ಉಡುಪಿ, ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಕುಂದಾಪುರ ಅಕ್ಷ್ಜರಶಃ ನಲುಗಿ ಹೋಗಿದೆ. ತಾಲೂಕಿನ ಇಡೂರು-ಕುಂಜ್ಞಾಡಿಯಲ್ಲಿ ಮಳೆನೀರು ತುಂಬಿದ ಹೊಂಡಕ್ಕೆ ವ್ಯಕ್ತಿ ಬಿದ್ದು ಮೃತಪಟ್ಟಿದ್ದು, ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಐರಬೈಲು ಎಂಬಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ತಗ್ಗು ಪ್ರದೇಶಗಳು ಹಾಗೂ ನದಿಪಾತ್ರದ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದು ಅಲ್ಲಿನ ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ತಾಲೂಕಿನ ತಲ್ಲೂರು, ಹಕ್ಲಾಡಿ ಹಾಗೂ ಸೌಕೂರಿನಲ್ಲಿ ಗಂಜಿ ಕೇಂದ್ರ ತೆರೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಹರಿಯುವ ಚಕ್ರಾ, ವಾರಾಹಿ, ಖೇಟಕಿ, ಕುಬ್ಜಾ, ಸೌಪಣೀಕಾ ನದಿಗಳು ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.
ಪ್ರತೇಕ ಪ್ರಕರಣ; ಓರ್ವ ಸಾವು, ಓರ್ವ ನಾಪತ್ತೆ
ಇಡೂರು-ಕುಂಜ್ಞಾಡಿ ರಘುರಾಮ ಶೆಟ್ಟಿ (54) ಎಂಬವರು ಸೋಮವಾರ ರಾತ್ರಿ ಗದ್ದೆ ಬೈಲಿನಲ್ಲಿ ಮನೆಗೆ ನಡೆದು ಕೊಂಡು ಹೋಗುತ್ತಿರುವಾಗ ನೀರಿನ ಹೊಂಡಕ್ಕೆ ಬಿದ್ದು ನಾಪತ್ತೆಯಾಗಿದ್ದು ಇಂದು ಮಧ್ಯಾಹ್ನದ ಸುಮಾರಿಗೆ ಅವರ ಮೃತದೇಹ ಪತ್ತೆಯಾಗಿದೆ. ಸಿದ್ದಾಪುರದ ಐರಬೈಲು ಎಂಬಲ್ಲಿ ವಾರಾಹಿ ಕಾಲುವೆ ಸಮೀಪದ ತೋಡಿನಲ್ಲಿ ಶಂಕರ ಪೂಜಾರಿ ಎನ್ನುವ ವ್ಯಕ್ತಿ ಕೊಚ್ಚಿಹೋಗಿದ್ದು ಅವರ ಹುಡುಕಾಟ ಮುಂದುವರಿದಿದೆ.
ಎಲ್ಲೆಲ್ಲಿ ಮಳೆಯಬ್ಬರ….
ತಾಲೂಕಿನ ಗುಲ್ವಾಡಿ ಗ್ರಾಮದ ಚಿಕ್ಕಪೇಟೆ, ಕುಟ್ಟಟ್ಟಿ, ಗುಲ್ವಾಡಿ ಕುದ್ರು ಪ್ರದೇಶದಲ್ಲಿ ಮನೆಗೆ ನೀರು ನುಗ್ಗಿದ್ದು, ಜನ ಮತ್ತು ಜಾನುವಾರು ದೋಣಿ ಮೂಲಕ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತೆರೆದ ಗಂಜಿ ಕೇಂದ್ರದಲ್ಲಿ ತಾತ್ಕಾಲಿಕ ವ್ಯವ್ಯಸ್ಥೆ ಕಲ್ಪಿಸಲಾಗಿದೆ. ಚಿಕ್ಕಪೇಟೆ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿದ್ದರೂ ಮನೆಬಿಟ್ಟು ಪುನರ್ವಸತಿಗೆ ಬರಲು ಹಿಂದೇಟು ಹಾಕಿದವರನ್ನು ಕುಂದಾಪುರ ಎಸಿ ಭೂಬಾಲನ್ ಅವರು ಮನೆ ಒಲಿಸಿ ಸ್ಥಳಾಂತರಿಸಿದ್ದಾರೆ. ಇಲ್ಲಿನ ೨೫ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡಿದೆ. ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಕಾವ್ರಾಡಿ, ಹಳ್ನಾಡು ಪ್ರದೇಶದಲ್ಲಿ ನೀರು ನುಗ್ಗಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಪರಿಹಾರ ಕಾರ್ಯ ನಡೆಸುತ್ತಿದೆ. ಕುಂದಾಪುರ ಎಸಿ ಟ.ಭೂಬಾಲನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಕುಂದಾಪುರ ಇಒ ಕಿರಣ್ ಫಡ್ನೇಕರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಂಡ್ಲೂರಿನಲ್ಲೂ ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯರ ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಗಾಗಿದೆ. ಹಕ್ಲಾಡಿ, ಬಟ್ಟೆಕುದ್ರು, ತೊಪ್ಲು, ಬಾರಂದಾಡಿ ಪ್ರದೇಶ ನೂರಾರು ಮನೆ ನೀರು ನುಗ್ಗಿದ್ದು, ಜನ ಹಾಗೂ ಜಾನುವಾರು ಎತ್ತರದ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಎಚ್ಚರಿಕೆ ಹಿನ್ನೆಲೆಯಲ್ಲಿ ದೋಣಿ ಸನ್ನಿದ್ಧಗೊಳಿಸಲಾಗಿದೆ.
