ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿಯಲ್ಲಿ ಟ್ಯಾಂಕರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಇಂದು ಮಧ್ಯಾಹ್ನ ನಡೆದಿದೆ. ಉಡುಪಿಯ ನೀಜಾರಿನ ನಿವಾಸಿ ಜಯರಾಜ್ (55) ಮೃತಪಟ್ಟಿದ್ದು, ಟ್ಯಾಂಕರ್ ಚಾಲಕ ಬೆಂಗಳೂರಿನ ಗುರುಗುಂಟೆ ಪಾಳ್ಯ ನಿವಾಸಿ ಮೋಹನ್ ರಾಜ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟ್ಯಾಂಕರ್ ನವಮಂಗಳೂರು ಬಂದರಿನಿಂದ ಶ್ರೀರಂಗಪಟ್ಟಣಕ್ಕೆ ಪಾಮ್ ಆಯಿಲ್ ಕೊಂಡೊಯ್ಯುತ್ತಿತ್ತು. ಪಡುಬಿದ್ರೆ, ಕುದುರುಮುಖ, ಶೃಂಗೇರಿ ಮಾರ್ಗವಾಗಿ ತೆರಳಬೇಕಿದ್ದ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಜಯರಾಜ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಮರಳಿದ್ದರು. ಪಕ್ಷಿಕರೆ ಮನೆಯೊಂದರ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.