ಸುಳ್ಯ: ಅಡಕೆಗೆ ಕೊಳೆ ರೋಗ ಬಾದಿಸಿ ಫಸಲು ನಷ್ಟ ಹೊಂದಿದ ಕೃಷಿಕರಿಗೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ಸಭೆಯಲ್ಲಿ ಒತ್ತಾಯಿಸಲಾಯಿತು.
ಸುಳ್ಯ ಎಪಿಎಂಸಿ ಸಭಾಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕೊಳೆರೋಗ ಪರಿಹಾರ ತಕ್ಷಣ ನೀಡಬೇಕು, ಹಿಂದಿನ ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿದ್ದ ಒಂದು ಲಕ್ಷ ಸಾಲ ಮನ್ನಾ ಯೋಜನೆ ಎಲ್ಲ ರೈತರಿಗೆ ನೀಡಬೇಕು. ಅಡಕೆ ಬೆಳೆ ನಷ್ಟ ಪರಿಣಾಮ ರೈತರಿಗೆ ಈ ವರ್ಷ ಸಾಲ ಮರುಪಾವತಿ ಸಾಧ್ಯವಿಲ್ಲ. ಆದುದರಿಂದ ಬೆಳೆ ಸಾಲದ 2018-19ನೇ ಸಾಲಿನ ನವೀಕರಣ ಪ್ರಕ್ರಿಯೆ ಒಂದು ವರ್ಷ ಮುಂದೂಡಬೇಕು ಹಾಗೂ ದೀರ್ಘಾವಧಿ ಸಾಲಗಳ ಅವಧಿ ಬಡ್ಡಿ ಮನ್ನಾ ಮಾಡಿ ಒಂದು ವರ್ಷ ಮುಂದೂಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟಗಳ ಸಮಗ್ರ ಚರ್ಚೆ ನಡೆಸಿ ಕೃಷಿಕರ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಕೂಡಲೇ ಪರಿಹರಿಸಲು ಒತ್ತಾಯಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಬೇಡಿಕೆಗಳನ್ನು ನಿಯೋಗ ತೆರಳಿ ಸಹಕಾರ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತೀರ್ಮಾನಿಸಲಾಯಿತು. ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಎಂ.ಡಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ಅಣ್ಣಾ ವಿನಯಚಂದ್ರ, ಎಂ.ಬಿ.ಸದಾಶಿವ, ಜಾಕೆ ಮಾಧವ ಗೌಡ, ಎ.ವಿ.ತೀರ್ಥರಾಮ, ಎಂ.ಜಿ.ಸತ್ಯನಾರಾಯಣ, ಕೆ.ವಿಶ್ವನಾಥ್ ರಾವ್, ಡಿ.ಎಸ್.ಗಿರೀಶ್, ಕೆ.ಸಿ.ನಾರಾಯಣ ಗೌಡ, ಎನ್.ಜಿ.ಲೋಕನಾಥ್ ರೈ, ಎಸ್.ಎಂ.ಬಾಪೂ ಸಾಹೇಬ್, ಬಾಲಗೋಪಾಲ ಸೇರ್ಕಜೆ, ಕೆ.ಪಿ.ಜಗದೀಶ್, ಸೋಮಶೇಖರ್ ಕೇವಳ ಉಪಸ್ಥಿತರಿದ್ದರು.