ಸುಳ್ಯ: ಅಡಕೆಗೆ ಬಾದಿಸಿದ ಕೊಳೆ ರೋಗದಿಂದಗಿ ವ್ಯಾಪಕ ಹಾನಿ ಉಂಟಾಗಿದ್ದು ಅಡಕೆ ಕೃಷಿ ಹಾನಿಗೆ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸುಳ್ಯ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾ.ಪಂ ಸದಸ್ಯ ಅಶೋಕ ನೆಕ್ರಾಜೆ ವಿಷಯ ಪ್ರಸ್ತಾಪಿಸಿ, ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದು ಕೃಷಿಕರ ಫಸಲು ಸಂಪೂರ್ಣ ನಷ್ಟವಾಗಿದೆ. ರೈತರು ಆತ್ಮಹತ್ಯೆ ಮಾಡುವ ಸನ್ನಿವೇಶ ಉಂಟಾಗಿದ್ದು, ರೈತರನ್ನು ಈ ಎಲ್ಲ ಸಂಕಷ್ಟಗಳಿಂದ ಪಾರು ಮಾಡಲು ನಷ್ಟಕ್ಕೆ ಪೂರ್ಣ ಪ್ರಮಾಣದ ಪರಿಹಾರ ಭರಿಸುವಂತೆ ಒತ್ತಾಯಿಸಿದರು. ಜಿ.ಪಂ ಸದಸ್ಯರಾದ ಹರೀಶ್ ಕಂಜಿಪಿಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಧ್ವನಿಗೂಡಿಸಿದರು.
ಕೊಳೆ ರೋಗ ಸಮೀಕ್ಷೆಯ ಅರ್ಜಿ ಸಲ್ಲಿಕೆಗೆ ಅತೀ ಕಡಿಮೆ ಸಮಯ ನಿಗದಿಪಡಿಸುವುದು ಸರಿಯಲ್ಲ. ಇದರಿಂದ ತೊಂದರೆ ಆಗುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಕೊಳೆ ರೋಗದ ನಷ್ಟ ಅಂದಾಜಿಸಲು ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಸೆ.10ರೊಳಗೆ ಅರ್ಜಿ ನೀಡಬೇಕು. ಪಸಲು ನಷ್ಟ ಸಮೀಕ್ಷೆಗೆ ತೋಟಗಾರಿಕೆ, ಕಂದಾಯ ಸಹಿತ ಪ್ರಮುಖ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಲಾಗಿದೆ. ಫಸಲು ನಷ್ಟದ ಸಮೀಕ್ಷೆ ನಡೆಸಿ ನಷ್ಟದ ಪಟ್ಟಿ ಸಿದ್ಧಪಡಿಸಿದ ಬಳಿಕ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಸರ್ವೇ ವಿಚಾರದಲ್ಲಿ ಗೊಂದಲ ಇದೆ ಇದನ್ನು ಸರಿಪಡಿಸಿಕೊಂಡು ಕೃಷಿಕರಿಗೆ ಸೂಕ್ತ ಮಾಹಿತಿ ಮತ್ತು ಪರಿಹಾರ ಸಿಗಬೇಕಿದೆ ಎಂದು ಸದಸ್ಯರು ಆಗ್ರಹಿಸಿದರು.
ಭೂಕುಸಿತ ಸಂಭವಿಸಿ ಮನೆ ಬಿಟ್ಟು ಬಂದ ಕುಟುಂಬಗಳಿಗೆ ಶಾಶ್ವತ ಮನೆ ವ್ಯವಸ್ಥೆ ಕತೆ ಏನು ಎಂದು ಆಶಾ ತಿಮ್ಮಪ್ಪ ಪ್ರಶ್ನಿಸಿದರು. ತಹಸೀಲ್ದಾರ್ ಬಿ.ಎಂ.ಕುಂಞಮ್ಮ ಉತ್ತರಿಸಿ ಕಲ್ಮಕಾರು ಭಾಗದಲ್ಲಿ ಭೂಕುಸಿತದ ಅಪಾಯವಿರುವ ಕುಟುಂಬಗಳು ವಾಸವಿರುವ ಸ್ಥಳಗಳು ವಾಸಕ್ಕೆ ಯೋಗ್ಯವೇ ಎಂಬ ಕುರಿತು ಭೂಗರ್ಭಶಾಸ್ತ್ರ ವಿಜ್ಞಾನಿಗಳು ಶೀಘ್ರ ಪರಿಶೀಲನೆ ನಡೆಸಿ ಅವರ ಅಭಿಪ್ರಾಯದ ಬಳಿಕ ಮುಂದಿನ ಕ್ರಮಕ್ಕೆ ನಿರ್ಧರಿಸಲಾಗುವುದು ಎಂದರು.
