ಸುಳ್ಯ: ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿಯಲ್ಲಿ ಭೀಕರ ಭೂಕುಸಿತ ಮತ್ತು ಜಲಪ್ರಳಯ ಉಂಟಾಗಿ ತಿಂಗಳಾದರೂ ಮನೆ, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ತರಾದ 64 ಕುಟುಂಬಗಳ 209 ಮಂದಿ ತಮ್ಮ ಮನೆಗೆ ಮರಳಲಾಗದೆ ಇನ್ನೂ ಪರಿಹಾರ ಕೇಂದ್ರಗಳಲ್ಲಿಯೇ ಉಳಿದಿದ್ದಾರೆ.
ಕೊಡಗು ಸಂಪಾಜೆ ಆರೋಗ್ಯ ಕೇಂದದ್ರ ಹಳೆಯ ಕಟ್ಟಡದಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ 42 ಕುಟುಂಗಳ 125 ಮಂದಿ ಮತ್ತು ಕಲ್ಲುಗುಂಡಿಯಲ್ಲಿ 22 ಕುಟುಂಬಗಳ 84 ಮಂದಿ ಇದ್ದಾರೆ. ಮನೆ ಕಳೆದುಕೊಂಡ ಮತ್ತು ಅಪಾಯದ ಸ್ಥಿತಿ ಇರುವ ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಪ್ರದೇಶದ ಜನರು ಈಗ ಕೇಂದ್ರದಲ್ಲಿದ್ದಾರೆ. ಎಷ್ಟು ದಿನ ಇಲ್ಲಿ ಇರುವುದು, ಇಲ್ಲಿಂದ ಹೋಗುವುದಾದರು ಎಲ್ಲಿಗೆ ಎಂಬುದು ಇವರನ್ನು ಕಾಡುವ ಪ್ರಶ್ನೆ. ಆದುದರಿಂದ ನಮಗೆ ಶೀಘ್ರವೇ ಒಂದು ಶಾಶ್ವತ ನೆಲೆ ಒದಗಿಸಿ ಕೊಡಿ ಎಂಬುದು ಸರ್ಕಾರದ ಮುಂದೆ ಇವರ ಒಕ್ಕೊರಲ ಬೇಡಿಕೆ. ಮನೆ ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿ, ಬಾಡಿಗೆ ಮನೆಗಳಲ್ಲಿಯೂ ಹಲವು ಕುಟುಂಬಗಳು ಉಳಿದಿದ್ದಾರೆ.
ಉಚಿತ ಬಸ್ ಪಾಸ್ ನೀಡಿ: ಸಾಲ ಮನ್ನಾ ಮಾಡಿ..
ಪರಿಹಾರ ಕೇಂದ್ರಗಳಲ್ಲಿ ಇರುವ ಜನರಿಗೆ ಎಲ್ಲವೂ ನಷ್ಟವಾಗಿದ್ದು ಕೈಯೆಲ್ಲ ಖಾಲಿಯಾಗಿದೆ. ಪರಿಹಾರ ಕೇಂದ್ರಗಳಿಂದ ತಮ್ಮ ಸ್ಥಳ, ಮನೆಗಳಿಗೆ ಹೋಗಿ ಬರಲು ಕೂಡ ಹಣವಿಲ್ಲದ ಸ್ಥಿತಿ. ಸರ್ಕಾರದ ವತಿಯಿಂದ 3800 ರೂ ಸಿಕ್ಕಿದ್ದರೂ ವಿವಿಧ ಅಗತ್ಯತೆಗಳಿಂದ ಅದೆಲ್ಲವೂ ಖಾಲಿಯಾಗಿದೆ. ಒಮ್ಮೆ ಹೋಗಿ ಬರುವುದಕ್ಕೂ ನೂರಕ್ಕೂ ಅಧಿಕ ರೂ ಖರ್ಚು ತಗುಲುತ್ತದೆ. ಆದುದರಿಂದ 40 ಕಿಮಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಓಡಾಡಲು ರಾಜ್ಯ ಸಾರಿಗೆ ಬಸ್ನಲ್ಲಿ ಬಸ್ ಪಾಸ್ ವ್ಯವಸ್ಥೆ ಒದಗಿಸಬೇಕು ಎಂದು ಕೇಂದ್ರದಲ್ಲಿರುವವರು ಬೇಡಿಕೆ ಸಲ್ಲಿಸಿದ್ದಾರೆ. ಅಲ್ಲದೆ ಕನಿಷ್ಠ ಒಂದು ವರ್ಷಗಳ ಕಾಲ ಉಚಿತ ಪಡಿತರ, ಚಿಕಿತ್ಸೆ ಮತ್ತು ಪಿಂಚಣಿಯನ್ನು ನೀಡಬೇಕು ಎಂದು ಇವರು ಆಗ್ರಹಿಸುತ್ತಾರೆ.
