿನ ವಿಟ್ಲ, ಮೂರ್ಜೆ, ಕೊಳಾಡು, ಅಳಿಕೆ, ಪಂಜಿಕಲ್ಲು, ಮೂಡನಡುಗೋಡು, ಕೈರಂಗಳ, ನಾವೂರು, ಕಲ್ಲಡ್ಕ, ಬೆಂಜನಪದವಿನಲ್ಲಿ ಶಂಕಿತ ಡೆಂಗ್ಯೂ ಬಾಧಿತರು ಕಂಡು ಬಂದಿದ್ದು, ಇವರ ರಕ್ತದ ಸ್ಯಾಂಪಲ್ ಅನ್ನು ಪರೀಕ್ಷೆಗೆಂದು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಒಂದು ಡೆಂಗ್ಯೂ ಪ್ರಕರಣ ಖಚಿತಗೊಂಡಿದ್ದರೆ, 5 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಆದರೆ ನಗರ ಪ್ರದೇಶಕ್ಕೆ ಸವಾಲು ಎನ್ನುವ ರೀತಿಯಲ್ಲಿ ಗ್ರಾಮೀಣ ಭಾಗದಲ್ಲೂ ಹೆಚ್ಚು ಡೆಂಗ್ಯೂ ಪ್ರಕರಣ ವರದಿಯಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸೊಳ್ಳೆ ಉತ್ಪತಿ ತಾಣಗಳ ನಾಶ ಹಾಗೂ ಮುಂಜಾಗೃತ ಕ್ರಮ ತೆಗೆದುಕೊಳ್ಳುವಲ್ಲಿ ಉದಾಸೀನ ತೋರಿದರೆ ಬಿಸಿಲು ಮಳೆಯ ಕಣ್ಣಾಮುಚ್ಚಾಲೆಯಾಟಕ್ಕೆ ಡೆಂಗ್ಯೂ ಇನ್ನಷ್ಟು ವ್ಯಾಪಿಸಿ ಪ್ರಾಣಹಾನಿ ಸಂಭವಿಸುವ ಅಪಾಯವಿದೆ.

ತೋಟದಲ್ಲಿ ಹೆಚ್ಚು..!
ಸಿಂಕ್ಲರ್ ಮೂಲಕ ತೋಟಕ್ಕೆ ಹಾಯಿಸಿರುವ ನೀರು ಅಡಿಕೆ ಹಾಳೆಗಳು ಹಾಗೂ ತೋಟದ ತೋಡು, ಹೊಂಡಗಳಲ್ಲಿ ನಿಂತು, ಈ ನೀರಿನಲ್ಲಿ ಸೊಳ್ಳೆಗಳು ಉತ್ಪಾತಿಯಾಗುದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಡೆಂಗ್ಯೂ ಜ್ವರ ಕಾಣಿಸಿಕೊಳ್ಳಲು ಕಾರಣವಾಗಿದೆ, ಜೊತೆಗೆ ಮಳೆ ಹಾಗೂ ಬಿಸಿಲು ಆಗಾಗ್ಗೆ ಕಾಣಿಸಿಕೊಂಡರೆ ಡೆಂಗ್ಯೂ ರೋಗಕ್ಕೆ ಆಹ್ವಾನ ನೀಡಿದಂತೆ, ಇದಕ್ಕೆ ಜನಜಾಗೃತಿಯೊಂದೇ ಮದ್ದು ಎನ್ನುತ್ತಾರೆ ತಾಲೂಕು ವೈದ್ಯಾಧಿಕಾರಿ ಡಾ.ದೀಪಾಪ್ರಭು.