ಕುಬ್ಜಾ ನದಿ ತುಂಬಿ ಹರಿಯುತ್ತಿದ್ದು, ಕಮಲೆಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗರ್ಭಗುಡಿಗೂ ನೀರು ನುಗ್ಗಿದ್ದ ಇಡೀ ದೇವಸ್ಥಾನ ಪರಿಸರ ದ್ವೀಪವಾಗಿದೆ. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಕುಂದಾಪುರ-ಸಿದ್ದಾಪುರ ರಾಜ್ಯ ಹೆದ್ದಾರಿಯ ಮೇರ್ಡಿ, ಕೋಣಿ, ಮೂಡ್ಲಕಟ್ಟೆ, ಬಳ್ಕೂರು, ಪರಿಸರದಲ್ಲಿ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಕೋಣಿ ಬಯಲು, ಬಡಾಕೆರೆ ಬಯಲು, ಉಪ್ಪಿನಕುದ್ರು ಪ್ರದೇಶ ಜಾಲವೃತ್ತಗೊಂಡಿದ್ದು, ಸ್ಥಳಾಂತರ ಮಾಡುವ ಪರೀಸ್ಥಿತಿಯಲ್ಲಿದೆ. ಕಟ್ಟು, ಸುಳ್ವೆ, ಹಕ್ಲಾಡಿ ಪ್ರದೇಶದಲ್ಲಿ ಗಂಜಿ ಕೇಂದ್ರ ತೆರಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ದಾಖಲೆಯ ಮಳೆಗೆ ಕುಂದಾಪುರ ತತ್ತರ!
1982-83ರಲ್ಲಿ ಕುಂದಾಪುರ ಕುಂಭದ್ರೋಣ ಮಳೆ ಕಂಡಿದ್ದು, ಅದರ ನಂತರ ಮೊಟ್ಟಮೊದಲು ಅತಿವೃಷ್ಟಿ ಕಾಣುತ್ತಿದ್ದು, ಎಲ್ಲಿ ನೋಡಿದರೂ ಜಲಾವೃತ ಪ್ರದೇಶವೇ ಕಣ್ಣಿಗೆ ಕಾಣುತ್ತಿದೆ. ಚಿಕ್ಕಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೃತಕ ನೆರೆ ಸೃಷ್ಟಿ ಮಾಡಿದೆ . ಕಾಲ್ತೋಡು, ಹೊಸೂರು ಕಾಲು ಸಂಕದ ಮೇಲೆ ನೀರು ಹರಿಯುತ್ತಿದ್ದು, ಜನತೆ ದಿಗ್ಬಂಧನಕ್ಕೊಳಗಾದ ಸ್ಥಿತಿಯೂ ಉಂಟಾಗಿದೆ.
ತಾಲೂಕು ಆಡಳಿತ ಅತಿವೃಷ್ಠ ಎದುರಿಸಲು ಸನ್ನಿದ್ಧವಾಗಿದ್ದು, ಸದ್ಯ ಸೌಕೂರು, ತಲ್ಲೂರು ಹಾಗೂ ಹಕ್ಲಾಡಿಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಅವಶ್ಯಕತೆ ಬಿದ್ದರೆ ಇನ್ನಷ್ಟು ಗಂಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಸಿದ್ದವಿದೆ. ನೆರೆ ಪರಿಸ್ಥಿತಿ ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಜನ ತಾಲೂಕು ಆಡಳಿತದ ಜತೆ ಸಹಕಾರ ನೀಡಬೇಕು.
– ಟಿ.ಭೂಬಾಲನ್, ಎಸಿ ಕುಂದಾಪುರ.