ಸುಳ್ಯ: ಇಂಧನ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಸುಳ್ಯದಲ್ಲಿ ಯಶಸ್ವಿಯಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬೆರಳೆಣಿಕೆಯ ಅಂಗಡಿಗಳು ಮಾತ್ರ ತೆರೆದಿತ್ತು. ಕೆಎಸ್ಆರ್ ಟಿಸಿ ಬಸ್ಗಳು ಓಡಾಟ ನಡೆಸಲಿಲ್ಲ.
ಬಂದ್ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಹೆಚ್ಚುವರಿ ಪೊಲೀಸ್ ನಿಯೊಜನೆ ಮಾಡಲಾಗಿತ್ತು.
ಕಾಂಗ್ರೆಸ್ ವತಿಯಿಂದ ಮೆರವಣಿಗೆ
ಬಂದ್ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ವತಿಯಿಂದ ಸುಳ್ಯ ನಗರದಲ್ಲಿ ಮೆರವಣಿಗೆ ನಡೆಯಿತು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಬಾಗಿಲು ತೆರೆದಿದ್ದ ಅಂಗಡಿಗಳ ವಿರುದ್ಧವೂ ಧಿಕ್ಕಾರ ಕೂಗಿದರು. ಬಳಿಕ ಪ್ರತಿಭಟನಾ ಸಭೆ ನಡೆಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.