ಪ್ರಕೃತಿ ನಮಗೆ ಸಾಕಷ್ಟನ್ನು ನೀಡುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ಪ್ರಕೃತಿಯನ್ನು ಸ್ಮರಿಸುವ ಕೆಲಸಮಾಡುವುದಿಲ್ಲ.ಆದರೆ ಕರಾವಳಿಯ ಗೌಡ ಸಾರಸ್ವತಬ್ರಾಹ್ಮಣರು ಶ್ರಾವಣದಲ್ಲಿ ಚೂಡಿಪೂಜೆ ಮಾಡುವ ಮೂಲಕ ಪ್ರಕೃತಿಯನ್ನು ನೆನೆಯುತ್ತಾರೆ. ಶ್ರಾವಣಮಾಸದ ಮೊದಲ ವಾರದಲ್ಲಿ ಈ ಪೂಜೆಯನ್ನು ನಡೆಸಲಾಗುತ್ತದೆ.ಈ ವಿಶಿಷ್ಟ ಆಚರಣೆಯ ಕುರಿತ ಒಂದು ವರದಿ ಇಲ್ಲಿದೆ.
ಶ್ರಾವಣ ಮಾಸ ಬಂತೆಂದರೆ ಸಾಕು ;ಕರಾವಳಿಯ ಗೌಡ ಸಾರಸ್ವತ ಕುಟುಂಬಗಳಲ್ಲಿ ಈ ದೃಶ್ಯ ಸರ್ವೇಸಾಮಾನ್ಯ. ಶ್ರಾವಣಮಾಸದ ಮೊದಲ ವಾರದಲ್ಲಿ ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿ ಚೂಡಿ ಪೂಜೆ ನಡೆಸುವುದು ಪದ್ಧತಿ. ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಕರವೀರ ,ಅಗತೆ ಹೂವು,ಮಿಠಾಯಿ ಹೂವು ,ನೆಲನೆಲ್ಲಿ ,ಅನ್ವಾಲಿ ,ರಥ ಹೂ,ಗಂಟಿ ಗಿಡ ,ಕಾಗೆ ಕಣ್ಣು ,ಶಂಕಪುಷ್ಪ ,ರತ್ನ ಗಂಧಿಮತ್ತು ಗರಿಕೆಗಳನ್ನು ಸುಂದರವಾಗಿ ಜೋಡಿಸಿ “ಚೂಡಿ” ಮಾಡಿ ಅದನ್ನು ಬಾಳೆಯ ನಾರಲ್ಲಿ ಕಟ್ಟಲಾಗುತ್ತದೆ. ಬಳಿಕ ತುಳಸಿ ಕಟ್ಟೆ ಮುಂದೆ ಇರಿಸಿ ,ಪ್ರದಿಕ್ಷಿಣೆ ಹಾಕಿ ಅಕ್ಷತೆ ಹಾಕಲಾಗುತ್ತದೆ. ಬಳಿಕ ಮನೆಯ ಹೊಸ್ತಿಲಲಿಟ್ಟು ದೇವತೆಗಳನ್ನು ಸ್ವಾಗತಿಸುತ್ತಾರೆ .ಮುತ್ತೈದೆಯರು ತುಳಸಿಗೆ ಈ ಪೂಜೆಸಲ್ಲಿಸುವುದರಿಂದ ಗಂಡಂದಿರಿಗೆ ಮತ್ತು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬುದು ಪ್ರತೀತಿ.
