ಮೂಡುಬಿದಿರೆ: ಮೂಡುಬಿದಿರೆ ನಗರ ಪ್ರದೇಶದಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಸಿದವರಿಗೆ ದಂಡ ಹೇರಲು ಸೋಮವಾರ ಇಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.
ಅಧಿಕಾರಿಗಳು ಪುರಸಭಾ ವ್ಯಾಪ್ತಿಯಲ್ಲಿ ಮಾತ್ರ ಪ್ಲಾಸ್ಟಿಕನ್ನು ನಿಷೇಧ ಮಾಡಿದರೆ ಸಾಲದು. ಆಸುಪಾಸಿನ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿರುವುದರಿಂದ ಅಲ್ಲಿನ ಪ್ಲಾಸ್ಟಿಕ್, ತ್ಯಾಜ್ಯಗಳು ನಗರದೊಳಗೆ ಬರುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಅಧಿಕಾರಿಗಳನ್ನು ಕರೆಸಿ ಜಾಗೃತಿ ಮೂಡಿಸಬೇಕಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಆ. 15ರಿಂದ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಈಗಿರುವ ಎಲ್ಲಾ ಪ್ಲೆಕ್ಸ್ ಗಳನ್ನು ತೆರವುಗೊಳಿಸಬೇಕು. ಅವಧಿ ಮೀರಿದ ಪ್ಲೆಕ್ಸ್ಗಳ ವಾರೀಸುದಾರರಿಗೆ ನೋಟಿಸ್ ನೀಡಿ ಸ್ಪಂದಿಸದಿದ್ದಲ್ಲಿ ದಂಡ ಹಾಕುವ ಬಗ್ಗೆ ರತ್ನಾಕರ ದೇವಾಡಿಗ, ಹನೀಫ್ ಅಲಂಗಾರು ಮತ್ತಿತರರು ಸಲಹೆ ನೀಡಿದ್ದಾರೆ.
ಅವರು ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಪ್ಲಾಸ್ಟಿಕ್ನ್ನು ಸಂಪೂರ್ಣವಾಗಿ ನಿಷೇಧಗೊಳಿಸುವ ಬಗ್ಗೆ ಮಾತನಾಡಿದರು. ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿದವರಿಗೆ ದಂಡ ವಿಧಿಸುವ ಬಗ್ಗೆ ಪರಿಸರ ಅಭಿಯಂತರೆ ಶಿಲ್ಪಾ ಎಸ್ ವಿವರಣೆ ನೀಡಿದರು. ದಂಡ ವಿಧಿಸಿದರೂ ಪಾವತಿ ಮಾಡದಿದ್ದರೆ ಕ್ರಿಮಿನಲ್ ಮೊಕದ್ದಮೆಗೆ ಅವಕಾಶವಿದೆ ಎಂದು ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ ಹೇಳಿದರು. ಈ ನಡುವೆ ಸಿಪಿಎಂನ ರಮಣಿ, ದಂಡ ಕಟ್ಟಿದ ಮೇಲೆ ಫ್ಲೆಕ್ಸ್ ತೆಗಿಸಲಿಕ್ಕೆ ಆಗ್ತದಾ ಎಂಬ ಪ್ರಶ್ನೆ ಎತ್ತಿ ಮತ್ತಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಕೊನೆಗೆ ಈಗ ಇರುವ ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಿ ಹೊಸದಾಗಿ ಹಾಕುವವರಿಗೆ ದಂಡ ವಿಧಿಸಲು ನಿರ್ಧರಿಸಲಾಯಿತು.