ಸುಳ್ಯ: ಮಂಡೆಕೋಲು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ದರ್ಶನ ನೀಡಿದ ಕಾಳಿಂಗ ಸರ್ಪವೊಂದು ಸುಮಾರು ಮೂರು ಗಂಟೆಗಳ ಕಾಲ ಆತಂಕದ ವಾತಾವರಣವನ್ನು ಸೃಷ್ಠಿಸಿತು.
ಗ್ರಾಮ ಪಂಚಾಯಿತಿ ಕಚೇರಿಗೆ ಏಕಾ ಏಕಿ ನುಗ್ಗಿದ ಅಪರೂಪದ ಅತಿಥಿಯನ್ನು ನೋಡಿ ಪಂಚಾಯಿತಿಯಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ದಂಗಾದರು. ಸೋಮವಾರ ಮಧ್ಯಾಹ್ನದ ಬಳಿಕ ಮೂರೂವರೆ ಗಂಟೆಯ ವೇಳೆಗೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಜನರು ನೋಡುತ್ತಿದ್ದಂತಯೇ ನೇರವಾಗಿ ಬಂದು ಪಂಚಾಯಿತಿಗೆ ನುಗ್ಗಿದೆ.
ಕಚೇರಿಯಲ್ಲಿ ಅಲ್ಲಲ್ಲಿ ತೆವಳಿದ ಹಾವು ಕಚೇರಿಯ ಕಪಾಟಿನ ಸೆರೆಯಲ್ಲಿ ನುಗ್ಗಿ ಕುಳಿತಾಗ ಏನು ಮಾಡಬೇಕೆಂದು ತೋಚದೆ ಕೆಲ ಕಾಲ ಗಲಿಬಿಲಿ ಉಂಟಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಹಾವು ಹಿಡಿಯುವುದರಲ್ಲಿ ತಜ್ಞರಾದ ಶ್ಯಾಮ್ ಭಟ್ ಮತ್ತು ನಿವೃತ್ತ ಅರಣ್ಯ ಅಧಿಕಾರಿ ಶಿವರಾಮ ಬಲ್ಯಾಯ ಇವರ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ಹಿಡಿದು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು. ಗ್ರಾಮ ಪಂಚಾಯಿತಿಗೆ ಕಾಳಿಂಗ ಸರ್ಪ ನುಗ್ಗಿರುವುದನ್ನು ತಿಳಿದು ಕುತೂಹಲದಿಂದ ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.