ಬೆಳ್ತಂಗಡಿ: ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಪಿಕಪ್ ನ್ನು ಬೇಕಂತಲೇ ಆಟೋ ರಿಕ್ಷಾಗೆ ಡಿಕ್ಕಿ ಹೊಡೆಸಿ ರಿಕ್ಷಾದಲ್ಲಿದ್ದ ಯುವತಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಥಾಮಸ್ನನ್ನು ಬಂಧಿಸಿರುವ ಧರ್ಮಸ್ಥಳ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸೋಮವಾರ ಸಂಜೆ ಗಂಡಿಬಾಗಿಲು ಎಂಬಲ್ಲಿನ ಸಹೋದರಿಯರಿಬ್ಬರು ಸಂಚರಿಸುತ್ತಿದ್ದ ಆಟೋಗೆ ಪಿಕಪ್ ವಾಹನದಲ್ಲಿ ಈತ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಎರಡೂ ವಾಹನಗಳು ಉರುಳಿದಾಗ ರಿಕ್ಷಾದಲ್ಲಿದ್ದ ಯುವತಿ ಮೇಲೆ ಕೈಮಾಡಿ ಆಕೆಯನ್ನು ಹಿಡಿದೆಳೆದು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದನ್ನು ನೋಡಿ ಬಿಡಿಸಲು ಬಂದ ಆಕೆಯ ತಂಗಿಯ ಮೇಲೂ ಕೈಮಾಡಿದ್ದು, ಆಕೆಯ ಮುಖ ಹಾಗೂ ಬೆರಳಿಗೆ ಕಚ್ಚಿ ಗಾಯ ಮಾಡಿದ್ದಾನೆ. ಹತ್ತಿರ ಬಂದ ರಿಕ್ಷಾ ಚಾಲಕನಿಗೂ ಕಚ್ಚಿ, ಹೊಡೆದು ಹಲ್ಲೆ ಮಾಡಿದ್ದಾನೆ, ಅಲ್ಲದೆ ಇಬ್ಬರು ಯುವತಿಯರಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿಯರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನಂತೆ ಆರೋಪಿಯ ವಿರುದ್ದ ಧರ್ಮಸ್ಥಳ ಠಾಣಾ ಅಕ್ರಮ 135/2018, ಕಲಂ 354,323,307 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆರಿಯದಲ್ಲಿ ಮಹಿಳೆಯರ ಮೇಲೆ ನಡೆದ ಕಿರುಕುಳದ ಹಿನ್ನೆಲೆಯಲ್ಲಿ ತಡ ರಾತ್ರಿಯವರೆಗೂ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರಕರಣದ ಆರೋಪಿ ಥಾಮಸ್ ಈ ಹಿಂದೆಯೂ ಕೆಲವು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿದ್ದು, ಈತನ ಅವಳಿ ಸಹೋದರ ಈ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶಿತರಾಗಿ ನೂರಾರು ಸಂಖ್ಯೆಯಲ್ಲಿ ಅಣಿಯೂರು ಪೇಟೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
ರಿಕ್ಷಾಕ್ಕೆ ಗುದ್ದಿ ಅದರಲ್ಲಿದ್ದ ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಯಾಯಿಸಿದ್ದಾರೆ. ಡಿಕ್ಕಿ ಹೊಡೆದ ವಾಹನವನ್ನು ತೆರವು ಮಾಡದಂತೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲವೆಂದು ಜಮಾಯಿಸಿದ್ದ ಜನರು ಪಟ್ಟು ಹಿಡಿದಿದ್ದರು. ಯುವತಿಯರಿಗೆ ಕಿರುಕುಳ ನೀಡಿದ ಹಾಗೂ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಥಾಮಸ್ ನ ಮೇಲೆ ಕ್ರಮ ಕೈಗೊಳ್ಲಬೇಕು ಎಂದು ಒತ್ತಾಯಿಸಿದ್ದರು.
ಅನಾಹುತ ತಪ್ಪಿಸಿದ ಶಾಸಕ ಹರೀಶ ಪೂಂಜ
ಘಟನಾ ಸ್ಥಳದಲ್ಲಿ ಭಾರೀ ಜನ ಸೇರಿರುವುದು ಮತ್ತು ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರು ರಾತ್ರೋ ರಾತ್ರಿ ಸ್ಥಳಕ್ಕೆ ಕೂಡಲೇ ದೌಡಾಯಿಸಿದ್ದರು. ಸ್ಥಳಕ್ಕೆ ಬಂದ ಅವರು ಊರವರನ್ನು ಸಮಾಧಾನ ಪಡಿಸಿ ಯಾವುದೇ ಅಹಿತಕರ ಘಟನೆ ನಡೆಸದಂತೆ ತಿಳಿ ಹೇಳಿದರು. ಶಾಸಕರು ರಾತ್ರಿ ಸುಮಾರು 2 ಗಂಟೆಯವರೆಗೆ ಅಲ್ಲಿಯೇ ಇದ್ದು ಪರಿಸ್ಥಿತಿಯನ್ನು ತಹಬದಿಗೆ ತಂದು ಯಾವುದೇ ದುರ್ಘಟನೆಯಾಗದಂತೆ ನೋಡಿಕೊಡಿದ್ದಾರೆ. ಅಲ್ಲದೆ ಹಲ್ಲೆಗೊಳಗಾದವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಧರ್ಮಸ್ಥಳ ಎಸ್ಐ ಅವಿನಾಶ್ ಹಾಗೂ ತಂಡ ಮತ್ತು ಬೆಳ್ತಂಗಡಿ ಪೊಲೀಸರ ತಂಡ ಮತ್ತು ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್,ಐ ಹಾಗೂ ತಂಡ ರಾತ್ರಿಯವರೆಗೂ ಅಣಿಯೂರಿನಲ್ಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದರು.
ನೆರಿಯದಲ್ಲಿ ನಡೆದ ಕೊಲೆಯತ್ನ ಹಾಗೂ ಮಾನಭಂಗ ಪ್ರಕರಣದ ಆರೋಪಿ ಥಾಮಸ್ನ ಮೇಲೆ ಈ ಹಿಂದೆಯೂ ಹಲವು ಪ್ರಕರಣಗಳಿದೆ. ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಸೂಕ್ತ ತನಿಖೆ ನಡೆಯುತ್ತಿದೆ, ಈತನ ಕ್ರಿಮಿನಲ್ ಹಿನ್ನೆಲೆಯನ್ನು ಗಮನಿಸಿ ಈತನನ್ನು ಗಡಿಪಾರು ಮಾಡಲು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಳೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದರು.