ಕಾಸರಗೋಡು: ಹಿರಿಯ ರಾಜಕಾರಣಿ , ಮಾಜಿ ಸಚಿವ ಹಾಗೂ ಮಂಜೇಶ್ವರ ಶಾಸಕ ಚೆರ್ಕಳಂ ಅಬ್ದುಲ್ಲ ಇನ್ನಿಲ್ಲ . ಅವರಿಗೆ ೭೬ ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆರ್ಕಳಂ ಅಬ್ದುಲ್ಲ ರವರನ್ನು ವೈದ್ಯರ ಸಲಹೆಯಂತೆ ನಿನ್ನೆ ತಡರಾತ್ರಿ ಮನೆಗೆ ಕರೆತರಲಾಗಿತ್ತು.
ಇಂದು ಬೆಳಿಗ್ಗೆ ೮.೨೦ ರ ಸುಮಾರಿಗೆ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.ಮುಸ್ಲಿಂ ಲೀಗ್ ರಾಜ್ಯ ಕೋಶಾಧಿಕಾರಿ ಯಾಗಿದ್ದರು.
ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಘಟಕ ಪಕ್ಷವಾದ ಮುಸ್ಲಿಂ ಲೀಗ್ ನ ಪ್ರಮುಖ ನಾಯಕ. ೧೯ ವರ್ಷ ಮಂಜೇಶ್ವರದಿಂದ ಶಾಸಕರಾಗಿದ್ದರು. ೧೯೮೭ ರಿಂದ ೨೦೦೧ ರ ತನಕ ನಾಲ್ಕು ಬಾರಿ ಮಂಜೇಶ್ವರದಿಂದ ಶಾಸಕರಾಗಿ ಆಯ್ಕೆ.
೨೦೦೧ ರಲ್ಲಿ ಎ .ಕೆ ಆಂಟನಿ ಸಚಿವ ಸಂಪುಟದಲ್ಲಿ ಸ್ಥಳೀಯಾಡಳಿತ ಸಚಿವರಾಗಿ ಸೇವೆ. ಕಾಸರಗೋಡಿಯ ಚೆರ್ಕಳ ನಿವಾಸಿಯಾಗಿದ್ದ ಚೆರ್ಕಳಂ ಅಬ್ದುಲ್ಲ ರವರು ೧೯೮೭ ರಲ್ಲಿ ಬಿ ಜೆ ಪಿ ಯ ಎಚ್ . ಶಂಕರ ಆಳ್ವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು. ಇದರಿಂದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಪಾಲಾಯಿತು. ೧೯೯೨ ರಲ್ಲಿ ಬಿಜೆಪಿಯ ಜನಪ್ರಿಯ ನಾಯಕರಾಗಿದ್ದ ಕೆ . ಜಿ ಮಾರಾರ್ ವಿರುದ್ಧ ೧೦೭೨ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಯು ಡಿ ಎಫ್ ನ್ನು ಮತ್ತೆ ಗೆಲುವಿನತ್ತ ತಂದರು.
೧೯೯೬ ರಲ್ಲಿ ಬಿಜೆಪಿಯ ಸಿ .ಕೆ ಪದ್ಮನಾಭನ್ ರನ್ನು ಸೋಲಿಸಿ ಮೂರನೇ ಬಾರಿ ಆಯ್ಕೆಯಾದರು. ೨೦೦೧ ರಲ್ಲಿ ಬಿ ಜೆ ಪಿ ಯ ಸಿ ಕೆ . ಪದ್ಮನಾಭನ್ ರನ್ನು ಮತ್ತೆ ಸೋಲಿಸಿ ನಾಲ್ಕನೇ ಬಾರಿ ವಿಧಾನಸಭೆಗೆ ಪ್ರವೇಶಿದರು.
೨೦೦೬ ರಲ್ಲಿ ಸಿ ಪಿ ಎಂ ನ ಸಿ . ಎಚ್ ಕುಞ೦ಬು ವಿರುದ್ಧ ಸೋಲು ಕಾಣುವಂತಾಯಿತು. ಪಕ್ಷದಲ್ಲಿನ ಆಂತರಿಕ ಕಲಹ ಚೆರ್ಕಳಂ ಅಬ್ದುಲ್ಲ ರ ಸೋಲಿಗೆ ಮುಳುವಾಯಿತೆನ್ನಬಹುದು, ಆದರೆ ೨೦೧೧ ರಲ್ಲಿ ಚುನಾವಣೆಗೆ ಸ್ಪರ್ಧಿಸದೆ ಪಿ . ಬಿ ಅಬ್ದುಲ್ ರಜಾಕ್ ರನ್ನು ಕಣಕ್ಕಿಳಿಸಲಾಯಿತು.
ಆದರೆ ಪಕ್ಷದ ಏಳಿಗೆಗಾಗಿ ದುಡಿದ ಅವರು ೨೦೧೧ ರಲ್ಲಿ ಮಂಜೇಶ್ವರ ಕ್ಷೇತ್ರ ಮತ್ತೆ ಯು ಡಿ ಎಫ್ ಪಾಲಾಗುವಂತೆ ನೋಡಿಕೊಂಡರು. ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್ ಹಾಗೂ ಯು ಡಿ ಎಫ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಧಾನ ಸಭಾ ಅಧಿವೇಶನದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುವ ಮೂಲಕ ಕನ್ನಡಿಗರ ಮನ ಗೆದ್ದರು.
ವಿಧಾನಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಮಾಡಿದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು