ಮೂಡುಬಿದಿರೆ: ರೈತರಿಗೆ ಶೀಘ್ರದಲ್ಲೆ ಸರಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಗುರುತು ಚೀಟಿಯನ್ನು ಪಡೆಯಲು ರೈತರು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಎನ್.ಹೆಚ್ ಶಿವಶಂಕರ್ ರೆಡ್ಡಿ ಹೇಳಿದರು.
ಅವರು ಮಂಗಳವಾರ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಕೃಷಿ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಕೃಷಿಗೆ ಕೂಲಿ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಯಾಂತ್ರಿಕ ಕೃಷಿಗೆ ರೈತರು ಒತ್ತು ಕೊಡಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡಲು ಬದ್ಧ ಎಂದರು.
ಪುತ್ತಿಗೆ ಗ್ರಾಮದ ಕಂಚಿಬೈಲು ಪಾಂಡುರಂಗ ಭಟ್ ಅವರ ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಾಣವಾದ ಕೃಷಿ ಹೊಂಡವನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸಚಿವರು ಕಡಂದಲೆ ಪರಾರಿ ಸಂತೋಷ್ ಶೆಟ್ಟಿ ಅವರ ಆಡು ಸಾಕಣೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.