ಡೆಂಗ್ಯೂ ಪತ್ತೆಯಾದ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಲಾಗಿದ್ದು, ಸೊಳ್ಳೆಗಳ ನಿರ್ಮೂಲನೆ ಮಾಡುವ ದೃಷ್ಟಿಯಿಂದ ಫಾಗಿಂಗ್ ಕಾರ್ಯಾಚರಣೆ ಕೂಡಾ ಮುಂದುವರಿಸಲಾಗಿದೆ. ಬಿ.ಸಿ.ರೋಡು ಕೈಕಂಬ ಪರಿಸರದಲ್ಲೂ ಹೆಚ್ಚಿನ ನಿಗಾವಹಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮನೆ ಪರಿಸರ ಸ್ವಚ್ಛವಾಗಿಡುವುದು ಹಾಗೂ ತೋಟಗಳಲ್ಲಿ ನೀರು ನಿಲ್ಲದೆ ಹಾಗೆ ನೋಡಿಕೊಳ್ಳುವುದೊಂದೇ ಪರಿಹಾರವಾಗಿದೆ. ಫಾಗಿಂಗ್ ಕಾರ್ಯಾಚರಣೆಯಿಂದ ಸೊಳ್ಳೆಗಳನ್ನು ಕೊಲ್ಲಬಹುದೇ ಹೊರತೂ ಸೊಳ್ಳೆ ಉತ್ಪತ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದ ಅವರು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕನಿಷ್ಠ ಉಡುಪು ಧರಿಸಿ ಕೆಲಸ ನಿರ್ವಹಿಸುತ್ತಿರುವುದರಿಂದ ಸೊಳ್ಳೆಗಳು ಅವರಿಗೆ ಸುಲಭವಾಗಿ ಕಚ್ಚುತ್ತದೆ. ಕಾರ್ಮಿಕರಿಗೆ ಗರಿಷ್ಠ ಬಟ್ಟೆ ಧರಿಸುವಂತೆಯೂ, ಸೊಳ್ಳೆ ನಿರೋಧಕ ಲೇಪನಗಳನ್ನು ಕೈ, ಕಾಲು, ಮೈಗೆ ಹಚ್ಚುವಂತೆಯೂ ಸಲಹೆ ನೀಡಲಾಗಿದೆ. ಆರೋಗ್ಯ ಇಲಾಖೆಯಿಂದ ಮಾತ್ರ ಸಾಂಕ್ರಾಮಿಕ ರೋಗ ನಿರ್ಮೂಲನೆ ಅಸಾಧ್ಯ. ಇಲಾಖೆಯೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಿದರೆ ಮಾತ್ರ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದ್ದಾರೆ.

See also  ಅಡಕೆ ನಿಷೇಧ ಪ್ರಸ್ತಾಪ ಕೈ ಬಿಟ್ಟು ವರದಿ ಹಿಂಪಡೆಯಲಿ: ಎಪಿಎಂಸಿ ಸಭೆಯಲ್ಲಿ ನಿರ್ಣಯ

ಡೆಂಗ್ಯೂ ಹರಡುವುದು ಹೀಗೆ..
ಡೆಂಗ್ಯೂ ರೋಗವನ್ನು ಹರಡುವ ಇಡೀಸ್ ಸೊಳ್ಳೆಯು ಮನೆ ಒಳಗೆ ಹಾಗೂ ಹೊರ ಭಾಗದಲ್ಲಿರುವ ಶುದ್ಧವಾದ ನೀರಿನಲ್ಲಿ ಮೊಟ್ಟೆ ಇಡುತ್ತದೆ. ಮೊಟ್ಟೆ ಒಡೆದು ಹೊರ ಬರುವ ಎಲ್ಲ ಮರಿಗಳು ರೋಗಗ್ರಸ್ಥ ಸೊಳ್ಳೆಗಳೇ ಆಗಿರುತ್ತದೆ. ಒಂದು ಸೊಳ್ಳೆ ಸುಮಾರು 10ರಿಂದ 14 ಮಂದಿಗೆ ಕಚ್ಚುತ್ತದೆ. ಹೀಗಾಗಿ ಈ ರೋಗ ಬೇಗನೆ ಪರಿಸರದಲ್ಲಿ ಪಸರುತ್ತದೆ. ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ರೋಗದ ಲಕ್ಷಣಗಳು
ವಿಪರೀತ ತಲೆ ನೋವು, ಚಳಿ ಜ್ವರ, ಮಾಂಸಖಂಡ, ಸ್ನಾಯುಗಳಲ್ಲಿ ನೋವು.