ಪತಿಯ ಆರೋಗ್ಯ ಚೆನ್ನಾಗಿರಲಿ.ದಾಂಪತ್ಯ ಚೆನ್ನಾಗಿರಲಿ ಎಂಬ ಉದ್ದೇಶಕ್ಕೆ ಈ ಪೂಜೆ ನೆರವೇರಿಸಲಾಗುತ್ತದಾದರೂ ಇದರ ಹಿಂದೆ ಪ್ರಕೃತಿಯನ್ನು ನೆನೆಯುವ ಕಲ್ಪನೆಯೂ ಅಡಗಿದೆ. ಸರಸ್ವತಿ ನದಿ ತೀರದಲ್ಲಿ ಹಿಂದೆ ಇದ್ದ ವಂಶ ಗೌಡ ಸಾರಸ್ವತರು. ಈ ವಂಶ ಕಾಡಿನಲ್ಲಿ ಬದುಕುತ್ತಿತ್ತೆಂದೂ ,ಶೃಂಗಾರ ಪ್ರಿಯರಾದ ಇವರು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆತ ಹೂಗಳನ್ನು ಚೂಡಿ ಕಟ್ಟಿ ಪೂಜಿಸುತ್ತಿದ್ದರು ಎಂಬುದು ಐತಿಹ್ಯ.ಈ ಸಂಪ್ರದಾಯ ಇಂದಿಗೂ ನಡೆದುಕೊಂಡುಬಂದಿದ್ದು, ಕೆಲವೆಡೆ ದೇವಸ್ಥಾನಗಳಲ್ಲಿ ಪೂಜೆಯ ವ್ಯವಸ್ಥೆ ಮಾಡಿದರೆ ,ಕೆಲವು ಮನೆಗಳಲ್ಲಿ ಮುತ್ತೈದೆಯರು ಸಾಮೂಹಿಕವಾಗಿ ಚೂಡಿ ಪೂಜೆ ಆಚರಿಸುತ್ತಾರೆ. ಹೊಸದಾಗಿ ಮದುವೆಯಾದ ನವ ತರುಣಿಯರಿಗಂತೂ ಈ ಹಬ್ಬ ಬಂದ್ರೆ ಎಲ್ಲಿಲ್ಲದ ಸಂತೋಷ. ಪತಿಯ ಜೊತೆಗೆ ತವರಿಗೆ ಹೋಗೋದು, ತಮ್ಮ ಸಮುದಾಯದ ಮನೆಯಲ್ಲಿ ನಡೆದ ಚೂಡಿ ಹಬ್ಬದಲ್ಲಿ ಸಿಕ್ಕ ಚೂಡಿಯನ್ನು ಮುಡಿಸಿಕೊಂಡು ಆಶೀರ್ವಾದವನ್ನು ಪಡೆಯೋದು ಒಂದು ಭಾವನಾತ್ಮಕ ಕ್ಷಣವಾಗಿರುತ್ತೆ. ಈ ಚೂಡಿ ಪೂಜೆ ಮೂಲಕ ಪ್ರಕೃತಿ ಪೂಜೆ ಜೊತೆಗೆ ಮುತ್ತೈದೆ ಭಾಗ್ಯ ಆರೋಗ್ಯ ಐಶ್ವರ್ಯ ವೃದ್ದಿಸಿಕೊಳ್ಳುವ ನಂಬಿಕೆ ತಲೆತಲಾಂತರಗಳಿಂದ ನಡೆದುಕೊಂಡುಬಂದಿದೆ. ಈ ಚೂಡಿ ಹಬ್ಬ ಮೊದಲ ಶ್ರಾವಣ ಮಾಸದ ಮೊದಲ ವಾರ ಬಂದಿರುವುದು ಮುತ್ತೈದೆಯರಲ್ಲಿ ಇನ್ನಷ್ಟು ಖುಷಿ ತಂದಿದೆ.
ಒಟ್ಟಿನಲ್ಲಿಪ್ರಕೃತಿಯನ್ನು ಸ್ಮರಿಸುವ ಈ ವಿಶಿಷ್ಟ ಪೂಜೆ-ಸಂಪ್ರದಾಯ ಈಗಲೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ. ಏನೇ ಆಗ್ಲಿ ಇಂತಹ ಹಬ್ಬದ ಮೂಲಕ ಸಮುದಾಯ ಹಾಗೂ ಕುಟುಂಬದ ನಡುವೆ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿ ಅನ್ನೋದೆ ಎಲ್ಲರ ಆಶಯ.