ಬೆಳ್ತಂಗಡಿ: ಮೂಲತಃ ಜೆಡಿಎಸ್ ಕಾರ್ಯಕರ್ತರಾಗಿದ್ದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬಂದು ಪಟ್ಟಣ ಪಂ. ಅಧ್ಯಕ್ಷ ಸ್ಥಾನವನ್ನಲಂಕರಿಸಿದ್ದ ಮುಗುಳಿ ನಾರಾಯಣ ರಾವ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ರಾಜಕೀಯದಲ್ಲಿದ್ದ ಮುಗುಳಿ ಅವರು ಮಾಜಿ ಶಾಸಕ ವಸಂತ ಬಂಗೇರ ಅವರ ಪರಮಾಪ್ತರಲ್ಲೊಬ್ಬರಾಗಿದ್ದರು. ಬಂಗೇರ ಅವರು ಜೆಡಿಎಸ್ನಲ್ಲಿದ್ದಾಗ ಅವರನ್ನು ಅನುಸರಿಸಿ ಮುಗುಳೀ ಅವರು ಜೆಡಿಎಸ್ ನಲ್ಲಿದ್ದರು. ಬಳಿಕ ಬಂಗೇರ ಅವರು ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದಾಗ ಅವರ ಹಿಂದೆ ಮುಗುಳಿಯವರು ಕೂಡ ಪಕ್ಷಾಂತರ ಮಾಡಿದ್ದರು. ನಂತರ ಸುಮಾರು ಹತ್ತು ವರ್ಷಗಳ ಕಾಲ ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಸದಸ್ಯರಾಗಿದ್ದು, ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಂಗೇರ ಅವರ ಗಳಸ್ಯಕಂಠಸ್ಯರಾಗಿದ್ದ ಮುಗುಳಿ ಅವರ ಈ ಅಚ್ಚರಿಯ ನಡೆ ಬೆಳ್ತಂಗಡಿ ನಗರದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ನಾರಾಯಣ ರಾವ್ ಅವರು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರಾದರೂ ತಾಲೂಕಿನ ಹಿರಿಯ ನಾಯಕರ ನಡವಳಿಕೆ ಹಾಗು ಆರೋಪಗಳಿಂದ ನೊಂದು ರಾಜೀನಾಮೆ ಕೊಡುವ ಹಂತಕ್ಕೆ ತಲುಪಿದ್ದರು. ಆದರೂ ಕಾದು ನೋಡುವ ತಂತ್ರವನ್ನು ಅನುಸರಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಪ.ಪಂ. ಅವಧಿ ಸೆ. 10ರಂದು ಮುಗಿದಿದ್ದು ಅವರ ಅಧ್ಯಕ್ಷ ಅಧಿಕಾರಾವಧಿಯೂ ಕೊನೆಗೊಂಡಿದೆ.
ತಾನು ವೈಯಕ್ತಿಕ ಕಾರಣಗಳಿಗಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಒಕ್ಕಣೆಯ ರಾಜೀನಾಮೆ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ರಾಜಶೇಖರ ಅಜ್ರಿ ಅವರಿಗೆ ಅವರಿಗೆ ರವಾನಿಸಿದ್ದಾರೆ. ಇವರು ರಾಜೀನಾಮೆ ನೀಡುತ್ತಿರುವ ವಿಚಾರ ಪ.ಪಂ.ಸದಸ್ಯರರಾಗಿಗೂ ಗೊತ್ತಿರಲಿಲ್ಲ.
ಈ ಬಗ್ಗೆ ಅವರ ಮುಂದಿನ ನಡೆಯನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಸದ್ಯದ ಮಟ್ಟಿಗೆ ಯಾವುದೇ ಪಕ್ಷವನ್ನು ಸೇರುವ ಆಲೋಚನೆ ಇಲ್ಲ. ಮುಂದೆ ನಡೆಯುವ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 5, 3 ಅಥವಾ 11 ನೇ ವಾರ್ಡಿನಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವ ಇಚ್ಚೆಯನ್ನು ಹೊಂದಿದ್ದೇನೆ. ವಿಧಾನಸಭಾ ಚುನಾವಣಾ ಸಂದರ್ಭ ಪಕ್ಷದ ನಾಯಕರ ನಡವಳಿಕೆಯಿಂದ ನೊಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳಲು ಸಿದ್ದ ಎಂದರು.