ಬೆಳ್ತಂಗಡಿ: ಸರಕಾರಿ ಅಧಿಕಾರಿಗಳು ಜನಸಾಮಾನ್ಯರ ನೋವಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡಬೇಕು. ಅಭಿವೃಧ್ದಿ ವಿಚಾರದಲ್ಲಿ ರಾಜಕೀಯ ಮಾಡದೆ ಮಾದರಿ ತಾಲೂಕಿಗೆ ಶ್ರಮಿಸೋಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಾಮರ್ಶೆ ನಡೆಸಿದರು. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಹೆಚ್ಚುತ್ತಿರುವ ಡೆಂಗ್ಯೂ, ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ, ಅರ್ಹರಿಗೆ ಸಿಗದ ಡಿಸಿ ಮನ್ನಾ ಭೂಮಿ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಮುಖ ಮೊದಲಾದ ಪ್ರಮುಖ ವಿಷಯಗಳು ಸಭೆಯಲ್ಲಿ ಚರ್ಚಿತವಾದವು. ಇಲಾಖಾವಾರು ನಡೆದ ಚರ್ಚೆಯಲ್ಲಿ ಸಮಸ್ಯೆಗಳಿಗೆ ಶಾಸಕರು ಸೂಕ್ತ ನಿರ್ದೇಶನ ನೀಡಿದರು.
ತಾಲೂಕಿನಾದ್ಯಂತ ಡೆಂಗ್ಯೂ ವ್ಯಾಪಕವಾಗಿ ಹಬ್ಬುತ್ತಿದ್ದು ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಸರಿಯಾದ ಮಾಹಿತಿ ನೀಡದೆ ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಸದಸ್ಯರು ಆರೋಪಿಸಿದರು. ಸಮಜಾಯಿಸಿ ಉತ್ತರ ನೀಡಲು ಹೊರಟ ಆರೋಗ್ಯಾಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ಮಾಹಿತಿ ನನ್ನ ಬಳಿ ಇದೆ. ತಪ್ಪು ಮಾಹಿತಿ ಬೇಡ. ಪ್ರತೀ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಆಸ್ಪತ್ರೆಯಲ್ಲಿಯೇ ಡೆಂಗ್ಯೂ ಮಾದರಿ ರಕ್ತ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೇರಿದರೂ ಇದರ ಕಡತವನ್ನು ಸರಿಯಾಗಿ ನಿರ್ವಹಿಸದೇ ಸರಕಾರದಿಂದ ಸೌಲಭ್ಯ ಬರುತ್ತಿಲ್ಲ. ತಾಲೂಕಿನ ಬಡ ಜನರಿಗೆ ಅನ್ಯಾಯವಾಗಿದೆ. ಕೂಡಲೇ ಕಡತಗಳನ್ನು ಸರಿಪಡಿಸಿ ಮೂಲ ಸೌಕರ್ಯ ಹೆಚ್ಚು ತರಿಸುವಂತೆ ಪ್ರಯತ್ನಿಸಬೇಕೆಂದು ಶಾಸಕರು ಆರೋಗ್ಯಾಧಿಕಾರಿಗೆ ಸೂಚಿಸಿದರು. ಆರೋಗ್ಯ ಇಲಾಖೆಯಲ್ಲಿ ಇರುವ ಖಾಲಿ ಹುದ್ದೆಗಳ ಮಾಹಿತಿ ತಕ್ಷಣ ನೀಡಬೇಕು. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.