ಬ್ಯಾಂಕ್ ಮತ್ತಿತರ ಸಂಘಗಳಿಂದ ಪಡೆದ ಸಾಲಗಳನ್ನು ಸರಿಯಾಗಿ ಮರುಪಾವತಿ ಮಾಡಿದ್ದೇವೆ. ಆದರೆ ಈಗ ಕಟ್ಟಲು ಯಾವುದೇ ದಾರಿಯಿಲ್ಲ. ಈಗ ಎಲ್ಲವೂ ನಷ್ಟವಾಗಿ ಸಾಲ ಮರು ಪಾವತಿ ಸಾಧ್ಯವಿಲ್ಲದಂತಾಗಿರುವುದು ದಿಗ್ಭ್ರಮೆ ಸೃಷ್ಠಿಸಿದೆ. ತಿಂಗಳಿನಿಂದ ಕೆಲಸವೂ ಇಲ್ಲದಾಗಿದೆ ಎಂಬುದು ಸಂಪಾಜೆ ಕೇಂದ್ರದಲ್ಲಿರುವ ಮಹಿಳೆಯರೂ ಸೇರಿದಂತೆ ಸಂತ್ರಸ್ತರು ಹೇಳುತ್ತಾರೆ. ಆದುದರಿಂದ ಎಲ್ಲಾ ಬ್ಯಾಂಕ್ಗಳಿಂದ ಮತ್ತು ಸಂಘಗಳಿಂದ ಸಂತ್ರಸ್ತರು ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ಇವರ ಬೇಡಿಕೆ.
ಸಹಜ ಸ್ಥಿತಿಗೆ ಬಾರದ ಗ್ರಾಮಗಳು:
ಆ.17 ರಂದು ನಡೆದ ಭೀಕರ ಜಲ ಪ್ರಳಯ, ಭೂ ಕುಸಿತ ನಡೆದು ಹರಿದು ಹಂಚಿ ಹೋದ ಜೋಡುಪಾಲ, ಎರಡನೇ ಮೊಣ್ಣಂಗೇರಿ ಗ್ರಾಮಗಳ ಜನತೆಯ ಬದುಕು ಇನ್ನೂ ಜೋಡಿಸಲಾಗಿಲ್ಲ. ಭೂ ಸಮಾದಿಯಾಗಿ ಕುರುಹೇ ಇಲ್ಲದೆ ನಾಶವಾಗಿರುವ ಮನೆಗಳು, ಕೊಚ್ಚಿಹೋಗಿ ನಾಮಾವಶೇಷವಾಗಿರುವ ಕೃಷಿ ಭೂಮಿಗಳು. ಹೀಗೆ ಎಲ್ಲವನ್ನೂ ಕಳೆದುಕೊಂಡ ಜೋಡುಪಾಲ, ಮೊಣ್ಣಂಗೇರಿ ಪ್ರದೇಶಗಳಲ್ಲಿ ಈಗ ಆವರಿಸಿರುವುದು ನೀರವ ಮೌನ ಮತ್ತು ಕಟ್ಟೆಯೊಡೆದ ದುಃಖ ಮಾತ್ರ.
