News Kannada
Friday, September 30 2022

ಕರಾವಳಿ

ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ: ಖಾದರ್ ರಾಜೀನಾಮೆಗೆ ಒತ್ತಾಯ - 1 min read

Photo Credit :

ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ: ಖಾದರ್ ರಾಜೀನಾಮೆಗೆ ಒತ್ತಾಯ

ಉಳ್ಳಾಲ: ಮಂಗಳೂರಿನಲ್ಲಿ ಮೀನು, ತರಕಾರಿ ಹಾಗೂ ಬಸ್ಸು ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿದ್ದರೂ, ಒಂದು ಸಮುದಾಯವನ್ನು ತುಷ್ಠೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿಗಾಗಿ ನೀಡಿರುವ ಅನುದಾನದಲ್ಲಿ ರೂ. 15 ಕೋಟಿ ಯನ್ನು ಕುದ್ರೋಳಿ ಕಸಾಯಿಖಾನೆಗೆ ನೀಡಿರುವುದು ಖಂಡನೀಯ. ಈ ಕೂಡಲೇ ಸಚಿವ ಸ್ಥಾನಕ್ಕೆ ಯು.ಟಿ.ಖಾದರ್ ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ರೂ. 15 ಕೋಟಿಯನ್ನು ಕುದ್ರೋಳಿ ಕಸಾಯಿಖಾನೆಗೆ ಅನುದಾನ ಇಟ್ಟ ವಿರುದ್ಧ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ತೊಕ್ಕೊಟ್ಟು ಫ್ಲೈಓವರ್ ನಡಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಡಿಬಿ ಸ್ಕೀಂನಡಿ ಅನುದಾನವಿದ್ದರೂ ತೊಕ್ಕೊಟ್ಟು -ಉಳ್ಳಾಲದಲ್ಲಿ 27 ವರ್ಷಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಜಾರಿಯಾಗಿಲ್ಲ. ಕಸಾಯಿಖಾನೆಗೆ ಅನುದಾನ ಮಂಜೂರು ಮಾಡುವ ಮೂಲಕ ಹೈಜಿನಿಕ್ ವ್ಯವಸ್ಥೆ , ಉತ್ತಮ ಆರೋಗ್ಯ ಎನ್ನುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನ ಬಸ್ಸು ನಿಲ್ದಾಣ ನಾದುರಸ್ತಿಯಾಗಿ 25 ವರ್ಷಗಳೇ ಕಳೆದಿವೆ. ಮೀನು ತರಕಾರಿ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದ್ದರೂ ಸಚಿವರಿಗೆ ಕೇವಲ ಕಸಾಯಿಖಾನೆ ಮಾತ್ರ ಕಂಡಿದೆ. ಕಸಾಯಿಖಾನೆ ಅಭಿವೃದ್ಧಿಗೊಳಿಸುವ ಮೂಲಕ ಜಾನುವಾರು ಕಳ್ಳರಿಗೆ , ಕಡಿಯುವವರಿಗೆ ಬೆಂಬಲಿಸುವ ಕೆಲಸವಾಗಿದೆ. ಈ ಕೂಡಲೇ ಸಚಿವ ಯು.ಟಿ.ಖಾದರ್ ರಾಜೀನಾಮೆ ನೀಡಬೇಕು. ಉಳ್ಳಾಲದಲ್ಲಿ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, 25 ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಅದನ್ನು ಬಿಟ್ಟು ಬೇರೆಡೆ ಹೋಗಿ ಚರ್ಚೆ, ಹಾಡು ಹಾಡುತ್ತಿರುವಂತಹ ಶಾಸಕರು ಉಳ್ಳಾಲಕ್ಕೆ ಅಗತ್ಯವಿಲ್ಲ. ಮೋದಿಯವರನ್ನು ಬೈದವರು ಅವರು ನೀಡಿದ ಅನುದಾನವನ್ನು ದುರುಪಯೋಗಪಡಿಸುತ್ತಿದ್ದಾರೆ. 27 ವರ್ಷಗಳಿಂದ ಅಪ್ಪ-ಮಗನ ಆಡಳಿತದಡಿ ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಪೂರೈಸಲು ಅಸಾಧ್ಯವಾಗಿದೆ. ಒಂಭತ್ತುಕೆರೆಯ 350 ಆಶ್ರಯ ಯೋಜನೆ ಮನೆಗಳು ಈಗಲೂ ಪಾಳುಬಿದ್ದಿವೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮಾತನಾಡಿ, ಹಟ್ಟಿಗೆ ನುಗ್ಗಿ ಮನೆಮಂದಿಯನ್ನು ಬೆದರಿಸಿ, ಜಾನುವಾರುಗಳನ್ನು ಕಳವುಗೈದು ಕಸಾಯಿಖಾನೆಗೆ ಸಾಗಿಸುವಂತಹ ಕೆಲಸ ಜಿಲ್ಲೆಯಾದ್ಯಂತ ನಡೆಯುತ್ತಿದ್ದರೂ, ಸಚಿವರು ಒಂದು ಸಮುದಾಯವನ್ನು ತುಷ್ಠೀಕರಣಗೊಳಿಸುವ ಸಲುವಾಗಿ ಅನುದಾನವನ್ನು ಅದೇ ಕಸಾಯಿಖಾನೆಗೆ ಮೀಸಲಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಅನುದಾನವನ್ನು ಮಂಜೂರುಗೊಳಿಸುವ ಮುನ್ನ ಮನಪಾ ಮೇಯರ್, ವಿಪಕ್ಷ ನಾಯಕರು, 5 ಅಧಿಕಾರಿಗಳು ಸೇರಿ ಸಮಿತಿ ರಚಿಸಿ ಚರ್ಚಿಸಿ ಜಾರಿಗೊಳಿಸಬೇಕಿತ್ತು. ಶೇ.10 ಪರ್ಸೆಂಟ್ ಸರಕಾರದ ಸಚಿವರಾಗಿರುವ ಇವರು ಏಕಾಏಕಿ 40 ಸೆಂಟ್ಸ್ ಜಾಗದಲ್ಲಿರುವ ಕಸಾಯಿಖಾನೆಗೆ 15 ಕೋಟಿ ಮಂಜೂರುಗೊಳಿಸಿರುವುದು ಯಾವ ನ್ಯಾಯ?. ಕಮೀಷನ್‍ಗಾಗಿ ತಮ್ಮದೇ ಗುತ್ತಿಗೆದಾರನಿಗೆ ಕಸಾಯಿಖಾನೆ ಅಭಿವೃದ್ಧಿಯ ಗುತ್ತಿಗೆಯನ್ನು ನೀಡುವುದು ಸ್ಪಷ್ಟ. ರಾಜ್ಯದಲ್ಲಿ ಅಪ್ಪ-ಮಕ್ಕಳ ಕಳ್ಳ ಸರಕಾರವಿದ್ದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರ ಕಾಟಾಚಾರದ ಸರಕಾರ ಆಡಳಿತ ನಡೆಸುತ್ತಿದೆ. ಉಳ್ಳಾಲ ದುರ್ವಾಸನೆಯಿಂದ ಕೂಡಿದೆ ಮಳೆ ಬಂದಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಯೋಜನೆ ಅನುಷ್ಠಾನಗೊಳಿಸಿದಲ್ಲಿ ಸಚಿವರ ಮನೆ ಮುಂದೆ ಕುಳಿತು ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

