ಉಡುಪಿ: ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಶಿರ್ವ ಮೂಲದ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದು, ಈ ಸಂಬಂಧ ಪತಿ ಅಶ್ವಿನ್ ಅವರು ಶಾಸಕ ರಘುಪತಿ ಭಟ್ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಸಂಪರ್ಕಿಸಿದ್ದಾರೆ.
ಹೆಝಲ್ ಜೋತ್ಸ್ನಾ ಕ್ವಾಡ್ರಸ್ (28) ನಿಗೂಢವಾಗಿ ಮೃತಪಟ್ಟ ಮಹಿಳೆ. ಇವರು ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯೊಂದರಲ್ಲಿ ಕಳೆದ 6 ವರ್ಷಗಳಿಂದ ಹೆಝಲ್ ಅಲ್ ಮಿಕ್ವಾ ಜನರಲ್ ಎಂಬ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಜುಲೈ 19ರಂದು ಊರಿನಲ್ಲಿದ್ದ ಪತಿ ಅಶ್ವಿನ್ ಮಥಾಯಸ್ ಗೆ ಕರೆ ಮಾಡಿ ಮಾತನಾಡಿದ್ದಾರೆ. ಆ ಬಳಿಕ ಜೋತ್ನ್ಸಾ ಮನೆಯವರ ಸಂಪರ್ಕಕ್ಕೆ ಸಿಗಲಿಲ್ಲ. ಎರಡು ದಿನಗಳ ಬಳಿಕ ಸಹೊದ್ಯೋಗಿಯೊಬ್ಬರು ಜೋತ್ಸ್ನಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಈ ಸಾವು ಹೇಗೆ ಸಂಭವಿಸಿದೆ ಮತ್ತು ಯಾವಾಗ ಸಂಭವಿಸಿದೆ ಎಂಬ ಬಗ್ಗೆ ಪತಿ ಅಶ್ವಿನ್ ಗೂ ಮಾಹಿತಿ ಇಲ್ಲ. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರಿಗೂ ಮಾಹಿತಿ ನೀಡಿದ್ದಾರೆ.