ಮರ್ಕಂಜ, ಮಡಪ್ಪಾಡಿಗಳಲ್ಲಿ ಭೂಮಿ ಕುಸಿತಗೊಂಡ ಕೃಷಿ, ಮನೆಗೆ ಹಾನಿಯಾಗಿದೆ. ಇವರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಹರೀಶ್ ಕಂಜಿಪಿಲಿ ಒತ್ತಾಯಿಸಿದರು.
ಕಡಬ ತಾಲೂಕಿಗೆ ತಾಗಿಕೊಂಡಿರುವ ಪಂಜ ಮತ್ತು ಕೂತ್ಕುಂಜ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯದ ನಡುವೆಯೂ ಕೈ ಬಿಡಲಾಗಿದೆ. ಈ ಗ್ರಾಮಗಳನ್ನು ಕಡಬ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ತಾ.ಪಂ ಸದಸ್ಯ ಅಬ್ದುಲ್ ಗಪೂರ್ ಒತ್ತಾಯಿಸಿದರು. ಈ ಕುರಿತು ನಿರ್ಣಯ ಕೈಗೊಳ್ಳಲು ಅವರು ಒತ್ತಾಯಿಸಿದರು.
ತಾಲೂಕಿನ ನಾನಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸಿಬ್ಬಂದಿ, ಅಧಿಕಾರಿಗಳು ಇಲ್ಲದ ಕಾರಣ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮಕೈಗೊಳ್ಳಲು ನಿರ್ಣಯಿಸಿ, ಮೇಲಾಧಿಕಾರಿಗಳಿಗೆ ತಿಳಿಸಬೇಕು ಎಂದು ತಾ.ಪಂ.ಸದಸ್ಯ ಅಬ್ದುಲ್ ಗಫೂರ್ ಒತ್ತಾಯಿಸಿದರು.
ಅನಧಿಕೃತ ಕಟ್ಟಡ ತೆರವಿಗೆ ನ.ಪಂ.ಏನು ಕ್ರಮ ಕೈಗೊಂಡಿದೆ.?
ತಾಲೂಕು ಪಂಚಾಯಿತಿ ನೂತನ ಕಟ್ಟಡದ ನಿರ್ಮಾಣಕ್ಕೆ ನಗರ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ ಎಂದು ನ.ಪಂ.ಸಭೆಯಲ್ಲಿ ಚರ್ಚೆಯಾಗಿರುವುದಕ್ಕೆ ತಾ.ಪಂ.ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರಿ ಕಟ್ಟಡಕ್ಕೆ ಅನುಮತಿ ಪಡೆದಿಲ್ಲ ಎಂದು ಹೇಳುವ ನಗರಾಡಳಿತ ನಗರದಲ್ಲಿ ಅಲ್ಲಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಏನು ಕ್ರಮ ಕೈಗೊಂಡಿದ್ದಾರೆ. ಎಂದು ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಪ್ರಶ್ನಿಸಿದರು. ಶಾಸಕರೇ ಸೂಚನೆ ನೀಡಿದರೂ ಅನಧಿಕೃತ ಕಟ್ಟಡವನ್ನು ತೆರವು ಮಾಡದೇ ಇರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ಬಿದ್ದರೆ ನಗರ ಪಂಚಾಯಿತಿ ಮುಖ್ಯಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಯನ್ನೂ ಸಭೆಗೆ ಕರೆಸಿಕೊಳ್ಳುವ ಅಧಿಕಾರ ತಾ.ಪಂ.ಗೆ ಇದೆ ಎಂದು ಸದಸ್ಯರು ಹೇಳಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ತಹಸೀಲ್ದಾರ್ ಕುಂಞಮ್ಮ ಇದ್ದರು.