ಮಂಗಳೂರು: ಬಂಟ್ವಾಳದ ಸಜೀಪನಡುವಿನಲ್ಲಿ ಎಚ್ 1ಎನ್ 1 ನಿಂದ ನಾಲ್ಕು ಮಂದಿ ಮೃತಪಟ್ಟಿರಬಹುದು ಎಂಬ ಶಂಕೆಯಿದ್ದು, ತಜ್ಞ ವೈದ್ಯರ ತಂಡದ ವರದಿಯ ಬಳಿಕ ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ರಾಮಕೃಷ್ಣ ರಾವ್ ಹೇಳಿದರು.
ತನ್ನ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಈವರೆಗೆ ಎಚ್1ಎನ್1 ಸೋಂಕಿತ ಸುಮಾರು 359 ಮಂದಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 29 ಮಂದಿಗೆ ರೋಗದ ಅಂಶ ಇರುವುದು ಬೆಳಕಿಗೆ ಬಂದಿದೆ ಎಂದರು.
ಎಚ್1ಎನ್1 ಶಂಕೆ ಇರುವ ಮಂಗಳೂರಿನ 260, ಬಂಟ್ವಾಳದ 37, ಪುತ್ತೂರಿನ 22, ಬೆಳ್ತಂಗಡಿಯ 34, ಸುಳ್ಯದ 6 ಮಂದಿಯ ತಪಾಸಣೆ ನಡೆಸಲಾಗಿದೆ. ಇದರಲ್ಲಿ ಮಂಗಳೂರಿನಲ್ಲೇ 26 ಮಂದಿಗೆ ಸೋಂಕು ಕಂಡುಬಂದಿದೆ. ಬಂಟ್ವಾಳದ್ಲಲಿ 2, ಪುತ್ತೂರಿನಲ್ಲಿ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಸೋಂಕು ತಗುಲಿದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 23 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈಕೈ ನೋವು, ಚಳಿ ಮತ್ತು ಸುಸ್ತು ಇತ್ಯಾದಿ ಎಚ್1ಎನ್1 ಲಕ್ಷಣಗಳು. ಕೆಮ್ಮಿದಾಗ ಅಥವಾ ಸೀನಿದಾಗ ವೈರಸ್ ಹರಡುವುದು. ಇದರ ಬಗ್ಗೆ ಎಚ್ಚರ ವಹಿಸಬೇಕು. ಕೈಗಳನ್ನು ಆಗಾಗ ತೊಳೆಯುತ್ತಿರಬೇಕು. ಜನರ ಗುಂಪಿನಿಂದ ದೂರವಿರಬೇಕು. ಕಣ್ಣು, ಮೂಗು, ಬಾಯಿಯನ್ನು ಆಗಾಗ ಮುಟ್ಟಬಾರದು ಎಂದು ಅವರು ಮುನ್ನೆಚ್ಚರಿಕೆ ಬಗ್ಗೆ ತಿಳಿಸಿದರು.