See also  ಇಂಧನ ಸಚಿವರಿಗೆ ದೂರವಾಣಿ ಮೂಲಕ ನಿಂದನೆ ಆರೋಪ: ವ್ಯಕ್ತಿಯ ಬಂಧನ

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ರಾಜೀವಿ ಕೆಂಪುಮಣ್ಣು, ಲಲಿತಾ ಸುಂದರ್, ಮೋಹನದಾಸ್ ಶೆಟ್ಟಿ ಕಿನ್ಯಾ, ಹರಿಯಪ್ಪ ಸಾಲ್ಯಾನ್, ಜಯಶ್ರೀ ಕರ್ಕೇರ, ಪ್ರಕಾಶ್ ಸಿಂಫೋನಿ, ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ, ತಲಪಾಡಿ ಗ್ರಾ. ಪಂ ಅಧ್ಯಕ್ಷ ಸುರೇಶ್ ಆಳ್ವ, ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸೊಳ್ಳೆಂಜೀರು, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ ಶೆಟ್ಟಿ ಹೇಮಂತ್ ಶೆಟ್ಟಿ, ರಾಜೇಶ್ ಶೆಟ್ಟಿ ಪಜೀರುಗುತ್ತು ಉಪಸ್ಥಿತರಿದ್ದರು.
ಮಂಗಳೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್ ಕಾರ್ಯಕ್ರಮ ನಿರೂಪಿಸಿದರು. ಮನೋಜ್ ಆಚಾರ್ಯ ವಂದಿಸಿದರು.

ಸಚಿವ ಝಮೀರ್ ಗೆ ಶ್ಲಾಘನೆ : ಮಂಜನಾಡಿ ಅಲ್ ಮದೀನಾ ಶಾಲೆಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವಕ್ಫ್ ಸಚಿವ ಝಮೀರ್ ಅಹಮ್ಮದ್ ಖಾನ್ ಅವರು ಪ್ರತಿಭಟನಾ ಸಭೆ ಎದುರಿನಲ್ಲೇ ಮಂಗಳೂರಿಗೆ ವಾಪಸ್ಸಾದರು. ಈ ವೇಳೆ ಪ್ರತಿಭಟನಾಕಾರರಿಗೆ ಕಾರಿನ ಒಳಗಡೆಯಿಂದಲೇ ಕೈ ತೋರಿಸಿದ ಸಚಿವರ ನಡೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ ಶ್ಲಾಘಿಸಿದರು. ಸಚಿವ ಖಾದರ್ ಅವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ನೋಡಿ ಸಚಿವ ಝಮೀರ್ ಅವರಿಗೆ ಖುಷಿಯಾಗಿದೆ. ಅದಕ್ಕಾಗಿ ಅವರು ಕಾರು ನಿಲ್ಲಿಸಿ ಬಿಜೆಪಿಯವರಿಗೆ ಅಭಿನಂದನೆ ಸಲ್ಲಿಸಿದರು ಎಂದು ಭಾಷಣದಲ್ಲಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

184
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು