ಸುಳ್ಯ: ಶಿಥಿಲಗೊಂಡಿರುವ ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯ ಕಾಂತಮಂಗಲ ಸೇತುವೆಯ ದುರಸ್ಥಿ ಕಾರ್ಯ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸೇತುವೆಯನ್ನು ಮುಚ್ಚಲಾಗಿದ್ದು ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಗಳನ್ನು ಸೂಚಿಸಲಾಗಿದೆ.
1980ರಲ್ಲಿ ನಿರ್ಮಾಣಗೊಂಡ ಸೇತುವೆಯು ಶಿಥಿಲಗೊಂಡಿದ್ದು ಕಬ್ಬಿಣಕ್ಕೆ ಮತ್ತು ಸ್ಲಾಬ್ಗಳಿಗೆ ಹಾನಿ ಸಂಭವಿಸಿ ಸೇತುವೆಯ ಮೇಲೆ ಹೊಂಡಗಳೇ ತುಂಬಿತ್ತು ಮತ್ತು ಮಧ್ಯದಲ್ಲಿ ಉದ್ದಕ್ಕೆ ಬಿರುಕು ಬಿಟ್ಟಿದ್ದ ಹೊಂಡವು ಅಪಾಯದ ಕರೆಗಂಟೆಯನ್ನು ಬಾರಿಸುತ್ತಿತ್ತು. ಈ ಕುರಿತು ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಪ್ರಕೃತಿ ವಿಕೋಪ ತಡೆ ಸಭೆಯಲ್ಲಿ ಭಾರೀ ಚರ್ಚೆ ನಡೆದಿತ್ತು. ಮತ್ತು ಸೇತುವೆಯ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಶಾಸಕರು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಜಿ.ಪಂ.ಇಂಜಿನಿಯರಿಂಗ್ ವಿಭಾಗ ಮತ್ತು ತಜ್ಞರ ತಂಡ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ತುರ್ತು ದುರಸ್ಥಿ ಆರಂಭಿಸಿದ್ದಾರೆ.
90 ಮೀಟರ್ ಉದ್ದ, 4.5 ಮೀಟರ್ ಅಗಲ ಮತ್ತು 15 ಮೀಟರ್ ಎತ್ತರದ ಸೇತುವೆಯು ಈಗ ಶಿಥಿಲಗೊಂಡಿದ್ದು ಗಡಸು ಕಬ್ಬಿಣಕ್ಕೆ, ಪ್ಲೇಟ್ಗಳಿಗೆ ಮತ್ತು ಕಾಂಕ್ರೀಟ್ ಸ್ಲಾಬ್ಗಳಿಗೆ ಹಾನಿಯಾದ ಕಾರಣ ಸೇತುವೆಯಲ್ಲಿ ಹೊಂಡ ಬಿದ್ದಿತ್ತು. ತುಕ್ಕು ಹಿಡಿದು ಶಿಥಿಲವಾಗಿರುವ ಸೇತುವೆಯ ಜಾಯಿಂಟ್ಗಳು, ಕಬ್ಬಿಣ, ಸ್ಲಾಬ್ಗಳನ್ನು ತೆಗೆದು ಹೊಸ ಜಾಯಿಂಟ್ ಪ್ಲೇಟ್ಗಳನ್ನು ಅಳವಡಿಸಿ ಇಡೀ ಸೇತುವೆಯ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕಲಾಗುವುದು. ದುರಸ್ಥಿ ಕಾರ್ಯಕ್ಕೆ ಸುಮಾರು 20 ಲಕ್ಷ ರೂ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು ಐದು ಲಕ್ಷ ರೂ ಬಿಡುಗಡೆಯಾಗಿದೆ.
ಪರ್ಯಾಯ ರಸ್ತೆ: ಅಜ್ಜಾವರ-ಮಂಡೆಕೋಲು ರಸ್ತೆಯಲ್ಲಿ ಪ್ರಯಾಣಿಸುವವರು ಅಡ್ಕಾರು-ಬೈತ್ತಡ್ಕ- ಪೇರಾಲು-ಅಜ್ಜಾವರ ರಸ್ತೆ ಮತ್ತು ಅಜ್ಜಾವರ-ಮೇದಿನಡ್ಕ-ನಾರ್ಕೋಡು-ಸುಳ್ಯ ರಸ್ತೆಯಲ್ಲಿ ಸುಳ್ಯ ಬೈತಡ್ಕ ಮಂಡೆಕೋಲುಪ್ರಯಾಣಿಸಲು ಸೂಚಿಸಲಾಗಿದೆ. ಸೇತುವೆಯ ನವೀಕರಣಕ್ಕೆ ಒಂದೂವರೆ ತಿಂಗಳು ಬೇಕಾಗಬಹುದು ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ.