ಬೆಳ್ತಂಗಡಿ: ಹೆಚ್ ಪಿಸಿಎಲ್ ಗ್ಯಾಸ್ ಪೈಪ್ ಲೈನ್ನಲ್ಲಿ ಸ್ಟೇಶನ್ ಸರ್ವಿಸ್ ಗಾರ್ಡಗಳಾಗಿರುವವರನ್ನು ಯಾವುದೇ ಸೂಚನೆಗಳನ್ನು ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಬುಧವಾರ ಹೆಚ್ ಪಿ.ಸಿಎಲ್ ಗ್ಯಾಸ್ ಪೈಪ್ ಲೈನ್ ಹಾದುಹೋಗುವ ಮಂಗಳೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ 38 ಮಂದಿ ಕಂಪೆನಿಯಲ್ಲಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯವರು ಪೈಪ್ ಲೈನ್ ಅಳವಡಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರಿಂದ ಜಮೀನನ್ನು ಪಡದುಕೊಂಡಾಗ ಸಂತ್ರಸ್ಥರಾಗುವವರಿಗೆ ಹಾಗೂ ಗ್ರಾಮದ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿತ್ತು. ಅದರಂತೆ ಗ್ರಾಮಗಳಲ್ಲಿನ ಯುವಕರಿಗೆ ಆಯಾ ಸ್ಥಳಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸವನ್ನೂ ನೀಡಲಾಗಿತ್ತು ಇವರು ಕಳೆದ ಮೂರು ವರ್ಷಗಳಿಂದ ಸಿಐಎಸ್ಎಸ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಜನರಿಗೆ ಕಂಪೆನಿಯವರು ಉದ್ಯೋಗ ಭದ್ರತೆ ನೀಡಿದ್ದರು. ಆದರೆ ಇದೀಗ ಹೆಚ್ಪಿಸಿಎಲ್ ಕಂಪೆನಿಯವರು ಕೇಂದ್ರ ಸರಕಾರದ ಕಾನೂನಿನಂತೆ ಏಕಾಏಕಿಯಾಗಿ ಭದ್ರತಾ ಸಿಬ್ಬಂದಿಗಳ ಗುತ್ತಿಗೆಯನ್ನು ಬದಲಿಸಿರುವುದಾಗಿ ತಿಳಿಸಿದ್ದು, ಆಗಸ್ಟ್ ಒಂದರಿಂದ ಹೊಸ ಕಂಪೆನಿಯವರು ಗುತ್ತಿಗೆ ಕಾರ್ಮಿಕರನ್ನು ನೇಮಿಸುವುದಾಗಿ ತಿಳಿಸಿದೆ. ಸ್ಥಳೀಯರಾಗಿ ನೇಮಕ ಗೊಂಡಿದ್ದ ಈ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಗಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ, ಕೊಯ್ಯೂರು, ನೆರಿಯ ಸೇರಿದಂತೆ ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಕೇಂದ್ರಗಳಲ್ಲಿ ಸುಮಾರು 38 ಮಂದಿ ಕಾರ್ಮಿಕರು ಭದ್ರತಾ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿಯೂ ಇದೇ ರೀತಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆಲಸ ಕಳೆದುಕೊಳ್ಳಲಿರುವ ಕಾರ್ಮಿಕರು ಇದೀಗ ಶಾಸಕರು, ಸಂಸದರಿಗೆ ಗ್ರಾಮ ಪಂಚಾಯತಿಗೆ ಹಾಗೂ ಕಾರ್ಮಿಕ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದ್ದು ತಮ್ಮನ್ನು ಕೆಲಸದಲ್ಲಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಶಾಸಕರ ಭೇಟಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಉದ್ಯೋಗ ಕಳೆದುಕೊಳ್ಳದಂತೆ ಸರಕಾರದೊಂದಿಗೆ, ಹಾಗೂ ಕಂಪೆನಿಯವರೊಂದಿಗೆ ಮಾತುಕತೆ ನಡೆಸುತ್ತೇನೆ ದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೂ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಗ್ರಾಮೀಣ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಈ ಕಾರ್ಮಿಕರೊಂದಿಗೆ ನ್ಯಾಯಕ್ಕಾಗಿ ಯಾವ ಹೋರಾಟಕ್ಕೂ ಸಿದ್ದನಿರುವುದಾಗಿ ತಿಳಿಸಿದರು.