ಸುಳ್ಯ: ಮೀಸಲು ಅರಣ್ಯದಿಂದ ಅಕ್ರಮವಾಗಿ ಮರ ಕಡಿಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಮರದಡಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ಮೀಸಲು ಅರಣ್ಯದಲ್ಲಿ ನಡೆದಿದೆ.
ಮರ್ಕಂಜದ ಲೋಕನಾಥ (46) ಮೃತಪಟ್ಟವರು. ಬೊಮ್ಮಾರು ಮೀಸಲು ಅರಣ್ಯದಲ್ಲಿ ಕಳೆದ ರಾತ್ರಿ ನಾಲ್ಕು ಜನ ಮರಗಳ್ಳರ ತಂಡ ಅಕ್ರಮವಾಗಿ ಮರ ಕಡಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮರ ದೇಹಕ್ಕೆ ಬಿದ್ದು ಲೋಕನಾಥ ಮೃತಪಟ್ಟಿರುವುದು ತಿಳಿದು ಜೊತೆಯಲ್ಲಿದ್ದವರು ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಪಟ್ಟು ಅರಣ್ಯ ಇಲಾಖೆಯು ತನಿಖೆ ಆರಂಭಿಸಿದ್ದು ನಾಲ್ಕು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೀಸಲು ಅರಣ್ಯದಲ್ಲಿ ಅಕ್ರಮ ಪ್ರವೇಶ ಮತ್ತು ಅಕ್ರಮವಾಗಿ ಮರ ಕಡಿದಿರುವುದಕ್ಕೆ ಮೃತ ಲೋಕನಾಥ್ ಜತೆಯಲ್ಲಿದ್ದ ಫಾರೂಕ್, ಸತ್ಯ, ದಾಮೋದರ ಎಂಬವರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.