ಎರಡನೇ ಮೊಣ್ಣಂಗೇರಿಗೆ ಬೆಟ್ಟಗಳು ಸ್ಫೋಟಗೊಂಡು ಜಲಪ್ರಳಯ ಸೃಷ್ಠಿಯಾಗಿರುವುದರ ಜೊತೆಗೆ, ಕುಸಿದು ಹರಿದು ಬಂದಿದೆ. ಇದರಿಂದ ಇಡೀ ಗ್ರಾಮವೇ ನಾಶವಾಗಿದೆ. ಸುಮಾರು ಇನ್ನೂರಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು. ಇದರಲ್ಲಿ ಹತ್ತಾರು ಮನೆಗಳು ನಾಮಾವಶೇಷವಾಗಿದೆ. ಹಲವಾರು ಮನೆಗಳು ವಾಸಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಹಾನಿಯಾಗಿದೆ. ಹೆಕ್ಟೇರು ಗಟ್ಟಲೆ ಅಡಕೆ, ತೆಂಗಿನ ತೋಟಗಳು ಕೊಚ್ಚಿ ಹೋಗಿದೆ. ಗದ್ದೆಗಳು ಮರುಭೂಮಿಯಂತಾಗಿದೆ. ಇದ್ದ ಅಲ್ಪ ಸ್ವಲ್ಪ ಕೃಷಿ ಆದಾಯಗಳೆಲ್ಲ ನಾಶವಾಗಿದೆ. ಇಡೀ ಗ್ರಾಮವೇ ಪರಿಹಾರ ಕೇಂದ್ರಗಲ್ಲಿ ಕಳೆಯುವಂತಾಗಿದೆ.
ಎರಡನೇ ಮೊಣ್ಣಂಗೇರಿಗೆ ಬೆಟ್ಟಗಳು ಸ್ಫೋಟಗೊಂಡು ಜಲಪ್ರಳಯ ಸೃಷ್ಠಿಯಾಗಿರುವುದರ ಜೊತೆಗೆ, ಕುಸಿದು ಹರಿದು ಬಂದಿದೆ. ಇದರಿಂದ ಇಡೀ ಗ್ರಾಮವೇ ನಾಶವಾಗಿದೆ. ಸುಮಾರು ಇನ್ನೂರಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದವು. ಇದರಲ್ಲಿ ಹತ್ತಾರು ಮನೆಗಳು ನಾಮಾವಶೇಷವಾಗಿದೆ. ಹಲವಾರು ಮನೆಗಳು ವಾಸಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಹಾನಿಯಾಗಿದೆ. ಹೆಕ್ಟೇರು ಗಟ್ಟಲೆ ಅಡಕೆ, ತೆಂಗಿನ ತೋಟಗಳು ಕೊಚ್ಚಿ ಹೋಗಿದೆ. ಗದ್ದೆಗಳು ಮರುಭೂಮಿಯಂತಾಗಿದೆ. ಇದ್ದ ಅಲ್ಪ ಸ್ವಲ್ಪ ಕೃಷಿ ಆದಾಯಗಳೆಲ್ಲ ನಾಶವಾಗಿದೆ. ಇಡೀ ಗ್ರಾಮವೇ ಪರಿಹಾರ ಕೇಂದ್ರಗಲ್ಲಿ ಕಳೆಯುವಂತಾಗಿದೆ.
ಪತ್ತೆಯಾಗದ ಮಂಜುಳಾ
ದುರಂತದಲ್ಲಿ ಜೋಡುಪಾಲದ ಬಸಪ್ಪ, ಪತ್ನಿ ಗೌರಮ್ಮ ಪುತ್ರಿ ಮೋನಿಶಾ ಮತ್ತು ಗೌರಮ್ಮನ ಸಹೋದರನ ಮಗಳು ಮಂಜುಳ ನಾಪತ್ತೆಯಾಗಿದ್ದರು. ಬಳಿಕ ನಡೆಸಿದ ಶೋಧ ಕಾರ್ಯದಲ್ಲಿ ಬಸಪ್ಪ, ಗೌರಮ್ಮ ಮತ್ತು ಮೋನಿಶಾ ಮೃತದೇಹ ಪತ್ತೆಯಾಗಿತ್ತು. ಆದರೆ ಘಟನೆ ನಡೆದು ಒಂದು ತಿಂಗಳಾದರೂ ಮಂಜುಳಾ ಪತ್ತೆಯಾಗಿಲ್ಲ.