ಚಿಕಿತ್ಸೆ ಹೇಗೆ..?
ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ರೋಗ ತೀವ್ರತೆ ಹೆಚ್ಚಾದಾಗ ಅಥವಾ ರಕ್ತ ಸ್ರಾವದ ಲಕ್ಷಣ ಕಂಡು ಬಂದರೆ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಹೇಗೆ ತಡೆಗಟ್ಟಬಹುದು
ಮನೆ, ಅಂಗಡಿ ಪರಿಸರವನ್ನು ಸ್ವಚ್ಛವಾಗಿಟ್ಟು ಟೇರಸ್ ಹಾಗೂ ತೋಟಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು. ಟ್ಯಾಂಕ್, ಸಿಂಟೆಕ್ಸ್, ಡ್ರಮ್, ಬ್ಯಾರಲ್ ಪಾತ್ರೆಗಳಿಗೆ ಭದ್ರವಾಗಿ ಮುಚ್ಚಳ ಅಳವಡಿಸುವುದು. ಇವುಗಳ ನೀರನ್ನು ವಾರೊಕ್ಕೊಮ್ಮೆಯಾದರೂ ಖಾಲಿ ಮಾಡಿ ತಿಕ್ಕಿ ತೊಳೆದು ಸ್ವಚ್ಛಗೊಳಿಸಿ ಒಣಗಿಸಿದ ಬಳಿಕ ಮತ್ತೆ ನೀರು ತುಂಬಿಸುವುದು. ಮನೆಯಲ್ಲಿರುವ ಫ್ರಿಜ್‍ನ ಹಿಂಭಾಗದಲ್ಲಿ ನೀರು ಸಂಗ್ರಹವಾಗುವ ಪಾತ್ರೆಯನ್ನು ವಾರಕ್ಕೊಮ್ಮೆ ಶುಚಿಗೊಳಿಸುವುದು. ಪ್ರತಿ ದಿನ ಉಪಯೋಗಿಸದ ಶೌಚಾಲಯಗಳಿದ್ದಲ್ಲಿ ದಿನದಲ್ಲಿ ಒಂದು ಬಾರಿಯಾದರೂ ನೀರು ಹಾಕುವುದು. ಹೂವಿನ ಗಿಡಗಳನ್ನು ನೆಟ್ಟಿರುವ ಕುಂಡಗಳ ಅಡಿಯಲ್ಲಿ ಜೋಡಿಸಿರುವ ಪ್ಲೇಟುಗಳಿಗೆ, ಮನೆಯ ಹೊರಗೆ ಇರುವ ರುಬ್ಬುವ ಕಲ್ಲು ಹಾಗೂ ಮಳೆ ನೀರು ತುಂಬುವ ವಸ್ತುಗಳಿದ್ದರೆ ಅವುಗಳಲ್ಲಿ ಮರಳು ತುಂಬಿಸುವುದು. ಮನೆ ಪರಿಸರದಲ್ಲಿರುವ ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು. ಎಳನೀರು ಚಿಪ್ಪುಗಳನ್ನು ನಾಲ್ಕು ತುಂಡುಮಾಡಿ ನೀರು ಬೀಳದ ಸ್ಥಳದಲ್ಲಿಟ್ಟು ಒಣಗಿಸುವುದು. ತೆಂಗಿನಕಾಯಿ ಗೆರಟೆಯನ್ನು ಸುಟ್ಟು ಬಿಡುವುದು. ಹಳೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು, ಬಾಟ್ಲಿ ಇತ್ಯಾದಿಗಳನ್ನು ಒಂದು ಕಡೆ ಜೋಪಾಲವಾಗಿರಿಸಿ ಬಳಿಕ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು. ಟಯರ್‍ ಗಳನ್ನು ನೀರು ಬೀಳದ ಜಾಗದಲ್ಲಿ ಶೇಖರಿಸಿಡುವುದು. ತ್ಯಾಜ್ಯ ನೀರು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಅಳವಡಿಸುವುದು.

ಸ್ವಯಂ ರಕ್ಷಣೆ
ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಯನ್ನು ಅಳವಡಿಸುವುದು. ಸಂಜೆ ಹೊತ್ತಿಗೆ ಕಿಟಕಿ ಬಾಗಿಲುಗಳನ್ನು ಮುಚ್ಚುವುದು. ಧೂಪದ ಹೊಗೆ, ಲಿಕ್ವಿಟರ್‍ ಗಳನ್ನು ಬಳಸಿ ಸೊಳ್ಳೆ ನಿವಾರಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು